ಕಪ್‌ ಗೆಲ್ಲಲು ಆರ್‌ಸಿಬಿ ರಾಯಲ್‌ ಎಂಟ್ರಿ - 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಭರ್ಜರಿ ಶುಭಾರಂಭ

Published : Mar 23, 2025, 05:31 AM IST
rcb beat kkr by 7 wickets

ಸಾರಾಂಶ

ಈ ಬಾರಿ ಟೂರ್ನಿಗೆ ಆರ್‌ಸಿಬಿ ರಾಯಲ್‌ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ ಗೆಲುವು ಸಾಧಿಸಿತು.

 ಕೋಲ್ಕತಾ: ಪ್ರತಿ ಬಾರಿಯೂ ‘ಈ ಸಲ ಕಪ್‌ ನಮ್ದೇ’ ಎನ್ನುತ್ತಲೇ ಐಪಿಎಲ್‌ಗೆ ಕಾಲಿಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಆರಂಭಿಕ ಪಂದ್ಯದಲ್ಲಿ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಟೂರ್ನಿಗೆ ಆರ್‌ಸಿಬಿ ರಾಯಲ್‌ ಎಂಟ್ರಿ ಕೊಟ್ಟಿದೆ. ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಕೋಲ್ಕತಾ, ಆರಂಭಿಕ ಆಘಾತದ ಹೊರತಾಗಿಯೂ ಕೊನೆಯಲ್ಲಿ ಮುಗ್ಗಿರಿಸಿ 8 ವಿಕೆಟ್‌ಗೆ 174 ರನ್‌ ಕಲೆಹಾಕಿತು. ಈಡನ್‌ ಗಾರ್ಡನ್‌ನಲ್ಲಿ ಆರ್‌ಸಿಬಿಗೆ ಸಿಕ್ಕ ಮೊತ್ತ ದೊಡ್ಡದೇನೂ ಆಗಿರಲಿಲ್ಲ. ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‌ ಗುರಿಯನ್ನು ಮತ್ತಷ್ಟು ಸುಲಭವಾಗಿಸಿತು. ತಂಡ 16.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವು ತನ್ನದಾಗಿಸಿಕೊಂಡಿತು.

ಪವರ್‌-ಪ್ಲೇನಲ್ಲಿ 80 ರನ್‌ ಹಾಗೂ ಒಟ್ಟಾರೆ 8.3 ಓವರ್‌ಗಳಲ್ಲಿ 95 ರನ್‌ ಜೊತೆಯಾಟವಾಡಿದ ಸಾಲ್ಟ್‌-ಕೊಹ್ಲಿ, ಅದಾಗಲೇ ಗೆಲುವನ್ನು ಆರ್‌ಸಿಬಿಯತ್ತ ವಾಲುವಂತೆ ಮಾಡಿದ್ದರು. ಕೆಕೆಆರ್‌ ಬೌಲರ್‌ಗಳನ್ನು ಚೆಂಡಾಡಿ 31 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 56 ರನ್‌ ಸಿಡಿಸಿದ ಸಾಲ್ಟ್‌, 9ನೇ ಓವರ್‌ನಲ್ಲಿ ಔಟಾದರೂ ಕೊಹ್ಲಿ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತರು. ದೇವದತ್‌ ಪಡಿಕ್ಕಲ್‌ 10 ರನ್‌ಗೆ ಔಟಾದ ಬಳಿಕ ನಾಯಕ ರಜತ್‌ ಪಾಟೀದಾರ್‌ ಕೇವಲ 16 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ನೊಂದಿಗೆ 34 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಔಟಾಗದೆ 59 ರನ್‌ ಗಳಿಸಿದ ಕೊಹ್ಲಿ, ಇನ್ನೂ 22 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲ್ಲಿಸಿದರು. ವೈಭವ್‌, ನರೈನ್‌, ವರುಣ್‌ ಚಕ್ರವರ್ತಿ ತಲಾ 1 ವಿಕೆಟ್‌ ಕಿತ್ತರು.

ಸ್ಫೋಟಕ ಆರಂಭ: ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೆಕೆಆರ್‌ ಸ್ಫೋಟಕ ಆರಂಭ ಪಡೆಯಿತು. ಮೊದಲ ಓವರ್‌ನಲ್ಲೇ ಡಿ ಕಾಕ್‌ ಔಟಾದರೂ, 2ನೇ ವಿಕೆಟ್‌ಗೆ ನಾಯಕ ಅಜಿಂಕ್ಯ ರಹಾನೆ ಹಾಗೂ ಸುನಿಲ್‌ ನರೈನ್‌ 55 ಎಸೆತಗಳಲ್ಲಿ 103 ರನ್‌ ಜೊತೆಯಾಟವಾಡಿದರು. ಆದರೆ 10ನೇ ಓವರ್‌ನ ಕೊನೆ ಎಸೆತದಲ್ಲಿ ನರೈನ್‌(44) ಔಟಾಗುವುದರೊಂದಿಗೆ ತಂಡ ದಿಢೀರ್‌ ಕುಸಿಯಿತು. ನಾಯಕ ಅಜಿಂಕ್ಯ ರಹಾನೆ 31 ಎಸೆತಕ್ಕೆ 56 ರನ್‌ ಗಳಿಸಿ ಔಟಾದರು.

ಆರಂಭಿಕ 10 ಓವರಲ್ಲಿ 2 ವಿಕೆಟ್‌ಗೆ 107, 14 ಓವರ್‌ಗಳಲ್ಲಿ 4 ವಿಕೆಟ್‌ಗೆ 141 ರನ್‌ ಕಲೆಹಾಕಿದ್ದ ತಂಡ, ಡೆತ್‌ ಓವರ್‌ಗಳಲ್ಲಿ ರನ್‌ ಗಳಿಸಲು ಪರದಾಡಿತು. ಕೊನೆ 6 ಓವರಲ್ಲಿ ತಂಡ 4 ವಿಕೆಟ್‌ ಕಳೆದುಕೊಂಡು ಕೇವಲ 33 ರನ್‌ ಸೇರಿಸಿತು. ಕೃನಾಲ್‌ ಪಾಂಡ್ಯ 29 ರನ್‌ಗೆ 3 ವಿಕೆಟ್‌ ಕಿತ್ತರು.

ಸ್ಕೋರ್‌: ಕೋಲ್ಕತಾ 20 ಓವರಲ್ಲಿ 174/8 (ರಹಾನೆ 56, ನರೈನ್‌ 44, ರಘುವಂಶಿ 30, ಕೃನಾಲ್‌ 3-29, ಹೇಜಲ್‌ವುಡ್‌ 2-22), ಆರ್‌ಸಿಬಿ 16.2 ಓವರಲ್ಲಿ 177/3 (ಕೊಹ್ಲಿ ಔಟಾಗದೆ 59, ಸಾಲ್ಟ್‌ 56, ರಜತ್‌ 34, ನರೈನ್‌ 1-27)

ಪಂದ್ಯಶ್ರೇಷ್ಠ: ಕೃನಾಲ್‌ ಪಾಂಡ್ಯ

ಸೋಲಿನ ಸರಪಳಿ

ಕಳಚಿದ ಆರ್‌ಸಿಬಿ

ಕೆಕೆಆರ್‌ ವಿರುದ್ಧ ಆರ್‌ಸಿಬಿ ಕಳೆದೆರಡು ಆವೃತ್ತಿಗಳ ಒಟ್ಟು 4 ಪಂದ್ಯಗಳಲ್ಲೂ ಸೋಲನುಭವಿಸಿತ್ತು. ಅಲ್ಲದೆ, ಕೋಲ್ಕತಾದಲ್ಲಿ ಕೆಕೆಆರ್‌ ವಿರುದ್ಧ 2019ರ ಬಳಿಕ ಗೆದ್ದಿರಲಿಲ್ಲ. ಶನಿವಾರದ ಗೆಲುವಿನೊಂದಿಗೆ ಆರ್‌ಸಿಬಿ ಸೋಲಿನ ಸರಪಳಿ ಕಳಚಿಕೊಂಡಿತು.

PREV

Recommended Stories

ಇಂದಿನಿಂದ ರಣಜಿ ಟ್ರೋಫಿ - 91ನೇ ಆವೃತ್ತಿಯ ದೇಸಿ ಪ್ರ.ದರ್ಜೆ ಕ್ರಿಕೆಟ್‌ ಟೂರ್ನಿ
ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಜಯ