ಕರುಣ್ 174, ಕರ್ನಾಟಕ 371 : ರಾಜ್ಯಕ್ಕೆ ಕರುಣ್‌ ನಾಯರ್‌ ಆಸರೆ

Published : Oct 27, 2025, 01:13 PM IST
Karun Nair luxury lifestyle

ಸಾರಾಂಶ

ಸ್ಟಾರ್‌ ಆಟಗಾರ ಕರುಣ್‌ ನಾಯರ್‌(ಅಜೇಯ 174) ಅವರ ಅಬ್ಬರದ ಶತಕದ ನೆರವಿನಿಂದ ಗೋವಾ ವಿರುದ್ಧ ರಣಜಿ ಕ್ರಿಕೆಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡ ಸವಾಲಿನ ಮೊತ್ತ ಕಲೆ ಹಾಕಿದೆ.

 ಗಣೇಶ್‌ ತಮ್ಮಡಿಹಳ್ಳಿ

 ಶಿವಮೊಗ್ಗ :  ಸ್ಟಾರ್‌ ಆಟಗಾರ ಕರುಣ್‌ ನಾಯರ್‌(ಅಜೇಯ 174) ಅವರ ಅಬ್ಬರದ ಶತಕದ ನೆರವಿನಿಂದ ಗೋವಾ ವಿರುದ್ಧ ರಣಜಿ ಕ್ರಿಕೆಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡ ಸವಾಲಿನ ಮೊತ್ತ ಕಲೆ ಹಾಕಿದೆ.

ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಭಾನುವಾರ ರಾಜ್ಯ ತಂಡ 110.1 ಓವರ್‌ಗಳಲ್ಲಿ 371 ರನ್‌ ಕಲೆಹಾಕಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಗೋವಾ 1 ವಿಕೆಟ್‌ ನಷ್ಟದಲ್ಲಿ 28 ರನ್‌ ಗಳಿಸಿದ್ದು, ಇನ್ನೂ 343 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನ 86 ರನ್‌ ಗಳಿಸಿದ್ದ ಕರುಣ್‌ 2ನೇ ದಿನವೂ ಎಚ್ಚರಿಕೆಯ ಆಟವಾಡಿ 174 ರನ್‌ ಗಳಿಸಿ ಔಟ್‌ ಆಗದೇ ಉಳಿದರು. ಇವರ ಜೊತೆ ಮಿಂಚಿದ ಶ್ರೇಯಸ್‌ ಗೋಪಾಲ್(57) ಹಾಗೂ ವೈಶಾಕ್‌ ವಿಜಯಕುಮಾರ್‌(31) ತಂಡದ ಮೊತ್ತವನ್ನು 350ರ ಗಡಿ ದಾಟಿಸಲು ಸಾಥ್‌ ನೀಡಿದರು.

ಶತಕದ ವೈಭವ:

2ನೇ ದಿನ ಆರಂಭದಲ್ಲೇ ಶ್ರೇಯಸ್‌ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದ ಕರ್ನಾಟಕಕ್ಕೆ ಕರುಣ್‌ ಶತಕ ಚೇತರಿಕೆ ನೀಡಿತು. ಅವರು 163 ಎಸೆತಗಳಲ್ಲಿ ಶತಕ ಬಾರಿಸಿದರು. ಆ ಬಳಿಕವೂ ಉತ್ತಮ ಆಟವಾಡಿದ ಕರುಣ್‌ ದ್ವಿಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಅವರಿಗೆ ಇತರರಿಂದ ಬೆಂಬಲ ಸಿಗಲಿಲ್ಲ. 267 ಎಸೆತಗಳನ್ನು ಎದುರಿಸಿದ ಕರುಣ್‌ 3 ಸಿಕ್ಸರ್‌ ಹಾಗೂ 14 ಬೌಂಡರಿ ಸಮೇತ 174 ರನ್‌ ಗಳಿಸಿ ಅಜೇಯರಾಗಿ ಉಳಿದರು. ವಿದ್ವತ್‌ ಕಾವೇರಪ್ಪ ರನ್‌ಔಟ್‌ ಆಗುವುದರೊಂದಿಗೆ ರಾಜ್ಯದ ಇನ್ನಿಂಗ್ಸ್‌ಗೆ ತೆರೆ ಬಿತ್ತು. ಅರ್ಜುನ್‌ ತೆಂಡುಲ್ಕರ್‌ ಹಾಗೂ ಕನ್ನಡಿಗ ವೇಗಿ ವಾಸುಕಿ ಕೌಶಿಕ್‌ ತಲಾ 3 ವಿಕೆಟ್‌ ಪಡೆದರು.

ಆರಂಭಿಕ ಆಘಾತ:

ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ಗೋವಾ ತಂಡಕ್ಕೆ ಅಭಿಲಾಷ್‌ ಶೆಟ್ಟಿ ಆರಂಭಿಕ ಆಘಾತ ನೀಡಿದರು. 9 ರನ್‌ ಗಳಿಸಿ ಉತ್ತಮ ಆರಂಭದ ನಿರೀಕ್ಷೆಯನ್ನು ಮೂಡಿಸಿದ್ದ ಮಂಥನ್‌ ಕೌತುಕರ್‌, ಅಭಿಲಾಷ್‌ ಶೆಟ್ಟಿಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು.

ಮಳೆ ಅಡ್ಡಿ:

ಪಂದ್ಯದ 2ನೇ ದಿನವೂ ಮಳೆ ಅಡ್ಡಿಪಡಿಸಿತು. ಗೋವಾ 13 ಓವರ್‌ಗಳಲ್ಲಿ 28ಕ್ಕೆ 1 ವಿಕೆಟ್‌ ಕಳೆದುಕೊಂಡಿದ್ದಾಗ ಮಳೆ ಅಡ್ಡಿಪಡಿಸಿತು. ಕೆಲವೊತ್ತು ಮಳೆ ನಿಲ್ಲಿದ ಕಾರಣ ಎರಡನೇ ದಿನದ ಆಟವನ್ನು ಅಲ್ಲಿಗೆ ಕೊನೆಗೊಳಿಸಲಾಯಿತು.

ಸ್ಕೋರ್‌:

ಕರ್ನಾಟಕ 110.1 ಓವರಲ್ಲಿ 371/10 (ಕರುಣ್‌ ಅಜೇಯ 174, ಶ್ರೇಯಸ್‌ 57, ವೈಶಾಕ್‌ 31, ಅರ್ಜುನ್‌ 3-100, ವಿ.ಕೌಶಿಕ್‌ 3-35), ಗೋವಾ 13 ಓವರಲ್ಲಿ 28/1 (ಮಂಥನ್‌ 9, ಅಭಿಲಾಷ್ ಶೆಟ್ಟಿ 1-9)

ಪ್ರಥಮ ದರ್ಜೆಯಲ್ಲಿ

ಕರುಣ್‌ 25ನೇ ಶತಕ

33 ವರ್ಷದ ಕರುಣ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25ನೇ ಶತಕ ಪೂರ್ಣಗೊಳಿಸಿದರು. ಅವರು 122ನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿದ್ದು, 48.64ರ ಸರಾಸರಿಯಲ್ಲಿ 8930 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 25 ಶತಕ, 38 ಅರ್ಧಶತಕ ಒಳಗೊಂಡಿವೆ. 2015ರ ರಣಜಿ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಗಳಿಸಿದ 328 ರನ್‌ ಅವರ ಗರಿಷ್ಠ ಸ್ಕೋರ್‌.

PREV
Read more Articles on

Recommended Stories

ವೈಟ್‌ವಾಶ್‌ ತಪ್ಪಿಸುತ್ತಾ ಭಾರತ? ಇಂದು ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯ
ಪಾಕ್‌ ನಾಯಕ ರಿಜ್ವಾನ್‌ ವಜಾ : ಅತಿಯಾದ ಧಾರ್ಮಿಕತೆ ಕಾರಣ?