ಕೋಲ್ಕತಾ: ಹಿಮ್ಮಡಿ ಗಾಯದಿಂದಾಗಿ 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ತಾರಾ ವೇಗಿ ಮೊಹಮದ್ ಶಮಿ, ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಸಂಪೂರ್ಣ ಚೇತರಿಕೆ ಕಂಡಿದ್ದು ಬುಧವಾರದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುವ ಶಮಿ, ಬುಧವಾರದಿಂದ ಇಂದೋರ್‌ನಲ್ಲಿ ಆರಂಭಗೊಳ್ಳಲಿರುವ ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಶಮಿ ತಾವು ಸಂಪೂರ್ಣ ಫಿಟ್ ಇರುವುದಾಗಿ ಸಾಬೀತುಪಡಿಸಿದರೆ, ಅವರನ್ನು ಭಾರತ ತಂಡ ಆಸ್ಟ್ರೇಲಿಯಾಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ತಂಡದಲ್ಲಿ ಸದ್ಯ ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮದ್ ಸಿರಾಜ್ ಹೊರತುಪಡಿಸಿ ಬೇರ್ಯಾವ ಹಿರಿಯ ವೇಗಿಯೂ ಇಲ್ಲದ ಕಾರಣ, ಶಮಿ ತಂಡ ಕೂಡಿಕೊಂಡರೆ ಬಲ ಹೆಚ್ಚಲಿದೆ.