;Resize=(412,232))
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ 3ನೇ ಬಾರಿ ಫೈನಲ್‌ಗೇರಿದ್ದು, ಚೊಚ್ಚಲ ಟ್ರೋಫಿ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಹಾಲಿ ಹಾಗೂ 7 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗುರುವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ದಾಖಲೆಯ ಚೇಸ್ ಮೂಲಕ 5 ವಿಕೆಟ್ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾದ 10ನೇ ಬಾರಿ ಫೈನಲ್‌ಗೇರುವ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ಆಸೀಸ್ 49.5 ಓವರ್‌ಗಳಲ್ಲಿ 338 ರನ್‌ಗೆ ಆಲೌಟಾಯಿತು. ಫೋಬೆ ಲಿಚ್‌ಫೀಲ್ಡ್ 119, ಎಲೈಸಿ ಪೆರ್ರಿ 77, ಆ್ಯಶ್ಲೆ ಗಾರ್ಡ್ನರ್ 63 ರನ್ ಸಿಡಿಸಿ ತಂಡವನ್ನು 300ರ ಗಡಿ ದಾಟಿಸಿದರು. ಶ್ರೀ ಚರಣಿ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು.
ಇಷ್ಟು ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆಲ್ಲುವುದು ಭಾರತದ ಪಾಲಿಗೆ ಸಾಧ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಆದರೆ ಆಸೀಸ್‌ಗೆ ಸದಾ ಸವಾಲೊಡ್ಡುವ ಭಾರತ ಈ ಪಂದ್ಯದಲ್ಲೂ ಪರಾಕ್ರಮ ಮೆರೆಯಿತು. ಜೆಮಿಮಾ ರೋಡ್ರಿಗ್ಸ್ ಸಿಡಿಸಿದ ಅಮೋಘ ಶತಕ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಸಮಯೋಚಿತ ಆಟ ತಂಡವನ್ನು ಗೆಲ್ಲಿಸಿತು.
ಶಫಾಲಿ ವರ್ಮಾ 10, ಸ್ಮೃತಿ ಮಂಧನಾ 24 ರನ್‌ಗೆ ಔಟಾದರೂ, 3ನೇ ವಿಕೆಟ್‌ಗೆ ಜೆಮಿಮಾ-ಹರ್ಮನ್ ಜೋಡಿ 167 ರನ್ ಸೇರಿಸಿತು. ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ ಆಸೀಸ್ ಪಂದ್ಯವನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ಹರ್ಮನ್‌ಪ್ರೀತ್(89) ಶತಕದ ಅಂಚಿನಲ್ಲಿ ಎಡವಿದರೂ, ಜೆಮಿಮಾ 134 ಎಸೆತಗಳಲ್ಲಿ ಔಟಾಗದೆ 127 ರನ್ ಸಿಡಿಸಿ ತಂಡವನ್ನು 48.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ದೀಪ್ತಿ ಶರ್ಮಾ 24, ರಿಚಾ ಘೋಷ್ 26 ರನ್ ಕೊಡುಗೆ ನೀಡಿದರು.
ಸ್ಕೋರ್: ಆಸ್ಟ್ರೇಲಿಯಾ 49.5 ಓವರಲ್ಲಿ 338/10 (ಲಿಚ್‌ಫೀಲ್ಡ್ 119, ಎಲೈಸಿ 77, ಗಾರ್ಡ್ನರ್ 63, ಚರಣಿ 2-49, ದೀಪ್ತಿ 2-73), ಭಾರತ 48.3 ಓವರ್‌ಗಳಲ್ಲಿ 341/5 (ಜೆಮಿಮಾ ಔಟಾಗದೆ 127, ಹರ್ಮನ್‌ಪ್ರೀತ್ 89, ಕಿಮ್ ಗಾರ್ಥ್ 2-46) ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗ್ಸ್
-