ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ರೋಚಕ ಘಟ್ಟ ತಲುಪಿದ ಬೆಂಗಳೂರು ಟೆಸ್ಟ್‌ : ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು

KannadaprabhaNewsNetwork | Updated : Oct 19 2024, 04:42 AM IST

ಸಾರಾಂಶ

‘ನಾ ಕೊಡಲ್ಲ, ನೀ ಬಿಡಲ್ಲ’ ಎನ್ನುವ ರೀತಿ ಪೈಪೋಟಿ ನಡೆಸುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

  ಬೆಂಗಳೂರು : ಟೆಸ್ಟ್‌ ಕ್ರಿಕೆಟ್‌ ಜೀವಂತವಾಗಿ ಉಳಿಯಬೇಕಿದ್ದರೆ, ಈ ರೀತಿಯ ಪಂದ್ಯಗಳು ಅತ್ಯಗತ್ಯ. ‘ನಾ ಕೊಡಲ್ಲ, ನೀ ಬಿಡಲ್ಲ’ ಎನ್ನುವ ರೀತಿ ಪೈಪೋಟಿ ನಡೆಸುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ನ್ಯೂಜಿಲೆಂಡ್‌ ಐತಿಹಾಸಿಕ ಗೆಲುವಿನ ಮೇಲೆ ಕಣ್ಣಿಟ್ಟರೆ, ಇತ್ತೀಚಿಗೆ ಅಸಾಧ್ಯ ಸ್ಥಿತಿಗಳಿಂದ ಮೇಲೆದ್ದು ಟೆಸ್ಟ್‌ ಪಂದ್ಯಗಳನ್ನು ಗೆದ್ದು ಎಲ್ಲರು ಹುಬ್ಬೇರಿಸುವಂತೆ ಮಾಡುತ್ತಿರುವ ಭಾರತ, ಅಂಥದ್ದೇ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದು, ಯಶಸ್ಸು ಸಾಧಿಸುವ ವಿಶ್ವಾಸದಲ್ಲಿದೆ.

ಮೊದಲ ಇನ್ನಿಂಗ್ಸಲ್ಲಿ 46 ರನ್‌ಗೆ ಆಲೌಟ್‌ ಆಗಿ, ಬಳಿಕ ನ್ಯೂಜಿಲೆಂಡ್‌ 402 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದರೂ, ಎದೆಗುಂದದ ಭಾರತ, 2ನೇ ಇನ್ನಿಂಗ್ಸಲ್ಲಿ ಓವರ್‌ಗೆ ಸರಾಸರಿ 4.71 ರನ್‌ಗಳಂತೆ ಚಚ್ಚಿ, ಉತ್ತಮ ಹೋರಾಟ ಪ್ರದರ್ಶಿಸುತ್ತಿದೆ.

3ನೇ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 231 ರನ್‌ ಕಲೆಹಾಕಿರುವ ಭಾರತ, ಇನ್ನೂ 125 ರನ್‌ ಹಿನ್ನಡೆಯಲ್ಲಿದೆ. ತಂಡದ ಬ್ಯಾಟರ್‌ಗಳು 4ನೇ ದಿನ ಹೋರಾಟ ಮುಂದುವರಿಸಿ, 150-200 ರನ್‌ ಮುನ್ನಡೆ ಕಲೆಹಾಕಿದರೂ, ಭಾರತ ಈ ಪಂದ್ಯವನ್ನು ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬಹುದು. ಮಿಂಚಿದ ರಚಿನ್‌: ಮೊದಲ ದಿನ ಮಳೆಗೆ ಬಲಿಯಾದ ಬಳಿಕ 2ನೇ ದಿನ ಭಾರತವನ್ನು ಬೇಗ ಆಲೌಟ್‌ ಮಾಡಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ್ದ ನ್ಯೂಜಿಲೆಂಡ್‌ ದಿನದಂತ್ಯಕ್ಕೆ 3 ವಿಕೆಟ್‌ಗೆ 180 ರನ್‌ ಗಳಿಸಿತ್ತು. 3ನೇ ದಿನ ಆರಂಭಿಕ ಆಘಾತಕ್ಕೆ ತುತ್ತಾದ ಕಿವೀಸ್‌, 53 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತು. ಭಾರತ ತಾನು ನಿರೀಕ್ಷಿಸದ್ದಕ್ಕಿಂತ ಮೊದಲೇ ಕಿವೀಸ್‌ ಆಲೌಟ್‌ ಆಗಲಿದೆ ಎಂದು ಭಾವಿಸಿದ್ದಾಗ ರಚಿನ್‌ ರವೀಂದ್ರ ಹಾಗೂ ಟಿಮ್‌ ಸೌಥಿ ಆಘಾತ ನೀಡಿದರು.

ಈ ಜೋಡಿ 22 ಓವರಲ್ಲಿ 137 ರನ್‌ ಜೊತೆಯಾಟವಾಡಿ, ನ್ಯೂಜಿಲೆಂಡ್‌ ಬೃಹತ್‌ ಮುನ್ನಡೆ ಪಡೆಯಲು ನೆರವಾದರು. ರಚಿನ್‌ 134 ರನ್‌ ಗಳಿಸಿದರೆ, ಸೌಥಿ 65 ರನ್‌ ಸಿಡಿಸಿದರು. ಕಿವೀಸ್‌ 91.3 ಓವರ್‌ ಬ್ಯಾಟ್‌ ಮಾಡಿ 402 ರನ್‌ ಕಲೆಹಾಕಿತು. ರೋಹಿತ್‌ ಸ್ಫೋಟಕ ಆಟ: ಆಕ್ರಮಣಕಾರಿ ಮನೋಭಾವದೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದ ಭಾರತ, ಆಕರ್ಷಕ ಬೌಂಡರಿಗಳನ್ನು ಬಾರಿಸಿ ತನ್ನ ಉದ್ದೇಶ ಸ್ಪಷ್ಟಪಡಿಸಿತು. ಯಶಸ್ವಿ ಜೈಸ್ವಾಲ್‌ 35 ರನ್‌ ಗಳಿಸಿದ್ದಾಗ ದುಬಾರಿ ಹೊಡೆತಕ್ಕೆ ಯತ್ನಿಸಿ ಸ್ಟಂಪ್‌ ಆದರೆ, ಅರ್ಧಶತಕ ಪೂರೈಸಿದ ಬಳಿಕ ರೋಹಿತ್‌(52)ಗೆ ಅದೃಷ್ಟ ಕೈಕೊಟ್ಟಿತು.

3ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ವಿರಾಟ್‌ ಕೊಹ್ಲಿ ಹಾಗೂ ಸರ್ಫರಾಜ್‌ ಖಾನ್‌ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿ, ರನ್‌ ಪೇರಿಸಿದರು. ಇವರಿಬ್ಬರ ನಡುವೆ 137 ರನ್‌ ಜೊತೆಯಾಟ ಮೂಡಿಬಂತು.

ಕೊಹ್ಲಿ ಹಾಗೂ ಸರ್ಫರಾಜ್‌ ಇಬ್ಬರೂ ಅರ್ಧಶತಕ ಬಾರಿಸಿ, ಕಿವೀಸ್‌ ಆಟಗಾರರಲ್ಲಿ ಆತಂಕ ಮೂಡಿಸಿದರು. ದಿನದಾಟದ ಕೊನೆಯ ಎಸೆತದಲ್ಲಿ ಕೊಹ್ಲಿ (70) ಔಟಾಗಿದ್ದರಿಂದ, ಕಿವೀಸ್‌ ಮಾನಸಿಕವಾಗಿ ಮುನ್ನಡೆ ಸಾಧಿಸಿದರೂ, ಭಾರತದ ಬ್ಯಾಟಿಂಗ್‌ ಪಡೆ ಬಲಿಷ್ಠವಾಗಿರುವ ಕಾರಣ, ತಂಡ ದೊಡ್ಡ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ. 70 ರನ್‌ ಗಳಿಸಿ ಔಟಾಗದೆ ಉಳಿದಿರುವ ಸರ್ಫರಾಜ್‌ ಎಷ್ಟು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿದ್ದಾರೆ ಎನ್ನುವುದರ ಮೇಲೆ ಈ ಪಂದ್ಯದಲ್ಲಿ ಭಾರತದ ಭವಿಷ್ಯ ನಿರ್ಧಾರವಾಗಬಹುದು. ಸ್ಕೋರ್‌: ಭಾರತ 36 ಹಾಗೂ (3ನೇ ದಿನದಂತ್ಯಕ್ಕೆ) 231/3 (ಸರ್ಫರಾಜ್‌ 70*, ಕೊಹ್ಲಿ 70*, ರೋಹಿತ್‌ 52, ಜೈಸ್ವಾಲ್‌ 35, ಅಜಾಜ್‌ 2-70), ನ್ಯೂಜಿಲೆಂಡ್‌ 402/10 (ರಚಿನ್‌ 134, ಸೌಥಿ 65, ಜಡೇಜಾ 3-72, ಕುಲ್ದೀಪ್‌ 3-99)

---ಕ್ಯಾಲೆಂಡರ್‌ ವರ್ಷದಲ್ಲಿ 100 ಸಿಕ್ಸರ್‌: ಭಾರತ ವಿಶ್ವದಾಖಲೆ!

147 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ 100 ಸಿಕ್ಸರ್‌ ಸಿಡಿಸಿದ ಮೊದಲ ತಂಡ ಎನ್ನುವ ದಾಖಲೆಯನ್ನು ಭಾರತ ಬರೆದಿದೆ. ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ಈ ಸಾಧನೆಗೈದಿತು. ವಿರಾಟ್‌ ಕೊಹ್ಲಿ ಸಿಡಿಸಿದ ಸಿಕ್ಸರ್‌ನಿಂದ ಈ ಮೈಲಿಗಲ್ಲು ದಾಖಲಾಯಿತು. ಅಲ್ಲದೇ, ಸತತ 3 ವರ್ಷ ಅಂ.ರಾ. ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚು ದಾಖಲಿಸಿದ ಸಾಧನೆಯನ್ನೂ ಭಾರತ ತಂಡ ಮಾಡಿತು.

Share this article