ಕೊಹ್ಲಿ ತವರಿನಲ್ಲಿ ಆರ್‌ಸಿಬಿಗಿಂದು ಡೆಲ್ಲಿ ಚಾಲೆಂಜ್‌

Published : Apr 27, 2025, 08:06 AM IST
Chennai Super Kings and Royal Challengers Bengaluru

ಸಾರಾಂಶ

ತನ್ನ ತವರಿನಲ್ಲೇ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಆರ್‌ಸಿಬಿ, ಭಾನುವಾರ ವಿರಾಟ್‌ ಕೊಹ್ಲಿಯ ತವರಿನಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದೆ.

 ದೆಹಲಿ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡಿಗ ಕೆ.ಎಲ್‌.ರಾಹುಲ್‌ರ ಅಮೋಘ ಆಟ, ವಿಶಿಷ್ಟ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಆಘಾತಕ್ಕೆ ಒಳಗಾಗಿತ್ತು. ತನ್ನ ತವರಿನಲ್ಲೇ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಆರ್‌ಸಿಬಿ, ಭಾನುವಾರ ವಿರಾಟ್‌ ಕೊಹ್ಲಿಯ ತವರಿನಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದೆ. ಉಭಯ ತಂಡಗಳ ಜೊತೆ ಕೆಲ ಆಟಗಾರರ ನಡುವೆಯೂ ಪ್ರಬಲ ಪೈಪೋಟಿ ಕಂಡುಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪಂದ್ಯ ಹೆಚ್ಚಿನ ಮಹತ್ವ ಸೃಷ್ಟಿಸಿದೆ.

ಸದ್ಯ ಎರಡೂ ತಂಡಗಳು ಪ್ಲೇ-ಆಫ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಡೆಲ್ಲಿ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದರೆ, ಆರ್‌ಸಿಬಿ 9ರ ಪೈಕಿ 6 ಗೆಲುವು ತನ್ನದಾಗಿಸಿಕೊಂಡಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಿಸಲಿದೆ.

ಸೇಡಿನ ಕದನ: ವಿರಾಟ್‌ ಕೊಹ್ಲಿ ತವರಿನಲ್ಲಿ ಈ ಪಂದ್ಯ ನಡೆಯಲಿರುವ ಕಾರಣ, ಅವರಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆಯಿದೆ. ಅವರು ಈ ಬಾರಿ 9 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದು, ಈ ಪೈಕಿ 4 ಅರ್ಧಶತಕ ತವರಿನಾಚೆ ಪಂದ್ಯದಲ್ಲಿ ದಾಖಲಾಗಿದೆ. ಮತ್ತೊಂದೆಡೆ ಡೆಲ್ಲಿ ತಂಡದ ರಾಹುಲ್, ಆರ್‌ಸಿಬಿ ವಿರುದ್ಧ ಕಳೆದ ಮುಖಾಮುಖಿಯಲ್ಲಿ ಔಟಾಗದೆ 93 ರನ್‌ ಸಿಡಿಸಿ ಅಬ್ಬರಿಸಿದ್ದರು. ಕಾಂತಾರ ಸಿನಿಮಾ ಶೈಲಿಯಲ್ಲಿ ಬ್ಯಾಟನ್ನು ನೆಲಕ್ಕೆ ಕುಟ್ಟಿ ಸಂಭ್ರಮಾಚಣೆ ನಡೆಸಿದ್ದು ಕೂಡಾ ವೈರಲ್‌ ಆಗಿತ್ತು. ಹೀಗಾಗಿ ಡೆಲ್ಲಿಯಲ್ಲಿ ಇವರಿಬ್ಬರು ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ವೇಗಿಗಳ ಸೆಣಸು: ಆಸ್ಟ್ರೇಲಿಯಾದ ಇಬ್ಬರು ಚಾಂಪಿಯನ್‌ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌ ಹಾಗೂ ಹೇಜಲ್‌ವುಡ್‌, ಈ ಬಾರಿ ಕ್ರಮವಾಗಿ ಡೆಲ್ಲಿ, ಆರ್‌ಸಿಬಿ ಪರ ಆಡುತ್ತಿದ್ದಾರೆ. ಹೇಜಲ್‌ವುಡ್‌ 16 ವಿಕೆಟ್ ಕಿತ್ತಿದ್ದರೆ, ಸ್ಟಾರ್ಕ್‌ 11 ವಿಕೆಟ್‌ ಪಡೆದಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ಮಾರಕ ಯಾರ್ಕರ್‌, ಸ್ವಿಂಗ್‌ಗಳ ಮೂಲಕ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಇವರಿಗಿದೆ.

ಇನ್ನು, ಉಭಯ ತಂಡಗಳ ಸ್ಪಿನ್ನರ್‌ಗಳೂ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಆರ್‌ಸಿಬಿಯ ಕೃನಾಲ್‌ ಪಾಂಡ್ಯ, ಸುಯಶ್‌ ಶರ್ಮಾ, ಡೆಲ್ಲಿ ಕುಲ್ದೀಪ್‌ ಯಾದವ್‌ ನಡುವೆ ಪೈಪೋಟಿ ಏರ್ಪಡಲಿದೆ. ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌, ದೇವದತ್‌ ಪಡಿಕ್ಕಲ್‌, ಟಿಮ್‌ ಡೇವಿಡ್‌, ಡೆಲ್ಲಿಯ ಕರುಣ್‌ ನಾಯರ್, ಅಭಿಷೇಕ್‌ ಪೊರೆಲ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ಮುಖಾಮುಖಿ: 32

ಆರ್‌ಸಿಬಿ: 19

ಡೆಲ್ಲಿ: 12

ಫಲಿತಾಂಶವಿಲ್ಲ: 01

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ವಿರಾಟ್‌, ದೇವದತ್‌, ರಜತ್‌(ನಾಯಕ), ಜಿತೇಶ್‌, ಟಿಮ್‌ ಡೇವಿಡ್‌, ಶೆಫರ್ಡ್‌, ಕೃನಾಲ್‌, ಭುವನೇಶ್ವರ್‌, ಹೇಜಲ್‌ವುಡ್‌, ಯಶ್‌, ಸುಯಶ್‌.

ಡೆಲ್ಲಿ: ಫ್ರೇಸರ್‌, ಅಭಿಷೇಕ್‌ ಪೊರೆಲ್‌, ಕರುಣ್‌, ಕೆ.ಎಲ್‌.ರಾಹುಲ್, ಸ್ಟಬ್ಸ್‌, ಅಕ್ಷರ್‌(ನಾಯಕ), ಅಶುತೋಷ್‌, ವಿಪ್ರಜ್‌, ಸ್ಟಾರ್ಕ್‌, ಕುಲ್ದೀಪ್‌, ಚಮೀರ, ಮುಕೇಶ್‌,

-ಪಿಚ್‌ ರಿಪೋರ್ಟ್‌

ನವದೆಹಲಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ. ಇಲ್ಲಿನ ನಡೆದ 2 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲೂ ತಲಾ 185+ ರನ್‌ ದಾಖಲಾಗಿದ್ದವು. ಜೊತೆಗೆ ಸ್ಪಿನ್ನರ್‌ಗಳೂ ಇಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಮಂಜು ಇರುವ ಕಾರಣ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ