ದುಬೈ: ಕಳೆದ ವಾರ ಭಾರತೀಯ ಆಟಗಾರರಿಂದ ಕ್ರಿಕೆಟ್ ಮೈದಾನದಲ್ಲೇ ಭಾರೀ ಅಪಮಾನಕ್ಕೊಳಗಾಗಿದ್ದ ಪಾಕಿಸ್ತಾನ ಕ್ರಿಕೆಟಿಗರು, ಈ ಬಾರಿ ಅದಕ್ಕೆ ತಿರುಗೇಟು ನೀಡುವ ನೆಪದಲ್ಲಿ ಉದ್ಧಟತನ ಮೆರೆದಿದ್ದಾರೆ. ಪಾಕಿಸ್ತಾನ ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ ತನ್ನ ಬ್ಯಾಟ್ ಮೂಲಕ ಗನ್ ಶಾಟ್ ಮಾಡುವ ರೀತಿ ಸಂಭ್ರಮಿಸಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ದುಬೈ ಕ್ರೀಡಾಂಗಣದಲ್ಲಿ ನಡೆದ ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಫರ್ಹಾನ್, 45 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 58 ರನ್ ಸಿಡಿಸಿದರು. ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ, ಅಕ್ಷರ್ ಪಟೇಲ್ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ಅರ್ಧಶತಕ ಪೂರೈಸಿದ ಫರ್ಹಾನ್, ತನ್ನ ಬ್ಯಾಟನ್ನು ಮೇಲಕ್ಕೆತ್ತಿ ಗನ್‌ನಿಂದ ಶೂಟ್ ಮಾಡುವ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಈ ವೇಳೆ ಫರ್ಹಾನ್‌ರ ತಲೆಗೆ ಕುಟ್ಟಿ ಮತ್ತೋರ್ವ ಆಟಗಾರ ಸೈಮ್ ಅಯೂಬ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆದರೆ ಫರ್ಹಾನ್ ಉದ್ಧಟತನದ ನಡೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಪಹಲ್ಗಾಂನಲ್ಲಿ ಉಗ್ರರ ದಾಳಿಯನ್ನು ಬಿಂಬಿಸುವ ರೀತಿಯಲ್ಲಿ ಕ್ರಿಕೆಟ್ ಮೈದಾನದಲ್ಲೂ ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ಹಲವರು ಕಿಡಿಕಾರಿದ್ದಾರೆ. ಪಾಕಿಸ್ತಾನ ವಿರುದ್ಧ ಆಡಲು ಭಾರತ ತಂಡವನ್ನು ಕಳುಹಿಸಿಕೊಟ್ಟ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರವೇ ಇದಕ್ಕೆ ಉತ್ತರ ನೀಡಬೇಕು ಎಂದೂ ಆಗ್ರಹಿಸಿದ್ದಾರೆ. ಶಿವಸೇನೆ ನಾಯಕ ಸಂಜಯ್ ರಾವುತ್ ಕೂಡಾ, ಪಾಕ್ ಆಟಗಾರನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮುಂದುವರಿದ ನೋಶೇಕ್‌ಹ್ಯಾಂಡ್ ವಾರ್‌ಭಾರತ ತಂಡ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡಿರಲಿಲ್ಲ. ಟಾಸ್ ಹಾಗೂ ಪಂದ್ಯದ ಬಳಿಕ ಪಾಕ್ ಆಟಗಾರರನ್ನು ಭಾರತೀಯರು ಕಡೆಗಣಿಸಿದ್ದರು. ಇದು ಭಾನುವಾರದ ಪಂದ್ಯದಲ್ಲೂ ಮುಂದುವರಿಯಿತು. ಟಾಸ್ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಕೈಕುಲುಕಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡದೆ ತಮ್ಮ ಪಾಡಿಗೆ ಇದ್ದರು.-ಕೈ ಕುಲುಕದ ಮ್ಯಾಚ್‌ರೆಫ್ರಿ-ಪಾಕ್ ನಾಯಕಟಾಸ್ ವೇಳೆ ಉಭಯ ತಂಡಗಳ ಆಟಗಾರರ ಜೊತೆ ಮ್ಯಾಚ್ ರೆಫ್ರಿಯೂ ಕೈಕುಲುಕುವುದು ವಾಡಿದೆ. ಆದರೆ ಭಾನುವಾರ ಟಾಸ್‌ಗೆ ಆಗಮಿಸಿದಾಗ ಸೂರ್ಯಕುಮಾರ್ ಯಾದವ್ ಹಾಗೂ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಕೈಕುಲುಕಿದರು. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಹಾಗೂ ಪೈಕ್ರಾಫ್ಟ್ ಕೈಕುಲುಕದೆ ಸುಮ್ಮನಿದ್ದರು. ಕಳೆದ ವಾರ ಗುಂಪು ಹಂತದ ಪಂದ್ಯದ ವೇಳೆ ಭಾರತೀಯ ಆಟಗಾರರು ಕೈಕುಲುಕದಿರುವ ರೆಫ್ರಿ ಪೈಕ್ರಾಫ್ಟ್ ಕಾರಣ ಎಂದು ಪಾಕ್ ದೂರಿತ್ತು. ಅಲ್ಲದೆ, 2 ಬಾರಿ ಅವರ ವಿರುದ್ಧ ಐಸಿಸಿಗೂ ದೂರು ನೀಡಿತ್ತು.
ಪಾಕ್ ಸೇನೆಯ ಸುಳ್ಳು ಈಗ ಆಟಗಾರರಿಂದಲೇ ಪ್ರಚಾರ!
6-0 ಗೆಲುವು ಎಂದು ರೌಫ್, ಸಿದ್ರಾ ಸಂಭ್ರಮ!
ದುಬೈ: ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿ, ಪಾಕ್‌ಗೆ ತಕ್ಕ ಉತ್ತರ ನೀಡಿತ್ತು. ಆದರೆ ಕಾರ್ಯಾಚರಣೆ ವೇಳೆ ಭಾರತ ವಿರುದ್ಧ 6-0 ಗೆಲುವು ಸಾಧಿಸಿದ್ದೇವೆ ಎಂದು ಪಾಕ್ ಸೇನೆ ಸುಳ್ಳು ಹೇಳಿತ್ತು. ಇದೇ ಸುಳ್ಳನ್ನು ಈಗ ಪಾಕಿಸ್ತಾನ ಕ್ರಿಕೆಟಿಗರೂ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಸ್ವತಃ ಪಾಕ್ ಸೇನೆಯೇ ಅಲ್ಲಿನ ಕ್ರಿಕೆಟ್ ತಂಡಗಳಿಗೆ ಈ ರೀತಿ ಸಂಭ್ರಮಿಸಲು ಸೂಚಿಸಿದೆ ಎಂದು ಹೇಳಲಾಗುತ್ತಿದೆ.ಶನಿವಾರ ಅಭ್ಯಾಸ ಶಿಬಿರದ ವೇಳೆ ಪಾಕ್‌ನ ವೇಗಿ ಹ್ಯಾರಿಸ್ ರೌಫ್, 6-0 ಎಂದು ಕೈಸನ್ನೆ ಮಾಡಿ, ಕೂಗಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಮಹಿಳಾ ತಂಡದ ಆಟಗಾರ್ತಿ ಸಿದ್ರಾ ಅಮೀನ್, ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿದಾಗಲೂ 6-0 ಎಂದು ಕೈಸನ್ನೆ ಮಾಡಿ ಸಂಭ್ರಮಿಸಿದ್ದರು. ಈ ಎರಡೂ ಘಟನೆಗಳಿಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆಯ ಎದುರು ಮಂಡಿಯೂರಿ ಅವಮಾನಕ್ಕೊಳಗಾಗಿದ್ದರೂ ಗೆದ್ದಿದ್ದೇವೆ ಸುಳ್ಳು ಹೇಳಿದ್ದ ಪಾಕ್ ಸೇನೆಯ ಅಜೆಂಡಾವನ್ನು ಈಗ ಆಟಗಾರರು ಪ್ರಚಾರ ಮಾಡುವ ಮೂಲಕ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.