ಲಖನೌ ವಿರುದ್ಧ ಆರ್‌ಸಿಬಿಗಿದ್ಯಾ ಗೆಲ್ಲುವ ಲಕ್‌?

KannadaprabhaNewsNetwork |  
Published : Apr 02, 2024, 01:02 AM ISTUpdated : Apr 02, 2024, 04:16 AM IST
ಅಭ್ಯಾಸ ವೇಳೆ ಕೊಹ್ಲಿ-ಡು ಪ್ಲೆಸಿ | Kannada Prabha

ಸಾರಾಂಶ

ಇಂದು ಲಖನೌ ವಿರುದ್ಧ ಮಹತ್ವದ ಪಂದ್ಯ. ಒನ್‌ ಮ್ಯಾನ್‌ ಶೋಗೆ ಸೀಮಿತವಾಗದೆ ಸಂಘಟಿತ ಹೋರಾಟ ತೋರಬೇಕಿದೆ ಆರ್‌ಸಿಬಿ. ಪಾಟೀದಾರ್‌ಗೆ ಕೊಕ್‌ ಸಾಧ್ಯತೆ. ಜೋಸೆಫ್‌ರನ್ನು ಹೊರಗಿಟ್ಟು ಜ್ಯಾಕ್ಸ್‌ಗೆ ಕೊಡ್ತಾರಾ ಚಾನ್ಸ್‌. ಮತ್ತೆ ಮಿಂಚ್ತಾರಾ ವೇಗಿ ಮಯಾಂಕ್‌?

 ಬೆಂಗಳೂರು : ವಿರಾಟ್‌ ಕೊಹ್ಲಿಯ ಒನ್‌ ಮ್ಯಾನ್‌ ಶೋ ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ಕೊಡುತ್ತಿದೆ ನಿಜ, ಆದರೆ ತಂಡ ‘ಒನ್‌ ಮೋರ್‌, ಒನ್‌ ಮೋರ್‌’ ಗೆಲುವು ಸಾಧಿಸಬೇಕು ಎನ್ನುವುದೂ ಕೂಡ ಅಭಿಮಾನಿಗಳ ಒತ್ತಾಸೆಯಾಗಿದೆ. 

ಕೇವಲ ಹೃದಯ ಗೆಲ್ಲುವುದಷ್ಟೇ ಅಲ್ಲ, ಕಪ್‌ ಗೆಲ್ಲಬೇಕು ಎನ್ನುವ ಉದ್ದೇಶ ನಿಜವೇ ಆದರೆ, ಆರ್‌ಸಿಬಿ ತಂಡದಲ್ಲಿ ಕೆಲ ಮಹತ್ವದ ಬದಲಾವಣೆಗಳು ಆಗಬೇಕಿದ್ದು, ಅವು ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಿಂದಲೇ ಆಗಬೇಕಿದೆ. 

ಆರ್‌ಸಿಬಿಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಆ ಪ್ರತಿಭೆಗಳು ಆರ್‌ಸಿಬಿಯಲ್ಲಿ ಇರುವಷ್ಟು ಸಮಯ ತಮ್ಮ ನೈಜ ಆಟವನ್ನು ಆಡುವುದು ಅಪರೂಪ. ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಿದ ಮೇಲೆ ಪ್ರಚಂಡರಾದ ಆಟಗಾರರ ಉದಾಹರಣೆ ಒಂದೇ ಎರಡೇ. ಸದ್ಯಕ್ಕೆ ತಂಡದಲ್ಲಿ ವಿಲ್‌ ಜ್ಯಾಕ್ಸ್‌ ಎನ್ನುವ ದೈತ್ಯ ಪ್ರತಿಭೆಯೊಂದಿದೆ. ಆ ಪ್ರತಿಭೆಯನ್ನು ಮೊದಲ 3 ಪಂದ್ಯಗಳಲ್ಲಿ ಬೆಂಚ್‌ ಕಾಯಿಸಿರುವ ತಂಡದ ಆಡಳಿತ, ಈ ಪಂದ್ಯದಲ್ಲಾದರೂ ಇಂಗ್ಲಿಷ್‌ ಆಲ್ರೌಂಡರ್‌ಗೆ ಚಾನ್ಸ್‌ ಕೊಡಬೇಕಿದೆ. 

ಸಂಪೂರ್ಣ ಭಾರತೀಯ ಬೌಲಿಂಗ್‌ ಪಡೆಯೊಂದಿಗೆ ಕಣಕ್ಕಿಳಿದು, ಜ್ಯಾಕ್ಸ್‌ರನ್ನು 4ನೇ ವಿದೇಶಿ ಆಟಗಾರನಾಗಿ ಆಡಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಅನೇಕ ತಜ್ಞರು ಅಭಿಪ್ರಾಯಿಸಿದ್ದಾರೆ. ಇನ್ನು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆರಂಭಗೊಂಡ ರಜತ್‌ ಪಾಟೀದಾರ್‌ರ ರನ್‌ ಬರ ಇನ್ನೂ ನೀಗಿಲ್ಲ. ಹೀಗಾಗಿ ಅವರನ್ನು ಹೊರಗಿಟ್ಟು ಬೇರೆಯವರಿಗೆ ಅವಕಾಶ ನೀಡಲೇಬೇಕಾದ ಪರಿಸ್ಥಿತಿ ಇದೆ.

 ದಿನೇಶ್‌ ಕಾರ್ತಿಕ್‌ ಅತ್ಯುತ್ತಮ ಲಯದಲ್ಲಿದ್ದು, ಅವರು ಹೆಚ್ಚು ಎಸೆತಗಳನ್ನು ಎದುರಿಸಿದರೆ ಉತ್ತಮ ಎನಿಸುತ್ತಿದೆ. ಹೀಗಾಗಿ ಕಾರ್ತಿಕ್‌ರನ್ನು ಮೇಲ್ಕ್ರಮಾಂಕದಲ್ಲಿ ಆಡಿಸಿದರೆ ಇನ್ನಷ್ಟು ರನ್‌ ಬರಬಹುದು. ಕ್ಯಾಮರೂನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡು ಪ್ಲೆಸಿ ಮೈ ಚಳಿ ಬಿಟ್ಟು ಚೆಂಡನ್ನು ಪುಡಿ ಮಾಡಬೇಕದೆ. ಚಿನ್ನಸ್ವಾಮಿಯಲ್ಲಿ 200 ರನ್‌ ಕೂಡ ಸುರಕ್ಷಿತವಲ್ಲ. ಅದರಲ್ಲೂ ಆರ್‌ಸಿಬಿಯ ಬೌಲಿಂಗ್‌ ಪಡೆಯನ್ನು ಗಮನದಲ್ಲಿಟ್ಟುಕೊಂಡರೆ ಇನ್ನೂ 20-25 ರನ್‌ ಜಾಸ್ತಿಯೇ ಗಳಿಸಬೇಕಾಗಬಹುದು. ಹೀಗಾಗಿ, ಸಾಧ್ಯವಾದಷ್ಟು ಬ್ಯಾಟಿಂಗ್‌ ಪಡೆಯನ್ನು ಬಲಿಷ್ಠಗೊಳಿಸಿಕೊಳ್ಳುವುದರ ಕಡೆಗೆ ತಂಡ ಗಮನ ಹರಿಸಿದರೆ ಉತ್ತಮ ಎಂದು ವಿಶ್ಲೇಷಿಸಲಾಗುತ್ತಿದೆ. 

ಇನ್ನು ಕನ್ನಡಿಗ ಮನೋಜ್‌ ಭಾಂಡಗೆಗೆ ಒಂದಾದರೂ ಅವಕಾಶ ಸಿಗಲಿದೆಯೇ ಎನ್ನುವ ಕಾತರ ತವರಿನ ಅಭಿಮಾನಿಗಳದ್ದು. 

ಮಯಾಂಕ್‌ ಭೀತಿ: ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಲಖನೌ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಎಕ್ಸ್‌ಪ್ರೆಸ್‌ ವೇಗಿ ಮಯಾಂಕ್‌ ಯಾದವ್‌ ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೇಗೆ ಬೌಲ್‌ ಮಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಕೆ.ಎಲ್‌.ರಾಹುಲ್‌ ಈ ಪಂದ್ಯದಲ್ಲೂ ಕೇವಲ ತಜ್ಞ ಬ್ಯಾಟರ್‌ ಆಗಿ ಆಡುತ್ತಾರೆಯೇ, ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಮುಟ್ಟಿ ನೋಡಿಕೊಳ್ಳುವಂತೆ ಚಚ್ಚಿದ್ದ ನಿಕೋಲಸ್‌ ಪೂರನ್‌ ಈ ಬಾರಿಯೂ ಆರ್‌ಸಿಬಿ ಗಾಯದ ಮೇಲೆ ಬರೆ ಎಳೆಯುತ್ತಾರೆ, ಹೀಗೆ ಅನೇಕ ಕೌತುಕಗಳೊಂದಿಗೆ ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲಿದ್ದಾರೆ.

ಒಟ್ಟು ಮುಖಾಮುಖಿ: 04ಆರ್‌ಸಿಬಿ: 03ಲಖನೌ: 01

ಸಂಭವನೀಯ ಆಟಗಾರರ ಪಟ್ಟಿ 

ಆರ್‌ಸಿಬಿ: ಡು ಪ್ಲೆಸಿ(ನಾಯಕ), ವಿರಾಟ್‌, ಗ್ರೀನ್‌, ರಜತ್‌/ಜ್ಯಾಕ್ಸ್‌, ಮ್ಯಾಕ್ಸ್‌ವೆಲ್‌, ಅನುಜ್‌, ಕಾರ್ತಿಕ್‌, ಡಾಗರ್‌, ಸಿರಾಜ್‌, ಜೋಸೆಫ್‌/ವೈಶಾಕ್‌, ದಯಾಳ್‌.ಲಖನೌ: ಡಿ ಕಾಕ್‌, ರಾಹುಲ್‌, ಪಡಿಕ್ಕಲ್‌, ಬದೋನಿ, ಪೂರನ್‌(ನಾಯಕ), ಸ್ಟೋಯ್ನಿಸ್‌, ಕೃನಾಲ್‌, ಬಿಷ್ಣೋಯ್‌, ಮೊಹ್ಸಿನ್‌, ಮಯಾಂಕ್‌, ಸಿದ್ಧಾರ್ಥ್‌.ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಮತ್ತೆ ರನ್ ಮಳೆ ಹರಿಯಬಹುದು. ಇಲ್ಲಿ 2023 ಮತ್ತು ಈ ವರ್ಷದ ಒಟ್ಟು 18 ಐಪಿಎಲ್‌ ಇನ್ನಿಂಗ್ಸ್‌ಗಳ ಪೈಕಿ 17ರಲ್ಲಿ 170+ ರನ್‌ ದಾಖಲಾಗಿವೆ. ಮೊದಲು ಬ್ಯಾಟ್‌ ಮಾಡುವ ತಂಡ 200+ ರನ್‌ ಗಳಿಸಿದರಷ್ಟೇ ಗೆಲ್ಲುವ ಸಾಧ್ಯತೆಯಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!