ಫೈನಲ್‌ ಟಿಕೆಟ್‌ಗೆ ಆರ್‌ಸಿಬಿ vs ಗುಜರಾತ್ ಫೈಟ್

Published : May 26, 2026, 12:09 PM IST
RCB vs GT IPL 2026 Qualifier 1 Key Battles

ಸಾರಾಂಶ

19ನೇ ಆವೃತ್ತಿಯ ಐಪಿಎಲ್‌ನ ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಮಂಗಳವಾರದಿಂದ ಪ್ಲೇ-ಆಫ್‌ ಕದನ ಆರಂಭಗೊಳ್ಳಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಮುಖಾಮುಖಿಯಾಗಲಿವೆ.

 ಧರ್ಮಶಾಲಾ: 19ನೇ ಆವೃತ್ತಿಯ ಐಪಿಎಲ್‌ನ ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಮಂಗಳವಾರದಿಂದ ಪ್ಲೇ-ಆಫ್‌ ಕದನ ಆರಂಭಗೊಳ್ಳಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಧರ್ಮಶಾಲಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಈ ಐಪಿಎಲ್‌ನಲ್ಲಿ ಅತ್ಯಂತ ಸಮತೋಲನ ಹೊಂದಿರುವ 2 ತಂಡಗಳಾದ ಆರ್‌ಸಿಬಿ ಹಾಗೂ ಗುಜರಾತ್‌, ಆಡಿರುವ 14 ಪಂದ್ಯಗಳ ಪೈಕಿ ತಲಾ 18 ಅಂಕ ಸಂಪಾದಿಸಿವೆ. ಆದರೆ ನೆಟ್‌ ರನ್‌ರೇಟ್‌ ಆಧಾರದ ಮೇಲೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರೆ, ಗುಜರಾತ್‌ 2ನೇ ಸ್ಥಾನ ಪಡೆದಿತ್ತು. ಮಂಗಳವಾರದ ಮುಖಾಮುಖಿಯಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದ್ದು, ಬುಧವಾರ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ನಡುವಿನ ಎಲಿಮಿನೇಟರ್‌ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಕ್ವಾಲಿಫೈಯರ್-2ರಲ್ಲಿ ಆಡುವ ಅವಕಾಶ ಸಿಗಲಿದೆ.

ಬಲಿಷ್ಠ ತಂಡಗಳ ಸೆಣಸು

ಟೂರ್ನಿಯುದ್ದಕ್ಕೂ ಅಬ್ಬರಿಸಿದ ಕೆಲ ಆಟಗಾರರು ಈ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ತಂಡಗಳನ್ನು ಗೆಲುವಿನತ್ತ ಕೊಂಡೊಯ್ಯಲು ಹೋರಾಡಲಿದ್ದಾರೆ. ವಿರಾಟ್‌ ಕೊಹ್ಲಿ 14 ಪಂದ್ಯಗಳಲ್ಲಿ 557 ರನ್‌ ಕಲೆಹಾಕಿದ್ದು, ಈ ವರ್ಷ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ದೇವದತ್‌ ಪಡಿಕ್ಕಲ್‌ 433, ನಾಯಕ ರಜತ್‌ ಪಾಟೀದಾರ್‌ 393 ರನ್‌ ಗಳಿಸಿದ್ದಾರೆ. ಆದರೆ ಟಿಮ್‌ ಡೇವಿಡ್‌ ಅಸ್ಥಿರ ಆಟ, ಜಿತೇಶ್‌ ಶರ್ಮಾ, ರೊಮಾರಿಯೊ ಶೆಫರ್ಡ್‌ ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ತಂಡಕ್ಕೆ ಮುಳುವಾಗಬಹುದು. ಫಿಲ್‌ ಸಾಲ್ಟ್‌ ಈ ಪಂದ್ಯಕ್ಕೆ ಲಭ್ಯವಿರಲಿದ್ದಾರೆ.

ಆರ್‌ಸಿಬಿಗೆ ಹೋಲಿಸಿದರೆ ಗುಜರಾತ್‌ನ ಕೆಲ ಬ್ಯಾಟರ್‌ಗಳ ಪ್ರದರ್ಶನ ಅಮೋಘವಾಗಿದೆ. ಸಾಯಿ ಸುದರ್ಶನ್‌ ಬರೋಬ್ಬರಿ 638 ರನ್‌ ಕಲೆಹಾಕಿದ್ದು, ಟೂರ್ನಿಯ ಗರಿಷ್ಠ ರನ್‌ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಾಯಕ ಶುಭ್‌ಮನ್‌ ಗಿಲ್‌ 616, ಜೋಸ್‌ ಬಟ್ಲರ್‌ 469, ವಾಷಿಂಗ್ಟನ್‌ ಸುಂದರ್‌ 303 ರನ್‌ ಕಲೆಹಾಕಿದ್ದಾರೆ. ಈ ನಾಲ್ವರ ಹೊರತಾಗಿ ಇತರ ಯಾರೂ 100ಕ್ಕಿಂತ ಹೆಚ್ಚು ರನ್‌ ಕಲೆಹಾಕಿಲ್ಲ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಈ ವರ್ಷ ಆರ್‌ಸಿಬಿಗಿಂತ ಗುಜರಾತ್‌ ಮೇಲುಗೈ ಸಾಧಿಸಿದೆ. ಭುವನೇಶ್ವರ್‌ 24 ವಿಕೆಟ್‌ ಪಡೆದು ಗರಿಷ್ಠ ವಿಕೆಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಸಿಕ್‌ ಸಲಾಂ 14, ಹೇಜಲ್‌ವುಡ್‌ 12 ವಿಕೆಟ್‌ ಪಡೆದಿದ್ದರೂ ಇಬ್ಬರೂ ದುಬಾರಿಯಾಗುತ್ತಿದ್ದಾರೆ.

ಇನ್ನು ಗುಜರಾತ್‌ ಬೌಲಿಂಗ್‌ ಪಡೆ ಪ್ರಚಂಡ ಲಯದಲ್ಲಿದೆ. ಕಗಿಸೊ ರಬಾಡ(24 ವಿಕೆಟ್‌), ಮೊಹಮ್ಮದ್‌ ಸಿರಾಜ್‌(17 ವಿಕೆಟ್‌) ಪವರ್‌-ಪ್ಲೇ ದಾಳಿ ಎದುರಿಸಲು ಎದುರಾಳಿಗಳು ಪರದಾಡುತ್ತಿದ್ದಾರೆ. ರಶೀದ್‌ ಖಾನ್‌ 19, ಪ್ರಸಿದ್ಧ್ ಕೃಷ್ಣ 14, ಜೇಸನ್‌ ಹೋಲ್ಡರ್‌ 13 ವಿಕೆಟ್‌ ಪಡೆದಿದ್ದು, ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಜ್ಜಾಗಿದ್ದಾರೆ.

ಯಾರಿಂದ, ಯಾರಿಗೆ ಸ್ಪರ್ಧೆ?:

ಈ ಪಂದ್ಯದಲ್ಲಿ ಕೆಲ ಪ್ರಮುಖ ಆಟಗಾರರಿಂದ ಪರಸ್ಪರ ಸ್ಪರ್ಧೆ ಏರ್ಪಡಲಿದೆ. ಆರಂಭಿಕ ಓವರ್‌ಗಳಲ್ಲಿ ಕೊಹ್ಲಿಗೆ ರಬಾಡ ಸವಾಲು ಎದುರಾಗಲಿದ್ದು, ಪ್ರಮುಖವಾಗಿ ರಬಾಡರ ಬೌನ್ಸರ್‌ ಎಸೆತಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹವಿದೆ. ಆಕ್ರಮಣಕಾರಿ ಆಟವಾಡುವ ಸಾಲ್ಟ್‌ರನ್ನು ಕಟ್ಟಿಹಾಕಲು ಸಿರಾಜ್‌ ಯಶಸ್ವಿಯಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು. ಮತ್ತೊಂದೆಡೆ ಭುವನೇಶ್ವರ್‌-ಹೇಜಲ್‌ವುಡ್‌ ಜೋಡಿ ಗುಜರಾತ್‌ನ ಸುದರ್ಶನ್‌-ಗಿಲ್‌ ಜೋಡಿಗೆ ಎಷ್ಟರ ಮಟ್ಟಿಗೆ ಸವಾಲೊಡ್ಡಬಹುದು ಎಂಬ ಕುತೂಹಲವಿದೆ. ಸ್ಪಿನ್ನರ್‌ಗಳ ವಿರುದ್ಧ ಉತ್ತಮ ದಾಖಲೆ ಹೊಂದಿರುವ ರಜತ್‌, ರಶೀದ್‌ ಖಾನ್‌ ದಾಳಿಯನ್ನು ಎದುರಿಸಬೇಕಿದೆ.

ಮುಖಾಮುಖಿ: 08

ಆರ್‌ಸಿಬಿ: 04

ಗುಜರಾತ್‌: 04

ಸಂಭಾವ್ಯ ಆಟಗಾರರ ಪಟ್ಟಿ:

ಆರ್‌ಸಿಬಿ: ಕೊಹ್ಲಿ, ಸಾಲ್ಟ್‌/ವೆಂಕಟೇಶ್‌, ಪಡಿಕ್ಕಲ್‌, ರಜತ್‌(ನಾಯಕ), ಜಿತೇಶ್‌, ಶೆಫರ್ಡ್‌, ಡೇವಿಡ್‌, ಕೃನಾಲ್‌, ಭುವನೇಶ್ವರ್‌, ಜೇಕಬ್ ಡಫಿ/ಸುಯಶ್‌, ಹೇಜಲ್‌ವುಡ್‌, ರಸಿಕ್‌ ಸಲಾಂ.

ಗುಜರಾತ್‌: ಗಿಲ್‌(ನಾಯಕ), ಸುದರ್ಶನ್‌, ಬಟ್ಲರ್‌, ವಾಷಿಂಗ್ಟನ್‌, ಜೇಸನ್‌ ಹೋಲ್ಡರ್‌, ರಾಹುಲ್‌ ತೆವಾಟಿಯಾ, ನಿಶಾಂತ್‌ ಸಿಂಧು, ರಶೀದ್‌, ಅರ್ಶದ್‌ ಖಾನ್‌, ಸಿರಾಜ್‌, ಪ್ರಸಿದ್ಧ್‌/ಸುತಾರ್‌.

ಪಿಚ್‌ ರಿಪೋರ್ಟ್‌

ಈ ವರ್ಷ ಧರ್ಮಶಾಲಾದಲ್ಲಿ ನಡೆದ 3 ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ ತಲಾ 200+ ರನ್‌ ದಾಖಲಾಗಿದ್ದು, ಮತ್ತೊಂದು ಇನ್ನಿಂಗ್ಸ್‌ನಲ್ಲಿ 199 ರನ್‌ ಹರಿದುಬಂದಿತ್ತು. ಪಿಚ್‌ನಲ್ಲಿ ಹೆಚ್ಚಿನ ಬೌನ್ಸರ್‌ಗಳು ಕಂಡುಬಂದರೂ, ಆರಂಭಿಕ ಕೆಲ ಓವರ್‌ಗಳ ಬಳಿಕ ಬ್ಯಾಟರ್‌ಗಳು ಮೇಲುಗೈ ಸಾಧಿಸುವ ಹೆಚ್ಚು. ಚೇಸಿಂಗ್‌ ಸುಲಭವಾಗುವುದರಿಂದಾಗಿ 200 ರನ್‌ ಕೂಡಾ ಈ ಪಿಚ್‌ನಲ್ಲಿ ಸುರಕ್ಷಿತವಲ್ಲ.

ಆರ್‌ಸಿಬಿ

ಕೊಹ್ಲಿ ಸೇರಿ ಬಲಿಷ್ಠ ಬ್ಯಾಟರ್ಸ್‌ಕೃನಾಲ್‌ ಆಲ್ರೌಂಡ್‌ ಆಟ

ಭುವನೇಶ್ವರ್‌ ಮಾರಕ ದಾಳಿ

ಜಿತೇಶ್‌, ಶೆಫರ್ಡ್‌ ಲಯದಲ್ಲಿಲ್ಲ

ಟಿಮ್‌ ಡೇವಿಡ್‌ ಅಸ್ಥಿರ ಆಟ

ಭುವಿಗೆ ಸೂಕ್ತ ಬೆಂಬಲ ಸಿಗ್ತಿಲ್ಲ

ಗುಜರಾತ್‌

ಗಿಲ್‌, ಸಾಯಿ, ಬಟ್ಲರ್ ಬ್ಯಾಟಿಂಗ್‌

ಪ್ರಚಂಡ ವೇಗಿಗಳ ಪಡೆ

ರಶೀದ್‌, ಹೋಲ್ಡರ್ ಅಲ್ರೌಂಡ್ ಆಟ

ದೌರ್ಬಲ್ಯ..

ಆರಂಭಿಕರ ಮೇಲೆ ಅವಲಂಬನೆ

ಮಧ್ಯಮ ಕ್ರಮಾಂಕ ದುರ್ಬಲ

ದುಬಾರಿಯಾಗುವ ಸ್ಪಿನ್ನರ್ಸ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

6500ಕ್ಕೂ ಹೆಚ್ಚು ಓಟಗಾರರ ಭಾಗಿ: ಭಾರೀ ಯಶಸ್ಸು ಕಂಡ ಫ್ರೀಡಂ ಬೆಂಗಳೂರು ಹಾಫ್ ಮ್ಯಾರಥಾನ್ 2026
ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಅಂ.ರಾ.ಪ್ಯಾರಾ ಅಥ್ಲೆಟಿಕ್ಸ್‌ ಕಲರವ