ಅಹಮದಾಬಾದ್: ಸತತ ಸೋಲುಗಳಿಂದ ಕಂಗೆಟ್ಟು ಪ್ಲೇ-ಆಫ್ ಹಾದಿಯಿಂದ ಒಂದು ಕಾಲು ಹೊರಗಿಟ್ಟಿರುವ ಆರ್‌ಸಿಬಿ ಈಗ ಫೀನಿಕ್ಸ್‌ನಂತೆ ಎದ್ದು ಬರುತ್ತಿದ್ದು, ತನ್ನ ಅತ್ಯಾಕರ್ಷಕ ಆಟದ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುತ್ತಿದೆ.
ವಿಲ್ ಜ್ಯಾಕ್ಸ್‌ರ ಸಿಕ್ಸರ್ ಸುರಿಮಳೆ, ರನ್ ಮೆಷಿನ್ ಕೊಹ್ಲಿಯ ಆರ್ಭಟದ ಮೂಲಕ ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಆರ್‌ಸಿಬಿ 9 ವಿಕೆಟ್‌ಗಳಿಂದ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿದೆ. ಆರ್‌ಸಿಬಿ 10ರಲ್ಲಿ 3ನೇ ಗೆಲುವು ದಾಖಲಿಸಿದರೂ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದ್ದು, ಗುಜರಾತ್ 10ರಲ್ಲಿ 6ನೇ ಸೋಲುಂಡು ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತು.
ಗುಜರಾತನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಆರ್‌ಸಿಬಿ, ಮತ್ತೆ ಕಳಪೆ ಬೌಲಿಂಗ್ ಮಾಡಿ 3 ವಿಕೆಟ್‌ಗೆ 200 ರನ್ ಬಿಟ್ಟುಕೊಟ್ಟಿತು. ಎಂತೆಂಥಾ ದಾಖಲೆಗಳಿಗೆ ಸಾಕ್ಷಿಯಾದ ಈ ಐಪಿಎಲ್‌ನಲ್ಲಿ ಈ ಮೊತ್ತ ಕಡಿಮೆಯೇ. ಅದನ್ನು ಆರ್‌ಸಿಬಿ ತನ್ನ ಬ್ಯಾಟಿಂಗ್ ಶೈಲಿಯ ಮೂಲಕ ಮತ್ತೆ ಸಾಬೀತುಪಡಿಸಿತು.12 ಎಸೆತದಲ್ಲಿ 24 ರನ್ ಗಳಿಸಿ ನಾಯಕ ಡು ಪ್ಲೆಸಿ ಪೆವಿಲಿಯನ್‌ಗೆ ಮರಳಿದರೂ, ಬಳಿಕ ಶುರುವಾಗಿದ್ದ ಕೊಹ್ಲಿ-ಜ್ಯಾಕ್ಸ್ ಶೋ. ಟೈಟಾನ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮುರಿಯದ 2ನೇ ವಿಕೆಟ್‌ಗೆ 74 ಎಸೆತದಲ್ಲಿ 166 ರನ್ ಸಿಡಿಸಿತು.
ಅದರಲ್ಲೂ ಕೊನೆಯಲ್ಲಿ ಜ್ಯಾಕ್ಸ್‌ರ ಆಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮೊದಲ 17 ಎಸೆತದಲ್ಲಿ 17 ರನ್ ಸಿಡಿಸಿದ್ದ ಜ್ಯಾಕ್ಸ್, 31 ಎಸೆತದಲ್ಲಿ ಅರ್ಧಶತಕ ಗಳಿಸಿದರು. ಆದರೆ ಬಳಿಕ ಸೆಂಚುರಿ ಪೂರ್ಣಗೊಳಿಸಲು ಕೇವಲ 10 ಎಸೆತ ತೆಗೆದುಕೊಂಡರು. 15 ಮತ್ತು 16ನೇ ಓವರಲ್ಲಿ ತಲಾ 28 ರನ್ ಚಚ್ಚಿದ ಜ್ಯಾಕ್ಸ್ 41 ಎಸೆತದಲ್ಲಿ 5 ಬೌಂಡರಿ, 10 ಸಿಕ್ಸರ್‌ನೊಂದಿಗೆ 100 ರನ್ ಬಾರಿಸಿದರು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟಿದ್ದ ವಿರಾಟ್ 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 70 ರನ್ ಸಿಡಿಸಿ ಔಟಾಗದೆ ಉಳಿದರು.
ಸುದರ್ಶನ್, ಶಾರುಖ್ ಅಬ್ಬರ: ಆರ್‌ಸಿಬಿ ಬೌಲರ್‌ಗಳು ಈ ಬಾರಿ ಆರಂಭದಲ್ಲಿ ಮಿಂಚಿದರಾದರೂ ಕೊನೆಯಲ್ಲಿ ಕೈ ಸುಟ್ಟುಕೊಂಡರು. ಇದಕ್ಕೆ ಕಾರಣವಾಗಿದ್ದು ಸಾಯಿ ಸುದರ್ಶನ್, ಶಾರುಖ್ ಅಬ್ಬರದ ಆಟ. ಸಾಹ(05), ಶುಭ್‌ಮನ್ ಗಿಲ್(16) ಬೇಗನೇ ಔಟಾದರೂ ಕೊನೆವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸಾಯಿ ಸುದರ್ಶನ್ 49 ಎಸೆತಗಳಲ್ಲಿ 84 ರನ್ ಸಿಡಿಸಿದರೆ, ಶಾರುಖ್ 30 ಎಸೆತಗಳಲ್ಲಿ 58 ರನ್ ಚಚ್ಚಿದರು. ಡೇವಿಡ್ ಮಿಲ್ಲರ್(ಔಟಾಗದೆ 26) ತಂಡವನ್ನು 200ರ ಗಡಿ ತಲುಪಿಸಿದರು.
ಸ್ಕೋರ್: ಗುಜರಾತ್ 20 ಓವರಲ್ಲಿ 200/3 (ಸುದರ್ಶನ್ 84, ಶಾರುಖ್ 58, ಸ್ವಪ್ನಿಲ್ 1-23), ಆರ್‌ಸಿಬಿ 16 ಓವರಲ್ಲಿ 206/1 (ಜ್ಯಾಕ್ಸ್ 100*, ಕೊಹ್ಲಿ 70*, ಕಿಶೋರ್ 1-30) ಪಂದ್ಯಶ್ರೇಷ್ಠ: ವಿಲ್ ಜ್ಯಾಕ್ಸ್.
ಐಪಿಎಲ್‌ನಲ್ಲಿ ವೇಗದ 200+ ಚೇಸ್
ಆರ್‌ಸಿಬಿ 16 ಓವರಲ್ಲೇ 201 ರನ್ ಗುರಿ ಬೆನ್ನತ್ತಿತು. ಇದು ಐಪಿಎಲ್ ಇತಿಹಾಸದಲ್ಲೇ ವೇಗದ 200+ ಚೇಸ್. 2023ರಲ್ಲಿ ಆರ್‌ಸಿಬಿ ವಿರುದ್ಧ ಮುಂಬೈ 16.3 ಓವರಲ್ಲಿ 200 ರನ್ ಗುರಿ ಬೆನ್ನತ್ತಿ ಗೆದ್ದಿದ್ದು ಈ ವರೆಗಿನ ದಾಖಲೆ.
02ನೇ ಬಾರಿ: ಆರ್‌ಸಿಬಿ ಐಪಿಎಲ್‌ನಲ್ಲಿ 200+ ರನ್ ಯಶಸ್ವಿಯಾಗಿ ಬೆನ್ನತ್ತಿದ್ದು ಇದು 2ನೇ ಬಾರಿ. 2010ರಲ್ಲಿ ಪಂಜಾಬ್ ವಿರುದ್ಧ ಮೊದಲ ಬಾರಿ ಈ ಸಾಧನೆ ಮಾಡಿತ್ತು.
6.41ಕ್ಕೆ ಫಿಫ್ಟಿ, 6.47ಕ್ಕೆ ಸೆಂಚುರಿ!
ಜ್ಯಾಕ್ಸ್‌ರ ಆರ್ಭಟ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರು ಅರ್ಧಶತಕದಿಂದ ಶತಕಕ್ಕೆ ತಲುಪಲು ಕೇವಲ 6 ನಿಮಿಷ ತೆಗೆದುಕೊಂಡರು. ಸಂಜೆ 6.41ಕ್ಕೆ ಅರ್ಧಶತಕ ಪೂರ್ಣಗೊಳಿಸಿ ಬ್ಯಾಟ್ ಎತ್ತಿ ಸಂಭ್ರಮಿಸಿದ ಜ್ಯಾಕ್ಸ್, 6.47ರ ವೇಳೆಗೆ ಸಿಕ್ಸರ್ ಮೂಲಕ ಸೆಂಚುರಿ ಭರ್ತಿ ಮಾಡಿದರು.
ವಾರ್ನರ್ ದಾಖಲೆ ಸರಿಗಟ್ಟಿದ ವಿರಾಟ್
ಕೊಹ್ಲಿ ಈ ಐಪಿಎಲ್‌ನಲ್ಲಿ 500 ರನ್ ಪೂರ್ಣಗೊಳಿಸಿದರು. ಈ ಮೂಲಕ ಅತಿ ಹೆಚ್ಚು ಆವೃತ್ತಿಗಳಲ್ಲಿ 500+ ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಡೇವಿಡ್ ವಾರ್ನರ್‌ರನ್ನು ಸರಿಗಟ್ಟಿದರು. ಇವರಿಬ್ಬರೂ ತಲಾ 7 ಆವೃತ್ತಿಗಳಲ್ಲಿ 500+ ರನ್ ಸಿಡಿಸಿದ್ದಾರೆ. ಶಿಖರ್ ಧವನ್ ಹಾಗೂ ಕೆ.ಎಲ್.ರಾಹುಲ್ ತಲಾ 5 ಬಾರಿ ಈ ಸಾಧನೆ ಮಾಡಿದ್ದಾರೆ.
24ನೇ ಫಿಫ್ಟಿ: ಐಪಿಎಲ್‌ನಲ್ಲಿ ಚೇಸಿಂಗ್ ವೇಳೆ ಕೊಹ್ಲಿ 24ನೇ ಅರ್ಧಶತಕ ಬಾರಿಸಿದರು. ಪಟ್ಟಿಯಲ್ಲಿ ಡೇವಿಡ್ ವಾರ್ನರ್(35) ಮೊದಲ ಸ್ಥಾನದಲ್ಲಿದ್ದಾರೆ.