ಸೋಲಿಲ್ಲದ ರಾಯಲ್ಸ್‌ಗೆ ಸೋಲುಣಿಸುತ್ತಾ ಆರ್‌ಸಿಬಿ?

KannadaprabhaNewsNetwork |  
Published : Apr 06, 2024, 12:50 AM ISTUpdated : Apr 06, 2024, 04:08 AM IST
ಅಭ್ಯಾಸದ ವೇಳೆ ಕೊಹ್ಲಿ(ಕನ್ನಡಪ್ರಭ ಚಿತ್ರ) | Kannada Prabha

ಸಾರಾಂಶ

ಹ್ಯಾಟ್ರಿಕ್‌ ಪಂದ್ಯ ಗೆದ್ದಿರುವ ರಾಜಸ್ಥಾನದ ವಿರುದ್ಧ ಆರ್‌ಸಿಬಿಗೆ ಕಠಿಣ ಸವಾಲು. ಸುಧಾರಿತ ಪ್ರದರ್ಶನ ನೀಡದಿದ್ದರೆ ಜೈಪುರದಲ್ಲೂ ಸೋಲೇ ಗತಿ. ಬದಲಾವಣೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ. ಈ ಪಂದ್ಯದಲ್ಲಾದರೂ ವಿಲ್‌ ಜ್ಯಾಕ್ಸ್‌ಗೆ ಸಿಗುತ್ತಾ ಚಾನ್ಸ್‌?. ರಾಯಲ್ಸ್‌ಗೆ 4ನೇ ಜಯ ಗುರಿ

ಜೈಪುರ: ಹೊಸ ಅಧ್ಯಾಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿದರೂ ತನ್ನ ಹಳೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಆರ್‌ಸಿಬಿ ಈಗ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದೆ. ಅದೇನೇ ಮಾಡಿದರೂ ಸೋಲು ಮಾತ್ರ ಆರ್‌ಸಿಬಿಯ ಬೆಂಬಿಡದೆ ಕಾಡುತ್ತಿದ್ದು, ಶನಿವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಗೆಲ್ಲುವ ಮೂಲಕ ಜಯದ ಹಳಿಗೆ ಮರಳುವ ಕಾತರದಲ್ಲಿದೆ.

 ಆದರೆ ರಾಯಲ್ಸ್‌ನ ತವರು ಜೈಪುರದಲ್ಲಿ ಪಂದ್ಯ ಗೆಲ್ಲುವುದು ತನ್ನ ಈ ವರೆಗಿನ ಪ್ರದರ್ಶನದಿಂದ ಅಸಾಧ್ಯ ಎಂಬ ಅರಿವು ಆರ್‌ಸಿಬಿಗೆ ಇದೆ.ಆರ್‌ಸಿಬಿ ಈ ವರೆಗೆ 4 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ತವರಿನ 2 ಪಂದ್ಯಗಳಲ್ಲೇ ಸೋತಿದ್ದು ತಂಡದ ಹೀನಾಯ ಸ್ಥಿತಿಗೆ ಹಿಡಿದ ಕೈಗನ್ನಡಿ. ವಿರಾಟ್‌ ಕೊಹ್ಲಿಯನ್ನು ಬಿಟ್ಟರೆ ಇತರ ಯಾರೊಬ್ಬರೂ ಆರ್‌ಸಿಬಿ ಗೆಲ್ಲಬೇಕೆಂದು ಆಡುವಂತೆ ತೋರುತ್ತಿಲ್ಲ. ಫಾಫ್‌ ಡು ಪ್ಲೆಸಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ಜೊತೆ ದೇಸಿ ಕ್ರಿಕೆಟ್‌ ತಾರೆ ರಜತ್‌ ಪಾಟೀದಾರ್‌ ಕೂಡಾ ವಿಫಲರಾಗುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಂಗ್ಲೆಂಡ್‌ನ ಪ್ರತಿಭೆ ವಿಲ್‌ ಜ್ಯಾಕ್ಸ್‌ರನ್ನು ಆಡಿಸಿದರೆ ಬ್ಯಾಟಿಂಗ್‌ ಜೊತೆ ಬೌಲಿಂಗ್‌ ವಿಭಾಗಕ್ಕೂ ನೆರವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. 

ಆದರೆ ಅವರಿಗೆ ಫ್ರಾಂಚೈಸಿ ಅವಕಾಶ ನೀಡುತ್ತದೆಯೇ ಎಂಬ ಕುತೂಹಲವಿದೆ. ಮಹಿಪಾಲ್‌ ಲೊಮ್ರೊರ್‌, ದಿನೇಶ್‌ ಕಾರ್ತಿಕ್‌ ಕೆಳ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸುವ ನಿರೀಕ್ಷೆಯಿದ್ದರೂ, ರಾಜಸ್ಥಾನದ ಬಲಿಷ್ಠ ಬೌಲಿಂಗ್‌ ಪಡೆಯನ್ನು ಯಾವ ರೀತಿ ಹಿಮ್ಮೆಟ್ಟಿಸುತ್ತಾರೆ ಎಂಬ ಕಾತರ ಅಭಿಮಾನಿಗಳಲ್ಲಿದೆ. ಆರ್‌ಸಿಬಿಯ ಬೌಲಿಂಗ್ ವಿಭಾಗ ಕೂಡಾ ಮೊನಚು ಕಳೆದುಕೊಂಡಿದ್ದು, ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಕಳೆದ ಪಂದ್ಯದಲ್ಲಿ ಬೆಂಚ್‌ ಕಾಯ್ದಿದ್ದ ಕನ್ನಡಿಗ ವೇಗಿ ವೈಶಾಕ್‌, ಎಲ್ಲಾ ಪಂದ್ಯದಿಂದಲೂ ಹೊರಗುಳಿದಿದ್ದ ಮನೋಜ್‌ ಭಾಂಡಗೆ ಈ ಬಾರಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಬ್ಯಾಟಿಂಗ್‌ ಚಿಂತೆ: ರಾಜಸ್ಥಾನ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದರೂ ತಂಡದಲ್ಲಿ ಕೆಲ ಸಮಸ್ಯೆಗಳಿರುವುದು ಸುಳ್ಳಲ್ಲ. ಯಶಸ್ವಿ ಜೈಸ್ವಾಲ್‌, ಜೋಶ್‌ ಬಟ್ಲರ್‌ ಇನ್ನಷ್ಟೇ ತಮ್ಮ ನೈಜ ಪ್ರದರ್ಶನ ತೋರಬೇಕಿದೆ. ಆದರೆ ರಿಯಾನ್‌ ಪರಾಗ್‌ ಲಯಕ್ಕೆ ಮರಳಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್‌. ಜೊತೆಗೆ ನಾಯಕ ಸಂಜು ಸ್ಯಾಮ್ಸನ್‌ ಕೂಡಾ ಅಬ್ಬರಿಸಬಲ್ಲರು. ಧ್ರುವ್‌ ಜುರೆಲ್‌, ಹೆಟ್ಮೇಯರ್‌ ಮೇಲೂ ನಾಯಕನಿಗೆ ಭಾರೀ ನಿರೀಕ್ಷೆಯಿದೆ. ಇನ್ನು, ಟ್ರೆಂಟ್‌ ಬೌಲ್ಟ್‌, ಸಂದೀಪ್ ಶರ್ಮಾ, ಚಹಲ್‌, ಅಶ್ವಿನ್‌, ಆವೇಶ್‌ ಖಾನ್‌, ನಂಡ್ರೆ ಬರ್ಗರ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದ್ದು, ಆರ್‌ಸಿಬಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.ಒಟ್ಟು ಮುಖಾಮುಖಿ: 29ಆರ್‌ಸಿಬಿ: 15ರಾಜಸ್ಥಾನ: 12

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಗ್ರೀನ್‌, ಮ್ಯಾಕ್ಸ್‌ವೆಲ್‌, ರಜತ್‌, ಕಾರ್ತಿಕ್‌, ಅನುಜ್‌, ಮಯಾಂಕ್‌ ಡಾಗರ್‌, ಟಾಪ್ಲಿ, ಸಿರಾಜ್‌, ದಯಾಳ್‌. 

ರಾಜಸ್ಥಾನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌(ನಾಯಕ), ರಿಯಾನ್‌, ಜುರೆಲ್‌, ಹೆಟ್ಮೇಯರ್‌, ಅಶ್ವಿನ್‌, ಬೌಲ್ಟ್‌, ಆವೇಶ್‌, ಬರ್ಗರ್‌, ಚಹಲ್‌.

ಪಂದ್ಯ ಆರಂಭ: ರಾತ್ರಿ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

ಪಿಚ್‌ ರಿಪೋರ್ಟ್‌:  ಜೈಪುರ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಮತ್ತೊಮ್ಮೆ ದೊಡ್ಡ ಮೊತ್ತ ಹರಿಯುವ ಸಾಧ್ಯತೆ ಹೆಚ್ಚು. ಇಲ್ಲಿ ಚೇಸಿಂಗ್‌ ಮಾಡಿದ ತಂಡಗಳೇ ಹೆಚ್ಚಿನ ಯಶಸ್ಸು ಗಳಿಸಿದ ಉದಾಹರಣೆ ಇದೆ. ಆದರೆ ಈ ಬಾರಿ ಐಪಿಎಲ್‌ 2 ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!
ಪಾಕಿಸ್ತಾನದಿಂದ ಯು-ಟರ್ನ್‌: ಟಿ20 ವಿಶ್ವಕಪ್ಪಲ್ಲಿ ಭಾರತ ವಿರುದ್ಧ ಕಣಕ್ಕೆ?