2ನೇ ಕಪ್‌ ಮೇಲೆ ಆರ್‌ಸಿಬಿ ಕಣ್ಣು

Published : Feb 05, 2026, 12:44 PM IST
WPL 2026 RCB

ಸಾರಾಂಶ

4ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಗುರುವಾರ ಮಾಜಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಕಳೆದ 3 ಆವೃತ್ತಿಗಳ ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರಶಸ್ತಿಗಾಗಿ ಸೆಣಸಾಡಲಿವೆ.

ವಡೋದರಾ: 4ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಗುರುವಾರ ಮಾಜಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಕಳೆದ 3 ಆವೃತ್ತಿಗಳ ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರಶಸ್ತಿಗಾಗಿ ಸೆಣಸಾಡಲಿವೆ.

2024ರಲ್ಲಿ ಡೆಲ್ಲಿ ವಿರುದ್ಧವೇ ಫೈನಲ್‌ನಲ್ಲಿ ಗೆದ್ದು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದ ಆರ್‌ಸಿಬಿ ಈ ಬಾರಿಯೂ ಅತ್ಯುತ್ತಮ ಪ್ರದರ್ಶನ ತೋರಿದೆ. ತಂಡ ಲೀಗ್‌ ಹಂತದಲ್ಲಿ 8 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ನೇರವಾಗಿ ಫೈನಲ್‌ಗೇರಿದೆ. ಮತ್ತೊಂದೆಡೆ ಡೆಲ್ಲಿ ತಂಡ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ 8 ಪಂದ್ಯಗಳ ಪೈಕಿ 4ಲ್ಲಿ ಗೆದ್ದು ಎಲಿಮಿನೇಟರ್‌ ತಲುಪಿತ್ತು. ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ನ ಸೋಲಿಸಿ ಸತತ 4ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದೆ.

ಸಂಘಟಿತ ಪ್ರದರ್ಶನ:

ಲೀಗ್‌ ಹಂತದಲ್ಲಿ ಸತತ 5 ಪಂದ್ಯ ಗೆದ್ದು, ಡಬ್ಲ್ಯುಪಿಎಲ್‌ನಲ್ಲೇ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿರುವ ಆರ್‌ಸಿಬಿ ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತ ಪ್ರದರ್ಶನ ನೀಡುತ್ತಿದೆ. ನಾಯಕಿ ಸ್ಮೃತಿ ಮಂಧನಾ, ಗ್ರೇಸ್‌ ಹ್ಯಾರಿಸ್‌, ರಿಚಾ ಘೋಷ್‌ ಸ್ಥಿರ ಆಟವಾಡಲು ವಿಫಲರಾದರೂ ಇತರರು ತಂಡದ ಕೈಹಿಡಿದು ಗೆಲ್ಲಿಸಿದ್ದಾರೆ. ನ್ಯಾಡಿನ್‌ ಡೆ ಕ್ಲರ್ಕ್‌, ಸಯಾಲಿ ಸತ್ಗಾರೆ, ಲಾರೆನ್‌ ಬೆಲ್‌ ತಂಡದ ಬೌಲಿಂಗ್‌ ಅಸ್ತ್ರ. ಶ್ರೇಯಾಂಕ ಪಾಟೀಲ್‌ ಕೂಡಾ ನಿರ್ಣಾಯಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ.

ಇನ್ನೊಂದೆಡೆ ಡೆಲ್ಲಿ ತಂಡದಲ್ಲೂ ಹಲವು ಅನುಭವಿ ಆಟಗಾರ್ತಿಯರಿದ್ದಾರೆ. ನಾಯಕಿ ಜೆಮಿಮಾ ರೋಡ್ರಿಗ್ಸ್‌ ನಾಯಕತ್ವದ ತಂಡ ಕೆಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಹೆಚ್ಚಿನ ಆಟಗಾರ್ತಿಯರು ನಿರ್ಣಾಯಕ ಹಂತದಲ್ಲಿ ಕೈಕೊಟ್ಟ ಉದಾಹರಣೆ ಹೆಚ್ಚು. ಲಿಜೆಲ್‌ ಲೀ ಹಾಗೂ ಲಾರಾ ವೊಲ್ವಾರ್ಟ್‌ ಉತ್ತಮ ಲಯದಲ್ಲಿದ್ದು, ಶಫಾಲಿ ವರ್ಮಾ, ಜೆಮಿಮಾ ಕೂಡಾ ಅಬ್ಬರಿಸಬಲ್ಲರು. 9 ಪಂದ್ಯದಲ್ಲಿ 16 ವಿಕೆಟ್‌ ಕಿತ್ತಿರುವ ನಂದಿನಿ ಶರ್ಮಾ, 14 ವಿಕೆಟ್‌ ಪಡೆದಿರುವ ಶ್ರೀ ಚರಣಿ ಜೊತೆಗೆ ಮಾರಿಜಾನ್ ಕಾಪ್‌(10 ವಿಕೆಟ್‌), ಶಿನೆಲ್‌ ಹೆನ್ರಿ(12 ವಿಕೆಟ್‌) ಬೌಲಿಂಗ್‌ ಆಧಾರಸ್ತಂಭ.

ಪಂದ್ಯ ಆರಂಭ: ಸಂಜೆ 7.30 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

ಆರ್‌ಸಿಬಿ ಫ್ರಾಂಚೈಸಿಗೆ

ಹ್ಯಾಟ್ರಿಕ್‌ ಕಪ್ ವಿಶ್ವಾಸ

ಆರ್‌ಸಿಬಿ ಫ್ರಾಂಚೈಸಿ ಹ್ಯಾಟ್ರಿಕ್‌ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2024ರಲ್ಲಿ ಮಹಿಳಾ ತಂಡ, 2025ರಲ್ಲಿ ಪುರುಷರ ತಂಡ ಚಾಂಪಿಯನ್‌ ಆಗಿತ್ತು. ಈ ವರ್ಷ ಮತ್ತೆ ಕಪ್‌ ಗೆಲ್ಲಲು ಮಹಿಳಾ ತಂಡ ಕಾತರಿಸುತ್ತಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ