ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು 2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿದ್ದ ಆರ್‌ಸಿಬಿ ಮಹಿಳಾ ತಂಡದ ಆಟಗಾರ್ತಿಯರಿಗೆ ಅನ್‌ಬಾಕ್ಸ್ ಕಾರ್ಯಕ್ರಮಕ್ಕೂ ಮುನ್ನ ಪುರುಷರ ತಂಡದ ಆಟಗಾರರು ಹಾಗೂ ಕೋಚ್‌ಗಳು ಗಾರ್ಡ್ ಆಫ್ ಹಾನರ್ ಗೌರವ ನೀಡಿದರು.
ಮಂಗಳವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫ್ರಾಂಚೈಸಿಯು ತನ್ನ ಹೆಸರಲ್ಲಿರುವ Bangalore ಅನ್ನು Bengaluru ಎಂದು ಅಧಿಕೃತವಾಗಿ ಬದಲಾಯಿಸಿತು. ಜೊತೆಗೆ ಆರ್‌ಸಿಬಿಯ ಹೊಸ ಜೆರ್ಸಿ, ಲೋಗೋ ಅನಾವರಣ ಮಾಡಲಾಯಿತು.
ನಾರ್ವೆಯ ಸಂಗೀತ ಕಲಾವಿದ ಅಲಾನ್ ವಾಕರ್, ರಘು ದೀಕ್ಷಿತ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಿದರು.ಇದಕ್ಕೂ ಮುನ್ನ ಆರ್‌ಸಿಬಿ ಪುರುಷರ ತಂಡ ಮಹಿಳಾ ತಂಡಕ್ಕೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿತು.
ಪುರುಷರ ತಂಡದ ನಡೆ ವ್ಯಾಪಕ ಮೆಚ್ಚುಗೆಗೂ ಕಾರಣವಾಯಿತು. ಮೈದಾನದಲ್ಲಿ ಪುರುಷ ತಂಡದ ಆಟಗಾರರು ಎರಡು ಕಡೆಗಳಲ್ಲಿ ಸಾಲಾಗಿ ನಿಂತು ಚಪ್ಪಾಳೆ ತಟ್ಟುತ್ತಿದ್ದರೆ, ಅವರ ನಡುವೆ ಟ್ರೋಫಿ ಹಿಡಿದು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ ಮೈದಾನಕ್ಕೆ ಆಗಮಿಸಿದರು.
ಶ್ರೇಯಾಂಕ ಪಾಟೀಲ್, ರಿಚಾ ಘೋಷ್, ರೇಣುಕಾ ಸಿಂಗ್, ಆಶಾ ಶೋಭನಾ ಸೇರಿದಂತೆ ತಂಡದ ಸಹ ಆಟಗಾರ್ತಿಯರು ಸ್ಮೃತಿ ಅವರನ್ನು ಹಿಂಬಾಲಿಸಿದರು.
ಬಳಿಕ ಮೈದಾನದುದ್ದಕ್ಕೂ ಸಾಗಿದ ಆಟಗಾರ್ತಿಯರು ಅಭಿಮಾನಿಗಳಿಗೆ ಟ್ರೋಫಿ ಪ್ರದರ್ಶಿಸಿದರು. ಆದರೆ ಎಲೈಸಿ ಪೆರ್ರಿ, ಸೋಫಿ ಡಿವೈನ್ ಸೇರಿದಂತೆ ವಿದೇಶಿ ಆಟಗಾರರು ಈಗಾಗಲೇ ತವರಿಗೆ ಮರಳಿದ್ದರಿಂದ ಸಮಾರಂಭಕ್ಕೆ ಗೈರಾದರು.