ಬೆಂಗಳೂರು : ತವರಿನಾಚೆ ಎರಡು ಅಮೋಘ ಗೆಲುವುಗಳನ್ನು ಸಾಧಿಸಿ 2025ರ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್‌ಸಿಬಿ, ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲು ಕಾತರಿಸುತ್ತಿದೆ. ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲು ಸಜ್ಜಾಗಿರುವ ಆರ್‌ಸಿಬಿ, ಹ್ಯಾಟ್ರಿಕ್ ಜಯದ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯುವ ಗುರಿ ಹಾಕಿಕೊಂಡಿದೆ.
ಆರಂಭದಲ್ಲಿ ಆರ್‌ಸಿಬಿಗೆ ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಹೆಚ್ಚು ದಿನಗಳ ಸಮಯವಿದ್ದರೂ, ಟೂರ್ನಿ ಸಾಗಿದಂತೆ ದಿನಗಳ ನಡುವಿನ ಅಂತರ ಕಡಿಮೆಯಾಗಲಿದೆ. ಒಂದು ಹಂತದಲ್ಲಿ 22 ದಿನಗಳಲ್ಲಿ 7 ಸಲ ಪ್ರಯಾಣಿಸಿ 7 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ, ಆರಂಭಿಕ ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯ ಒತ್ತಡ ತನ್ನ ಮೇಲೆ ಬೀಳದಂತೆ ನೋಡಿಕೊಳ್ಳುವುದು ಆರ್‌ಸಿಬಿ ಮುಂದಿರುವ ಗುರಿ.
ಹಿಂದಿನ ಆವೃತ್ತಿಗಿಂತ ಹೆಚ್ಚು ಸಮತೋಲಿತವಾಗಿ ಕಾಣುತ್ತಿರುವ ಆರ್‌ಸಿಬಿ ಈ ಬಾರಿ ತನ್ನ ಆಟಗಾರರಿಗೆ ಅವರವರ ಪಾತ್ರದ ಬಗ್ಗೆ ಸಂಪೂರ್ಣವಾಗಿ ಮನದಟ್ಟು ಮಾಡಿಸಿದಂತಿದೆ. ಕಳೆದ ಪಂದ್ಯದಲ್ಲಿ ದೇವ್‌ದತ್ ಪಡಿಕ್ಕಲ್ ಆಡಿದ ರೀತಿ ತಂಡದ ಉದ್ದೇಶವನ್ನು ಬಹಿರಂಗಪಡಿಸಿತು. ಚೆಪಾಕ್‌ನ ಪಿಚ್‌ನಲ್ಲಿ ರನ್ ಗಳಿಸಲು ಕಷ್ಟಪಟ್ಟಿದ್ದ ವಿರಾಟ್ ಕೊಹ್ಲಿ, ತಮ್ಮ ನೆಚ್ಚಿನ ಅಂಗಳದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಜತ್ ಪಾಟೀದಾರ್ ತಮ್ಮ ಬ್ಯಾಟಿಂಗ್ ಅಬ್ಬರದ ಜೊತೆ ನಾಯಕತ್ವದಲ್ಲೂ ಫುಲ್ ಮಾರ್ಕ್ಸ್ ಪಡೆಯುತ್ತಿದ್ದಾರೆ. ಸಾಲ್ಟ್, ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಪೈಕಿ ಯಾರೊಬ್ಬರು ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಂತರೂ, ಚೆಂಡು ಅದೆಷ್ಟು ಬಾರಿ ಪಕ್ಕದ ಕಬ್ಬನ್ ಪಾರ್ಕ್‌ಗೆ ಹೋಗಿ ಬೀಳುತ್ತದೆಯೋ?.
ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಬದಲು ವೇಗಿ ರಸಿಖ್ ಸಲಾಂ ಅಥವಾ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್‌ರನ್ನು ಆಡಿಸಬಹುದು. ಉಳಿದಂತೆ ಇನ್ಯಾವ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಕಂಡು ಬರುತ್ತಿಲ್ಲ.
ಮತ್ತೊಂದೆಡೆ ಗುಜರಾತ್ ಕೆಲ ಪ್ರಮುಖ ಆಟಗಾರರ ಮೇಲೆ ಹೆಚ್ಚು ಅವಲಂಬಿತಗೊಂಡಂತೆ ಕಾಣಿಸುತ್ತಿದೆ. ಶುಭ್‌ಮನ್ ಗಿಲ್, ಜೋಸ್ ಬಟ್ಲರ್, ರಶೀದ್ ಖಾನ್ ನಿರ್ಣಾಯಕ ಪಾತ್ರ ವಹಿಸಬೇಕಿದೆ. ಸಾಯಿ ಸುದರ್ಶನ್ ಕಳೆದ ಪಂದ್ಯದ ವೇಳೆ ಗಾಯಗೊಂಡಿದ್ದರು. ಅವರು ಈ ಪಂದ್ಯದಲ್ಲಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ. ಕರ್ನಾಟಕದ ಪ್ರಸಿದ್ಧ್ ಕೃಷ್ಣ ತವರಿನಂಗಳದಲ್ಲಿ ಆರ್‌ಸಿಬಿಗೆ ಆಘಾತ ನೀಡಲು ಕಾತರಿಸುತ್ತಿದ್ದಾರೆ. 7 ವರ್ಷ ಆರ್‌ಸಿಬಿಯಲ್ಲಿದ್ದ ಮೊಹಮದ್ ಸಿರಾಜ್ ಕೂಡ ಈಗ ಗುಜರಾತ್‌ನ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದು, ಅವರ ಮೇಲೂ ತಂಡ ನಿರೀಕ್ಷೆ ಇಟ್ಟುಕೊಂಡಿದೆ. ಒಟ್ಟು ಮುಖಾಮುಖಿ: 05
ಆರ್‌ಸಿಬಿ: 03
ಗುಜರಾತ್: 02 ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಪಡಿಕ್ಕಲ್, ಪಾಟೀದಾರ್ (ನಾಯಕ), ಲಿವಿಂಗ್‌ಸ್ಟೋನ್, ಜಿತೇಶ್, ಡೇವಿಡ್, ಕೃನಾಲ್, ಭುವನೇಶ್ವರ್, ಹೇಜಲ್‌ವುಡ್, ಯಶ್ ದಯಾಳ್, ಸುಯಶ್/ರಸಿಖ್.
ಗುಜರಾತ್: ಸುದರ್ಶನ್/ಅನುಜ್, ಗಿಲ್ (ನಾಯಕ), ಬಟ್ಲರ್, ರುಥರ್‌ಫೋರ್ಡ್, ಶಾರುಖ್, ತೆವಾಟಿಯಾ, ರಶೀದ್, ರಬಾಡ, ಸಾಯಿ ಕಿಶೋರ್, ಸಿರಾಜ್, ಪ್ರಸಿದ್ಧ್, ಇಶಾಂತ್ ಶರ್ಮಾ. ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಉದ್ಘಾಟನಾ ಸಮಾರಂಭ:
ವಿಜಯ್ ಪ್ರಕಾಶ್ ಗಾಯನ
ಬಿಸಿಸಿಐ ಈ ಬಾರಿ ಐಪಿಎಲ್‌ಗೆ ಆತಿಥ್ಯ ವಹಿಸುವ ಎಲ್ಲಾ 13 ನಗರಗಳಲ್ಲೂ ಉದ್ಘಾಟನಾ ಸಮಾರಂಭ ನಡೆಸಲು ನಿರ್ಧರಿಸಿದ್ದು, ಬೆಂಗಳೂರಲ್ಲೂ ಬುಧವಾರ ಪಂದ್ಯಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸಂಗೀತ ಸುಧೆ ಹರಿಸಲಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.