ರೋ-ಕೊ ಶೋ ‘ಯಶಸ್ವಿ’: ಭಾರತಕ್ಕೆ ಸರಣಿ

Published : Dec 07, 2025, 12:16 PM IST
Team India

ಸಾರಾಂಶ

ಬೌಲರ್‌ಗಳ ಬಿಗು ದಾಳಿ, ಯಶಸ್ವಿ ಜೈಸ್ವಾಲ್‌ರ ಚೊಚ್ಚಲ ಏಕದಿನ ಶತಕ, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಪಂದ್ಯದಲ್ಲಿ ಭಾರತ 9 ವಿಕೆಟ್‌ ಭರ್ಜರಿ ಜಯಗಳಿಸಿತು.

ವಿಶಾಖಪಟ್ಟಣ: ಬೌಲರ್‌ಗಳ ಬಿಗು ದಾಳಿ, ಯಶಸ್ವಿ ಜೈಸ್ವಾಲ್‌ರ ಚೊಚ್ಚಲ ಏಕದಿನ ಶತಕ, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಪಂದ್ಯದಲ್ಲಿ ಭಾರತ 9 ವಿಕೆಟ್‌ ಭರ್ಜರಿ ಜಯಗಳಿಸಿತು. ಇದರೊಂದಿಗೆ ತಂಡ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದಿದ್ದು, ಟೆಸ್ಟ್‌ ಸರಣಿ ಸೋಲಿನ ಮುಖಭಂಗದ ಬಳಿಕ ಅಲ್ಪ ಸಂಭ್ರಮಿಸಿತು.

ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 47.5 ಓವರ್‌ಗಳಲ್ಲಿ 270 ರನ್‌ಗೆ ಆಲೌಟಾಯಿತು. 1 ರನ್‌ಗೇ ಮೊದಲ ವಿಕೆಟ್‌ ಪತನಗೊಂಡರೂ, ಆರಂಭಿಕ ಆಟಗಾರ ಕ್ವಿಂಟನ್‌ ಡಿ ಕಾಕ್‌ 89 ಎಸೆತಕ್ಕೆ 106 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ನಾಯಕ ತೆಂಬಾ ಬವುಮಾ(48) ಹೋರಾಟ ಕೂಡಾ ತಂಡಕ್ಕೆ ನೆರವಾಯಿತು. ಇವರಿಬ್ಬರನ್ನು ಪೆವಿಲಿಯನ್‌ಗೆ ಅಟ್ಟಿದ ಬಳಿಕ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆರಂಭದಲ್ಲಿ ದುಬಾರಿಯಾಗಿದ್ದ ಪ್ರಸಿದ್ಧ್ ಕೃಷ್ಣ, ಡಿ ಕಾಕ್‌ ಸೇರಿ ನಾಲ್ವರನ್ನು ಔಟ್‌ ಮಾಡಿದರು. ಕುಲ್ದೀಪ್‌ ಕೂಡಾ 4 ವಿಕೆಟ್‌ ಕಿತ್ತರು.

ಸುಲಭದಲ್ಲಿ ಚೇಸ್‌:

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಸುಲಭದಲ್ಲೇ ರನ್‌ ಚೇಸ್‌ ಮಾಡಿ ಗೆದ್ದಿತು. ತಂಡ 39.5 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್-ರೋಹಿತ್‌ ಶರ್ಮಾ 155 ರನ್‌ ಸೇರಿಸಿದರು. ಆರಂಭದಲ್ಲಿ ನಿಧಾನವಾಗಿ ಬ್ಯಾಟ್‌ ಬೀಸಿದ ಜೈಸ್ವಾಲ್‌ ಬಳಿಕ ಅಬ್ಬರದ ಆಟವಾಡಿ, ಚೊಚ್ಚಲ ಶತಕ(ಔಟಾಗದೆ 116 ರನ್‌) ಪೂರ್ಣಗೊಳಿಸಿದರು. ರೋಹಿತ್‌ ಶರ್ಮಾ ಮತ್ತೆ ಸ್ಫೋಟಕ ಆಟವಾಡಿ 73 ಎಸೆತಕ್ಕೆ 75 ರನ್‌ ಸಿಡಿಸಿ ಔಟಾದರು. ರೋಹಿತ್‌ ನಿರ್ಗಮನ ಬಳಿಕ ವಿರಾಟ್‌ ಕೊಹ್ಲಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಆರಂಭಿಕ 2 ಪಂದ್ಯಗಳಲ್ಲೂ ಶತಕ ಬಾರಿಸಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲೇ 65 ರನ್‌ ಸಿಡಿಸಿ ಔಟಾಗದೆ ಉಳಿದರು.

ಸ್ಕೋರ್: ದ.ಆಫ್ರಿಕಾ 47.5 ಓವರಲ್ಲಿ 270/10 (ಡಿ ಕಾಕ್‌ 106, ಬವುಮಾ 48, ಕುಲ್ದೀಪ್‌ 4-41, ಪ್ರಸಿದ್ಧ್‌ 4-66), ಭಾರತ 39.5 ಓವರ್‌ನಲ್ಲಿ 271/1 (ಜೈಸ್ವಾಲ್‌ ಔಟಾಗದೆ 116, ರೋಹಿತ್‌ 75, ಕೊಹ್ಲಿ ಔಟಾಗದೆ 65, ಕೇಶವ್‌ 1-44)

ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್‌ । ಸರಣಿಶ್ರೇಷ್ಠ: ವಿರಾಟ್‌ ಕೊಹ್ಲಿ

06 ಕ್ರಿಕೆಟಿಗ

ಟೆಸ್ಟ್‌, ಏಕದಿನ, ಅಂ.ರಾ.ಟಿ20 ಈ ಎಲ್ಲಾ 3 ಮಾದರಿಯಲ್ಲೂ ಶತಕ ಬಾರಿಸಿದ ಭಾರತದ 6ನೇ ಕ್ರಿಕೆಟಿಗ ಜೈಸ್ವಾಲ್‌. ರೈನಾ, ರೋಹಿತ್‌, ರಾಹುಲ್‌, ವಿರಾಟ್‌, ಗಿಲ್‌ ಇತರ ಸಾಧಕರು.

02 ವರ್ಷ

ಭಾರತ ತಂಡ 2 ವರ್ಷ ಬಳಿಕ ಏಕದಿನದಲ್ಲಿ ಟಾಸ್‌ ಗೆದ್ದಿತು. 2023ರ ವಿಶ್ವಕಪ್‌ನ ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ ಬಳಿಕ ತಂಡ ಸತತ 20 ಪಂದ್ಯಗಳಲ್ಲಿ ಟಾಸ್ ಸೋತಿತ್ತು.

302 ರನ್‌

ಕೊಹ್ಲಿ ಈ ಸರಣಿಯ 3 ಪಂದ್ಯಗಳಲ್ಲಿ ಒಟ್ಟು 302 ರನ್‌ ಕಲೆಹಾಕಿದ್ದಾರೆ. ಕ್ರಮವಾಗಿ 135, 102 ಹಾಗೂ 65 ರನ್‌ ಸಿಡಿಸಿದ್ದಾರೆ.

ರೋಹಿತ್‌ 20000 ರನ್‌

ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಭಾರತದ 4ನೇ, ವಿಶ್ವದ 14ನೇ ಆಟಗಾರ ಎನಿಸಿಕೊಂಡರು. ಅವರು ಟೆಸ್ಟ್‌ನಲ್ಲಿ 4301, ಏಕದಿನದಲ್ಲಿ 11516, ಅಂ.ರಾ. ಟಿ20ಯಲ್ಲಿ 4231 ರನ್‌ ಗಳಿಸಿದ್ದಾರೆ. ಸಚಿನ್‌ ತೆಂಡುಲ್ಕರ್‌(34357), ವಿರಾಟ್‌ ಕೊಹ್ಲಿ(27975), ರಾಹುಲ್‌ ದ್ರಾವಿಡ್‌(24208) ಕೂಡಾ ಭಾರತದ ಪರ 20 ಸಾವಿರ ರನ್‌ ಕಲೆಹಾಕಿದ್ದಾರೆ.

12 ಬಾರಿ ಸರಣಿಶ್ರೇಷ್ಠ:ಕೊಹ್ಲಿ ಈಗ ವಿಶ್ವ ನಂ.2

ಕೊಹ್ಲಿ ಏಕದಿನದಲ್ಲಿ 12ನೇ ಬಾರಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕದಿನದಲ್ಲಿ ಗರಿಷ್ಠ ಬಾರಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ಸನತ್‌ ಜಯಸೂರ್ಯ(11) 3ನೇ ಸ್ಥಾನಕ್ಕೆ ಕುಸಿದರು. ಸಚಿನ್ 15 ಬಾರಿ ಈ ಸಾಧನೆ ಮಾಡಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಮೌಲ್ಯ ಭಾರೀ ಕುಸಿತ!
ಭಾರತಕ್ಕೆ 101 ರನ್‌ ಗೆಲುವು - 1ನೇ ಟಿ20 : ದ.ಆಫ್ರಿಕಾ ಮೇಲೆ ಭಾರತ ಸವಾರಿ