ಕೊಹ್ಲಿ ಸೆಂಚುರಿಗೂ ಸಿಗದ ಸರಣಿ ಗೆಲುವು!

Published : Jan 19, 2026, 12:52 PM IST
virat kohli

ಸಾರಾಂಶ

ವಿರಾಟ್‌ ಹೋರಾಟ ವ್ಯರ್ಥ: 3ನೇ ಏಕದಿನದಲ್ಲಿ ನ್ಯೂಜಿಲೆಂಡ್‌ಗೆ 41 ರನ್‌ ಗೆಲುವು । ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ ಜಯಡ್ಯಾರಿಲ್‌ 137, ಫಿಲಿಪ್ಸ್‌ 106, ಕಿವೀಸ್ 337/8 । ಕೊಹ್ಲಿ 124, ನಿತೀಶ್‌ 53, ರಾಣಾ 52 ರನ್‌ ಗಳಿಸಿದ್ರೂ ಗೆಲ್ಲದ ಭಾರತ, 296ಕ್ಕೆ ಆಲೌಟ್‌

ಇಂದೋರ್‌: ಚೇಸ್ ಮಾಸ್ಟರ್‌, ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಮತ್ತೊಂದು ಅತ್ಯಾಕರ್ಷಕ ಶತಕ ಸಿಡಿಸಿದ್ದಾರೆ. ಆದರೆ ಈ ಬಾರಿ ಭಾರತಕ್ಕೆ ಗೆಲುವು ಮಾತ್ರ ಸಿಗಲಿಲ್ಲ. ನಿತೀಶ್‌ ಕುಮಾರ್‌, ಹರ್ಷಿತ್‌ ರಾಣಾ ಜೊತೆಗೂಡಿ ತಮ್ಮ ಅಮೋಘ ಹೋರಾಟದ ಮೂಲಕ ಕೊಹ್ಲಿ ಭಾರತವನ್ನು ಸರಣಿ ಗೆಲುವಿನತ್ತ ಕೊಂಡೊಯ್ದರೂ, ಕೊನೆ ಕ್ಷಣದಲ್ಲಿ ಕಿವೀಸ್‌ ವಿಜಯಮಾಲೆಯನ್ನು ಕೊರಳಿಗೇರಿಸಿಕೊಂಡಿದೆ. ಇದರೊಂದಿಗೆ ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಸರಣಿ(2-1) ಗೆಲುವನ್ನೂ ತನ್ನದಾಗಿಸಿಕೊಂಡಿತು.

ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 8 ವಿಕೆಟ್‌ಗೆ 337 ರನ್‌ ಕಲೆಹಾಕಿತು. 5 ರನ್‌ಗೆ 2 ವಿಕೆಟ್‌ ಉರುಳಿದರೂ, 4ನೇ ವಿಕೆಟ್‌ಗೆ ಜೊತೆಯಾದ ಡ್ಯಾರಿಲ್‌ ಮಿಚೆಲ್‌(131 ಎಸೆತಕ್ಕೆ 137) ಹಾಗೂ ಗ್ಲೆನ್‌ ಫಿಲಿಪ್ಸ್‌(88 ಎಸೆತಕ್ಕೆ 106) ಪಂದ್ಯದ ಚಿತ್ರಣ ಬದಲಿಸಿದರು. ಈ ಜೋಡಿ 219 ರನ್‌ ಜೊತೆಯಾಟವಾಡಿತು. ಭಾರತದ ಪರ ಹರ್ಷಿತ್‌, ಅರ್ಶ್‌ದೀಪ್‌ ಸಿಂಗ್‌ ತಲಾ 3 ವಿಕೆಟ್‌ ಕಿತ್ತರು.

ಕೊಹ್ಲಿ ಆರ್ಭಟ ವ್ಯರ್ಥ:

ದೊಡ್ಡ ಮೊತ್ತ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಬೇಕಿತ್ತು. ಅದು ಸಾಧ್ಯವಾಗಲಿಲ್ಲ. ರೋಹಿತ್‌ 11, ಗಿಲ್‌ 23, ಶ್ರೇಯಸ್‌ 3, ಕೆ.ಎಲ್‌.ರಾಹುಲ್‌ 1 ರನ್‌ಗೆ ವಿಕೆಟ್‌ ಒಪ್ಪಿಸಿದರು. 71ಕ್ಕೆ 4 ವಿಕೆಟ್‌ ಪತನಗೊಂಡ ಬಳಿಕ ತಂಡವನ್ನು ಮೇಲೆತ್ತಿದ್ದು ಕೊಹ್ಲಿ-ನಿತೀಶ್‌. ಈ ಜೋಡಿ 88 ರನ್‌ ಸೇರಿಸಿತು. ನಿತೀಶ್‌ 53 ರನ್‌ಗೆ ಔಟಾದ ಬಳಿಕ, ಹರ್ಷಿತ್‌ ಜೊತೆಗೂಡಿದ ಕೊಹ್ಲಿ 7ನೇ ವಿಕೆಟ್‌ಗೆ 99 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಹಂತದಲ್ಲಿ ಹರ್ಷಿತ್‌ 52 ರನ್‌ಗೆ ಔಟಾದರು. ಏಕಾಂಗಿಯಾಗಿ ಹೋರಾಡಿದ ಕೊಹ್ಲಿ ಏಕದಿನದಲ್ಲಿ 54ನೇ ಶತಕ ಬಾರಿಸಿದರೂ, 108 ಎಸೆತಕ್ಕೆ 124 ರನ್‌ ಗಳಿಸಿದ್ದಾಗ ಇನ್ನಿಂಗ್ಸ್‌ನ 46ನೇ ಓವರ್‌ನಲ್ಲಿ ಔಟಾಗುವುದರೊಂದಿಗೆ ತಂಡದ ಹೋರಾಟ ಅಂತ್ಯವಾಯಿತು. 46 ಓವರ್‌ಗಳಲ್ಲಿ ಭಾರತ 296ಕ್ಕೆ ಆಲೌಟಾಯಿತು.

ಸ್ಕೋರ್‌: ನ್ಯೂಜಿಲೆಂಡ್‌ 337/8 (ಡ್ಯಾರಿಲ್‌ 137, ಫಿಲಿಪ್ಸ್‌ 106, ಅರ್ಶ್‌ದೀಪ್‌ 3-63, ಹರ್ಷಿತ್‌ 3-84), ಭಾರತ 46 ಓವರಲ್ಲಿ 296/10 (ಕೊಹ್ಲಿ 124, ನಿತೀಶ್‌ 53, ಹರ್ಷಿತ್ 52, ಕ್ಲಾರ್ಕ್‌ 3-54, ಪೋಲ್ಕ್ಸ್3-77)

ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ: ಡ್ಯಾರಿಲ್‌ ಮಿಚೆಲ್‌

38 ವರ್ಷ, 8 ಸರಣಿ:

ಕೊನೆಗೂ ಕಿವೀಸ್‌ಗೆ

ಭಾರತದಲ್ಲಿ ಯಶಸ್ಸು

ಕಿವೀಸ್‌ ತಂಡ ಇದೇ ಮೊದಲ ಬಾರಿ ಭಾರತದಲ್ಲಿ ಏಕದಿನ ಸರಣಿ ಗೆದ್ದಿದೆ. ತಂಡ 1988ರಿಂದಲೂ ಭಾರತದಲ್ಲಿ ಏಕದಿನ ಸರಣಿ ಆಡುತ್ತಿದೆ. ಆದರೆ ಒಮ್ಮೆಯೂ ಗೆದ್ದಿರಲಿಲ್ಲ. ಇದೀಗ 8ನೇ ಪ್ರಯತ್ನದಲ್ಲಿ ಸರಣಿ ಗೆದ್ದು ಸಂಭ್ರಮಿಸಿದೆ. 2024ರಲ್ಲಿ ಟೆಸ್ಟ್‌ ಸರಣಿ ವೈಟ್‌ವಾಶ್‌ ಮಾಡಿದ್ದ ಕಿವೀಸ್‌, ಈಗ ಏಕದಿನ ಸರಣಿಯಲ್ಲೂ ಭಾರತಕ್ಕೆ ಆಘಾತ ನೀಡಿದೆ.

01ನೇ ಬಾರಿ

ಭಾರತ ತಂಡ ಇಂದೋರ್‌ನಲ್ಲಿ ಮೊದಲ ಬಾರಿ ಏಕದಿನ ಪಂದ್ಯ ಸೋತಿದೆ. ಈ ಮೊದಲು 7ರಲ್ಲೂ ಗೆದ್ದಿತ್ತು.

01ನೇ ಬಾರಿ

2022ರ ಬಳಿಕ ಭಾರತ ಟಾಸ್‌ ಗೆದ್ದ ಪಂದ್ಯದಲ್ಲಿ ಸೋತಿದ್ದು ಇದೇ ಮೊದಲು. ಈ ಮೊದಲು 13 ಏಕದಿನದಲ್ಲಿ ಗೆದ್ದಿತ್ತು.

ಕಿಂಗ್‌ ಕೊಹ್ಲಿ ದಾಖಲೆಗಳ ಸುರಿಮಳೆ

ಕಿವೀಸ್ ವಿರುದ್ಧ 7 ಶತಕ

ನ್ಯೂಜಿಲೆಂಡ್‌ ವಿರುದ್ಧ ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಅವರು 36 ಇನ್ನಿಂಗ್ಸ್‌ಗಳಲ್ಲಿ 7 ಶತಕ. ರಿಕಿ ಪಾಂಟಿಂಗ್‌ 6(50 ಇನ್ನಿಂಗ್ಸ್‌), ಸೆಹ್ವಾಗ್‌ 6(23 ಇನ್ನಿಂಗ್ಸ್‌) ಶತಕ ಸಿಡಿಸಿದ್ದಾರೆ.

35 ತಾಣಗಳಲ್ಲಿ ಸೆಂಚುರಿ

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾದ್ಯಂತ ಒಟ್ಟು 35 ಕ್ರೀಡಾಂಗಣಗಳಲ್ಲಿ ಶತಕ ಬಾರಿಸಿದ್ದಾರೆ. ಇದು ಗರಿಷ್ಠ. ಸಚಿನ್‌ ತೆಂಡುಲ್ಕರ್‌ 34 ತಾಣಗಳಲ್ಲಿ ಶತಕ ಬಾರಿಸಿದ್ದು, ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

5 ದೇಶ ವಿರುದ್ಧ 7 ಶತಕ

ಕೊಹ್ಲಿ ಒಟ್ಟು 5 ದೇಶಗಳ ವಿರುದ್ಧ ತಲಾ 7 ಅಥವಾ ಅದಕ್ಕಿಂತ ಹೆಚ್ಚು ಶತಕ ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧ 10, ವಿಂಡೀಸ್‌ ವಿರುದ್ಧ 9, ಆಸ್ಟ್ರೇಲಿಯಾ ವಿರುದ್ಧ 8, ದ.ಆಫ್ರಿಕಾ, ಕಿವೀಸ್‌ ವಿರುದ್ಧ ತಲಾ 7 ಶತಕ ಗಳಿಸಿದ್ದಾರೆ.

7 ಪಂದ್ಯದಲ್ಲಿ 616 ರನ್‌!

ಕೊಹ್ಲಿ ಅಭೂತಪೂರ್ವ ಲಯದಲ್ಲಿದ್ದು, ಕೊನೆ 7 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 616 ರನ್‌ ಗಳಿಸಿದ್ದಾರೆ. ಇದರಲ್ಲಿ 3 ಶತಕ, 3 ಅರ್ಧಶತಕ ಒಳಗೊಂಡಿವೆ. ಈ ಪೈಕಿ 2 ಪಂದ್ಯಗಳಲ್ಲಿ ಔಟಾಗದೆ ಉಳಿದಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಬೆಂಗ್ಳೂರಲ್ಲಿ ಐಪಿಎಲ್‌ಗೆ ರಾಜ್ಯ ಸರ್ಕಾರ ಸಮ್ಮತಿ
ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಧಕ್ಕೆ ಆಗದಿರಲಿ:ಎಚ್‌ಡಿಕೆ