ಶಾರ್ದೂಲ್ ಸೆಂಚುರಿ: ರಣಜಿ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಮುಂಬೈಗೆ ಲೀಡ್‌

KannadaprabhaNewsNetwork | Updated : Mar 04 2024, 10:33 AM IST

ಸಾರಾಂಶ

ತಮಿಳುನಾಡು ವಿರುದ್ಧ ಮೊದಲ ಇನ್ನಿಂಗ್ಸ್‌ಗೆ 9 ವಿಕೆಟ್‌ಗೆ 353 ರನ್‌ ಗಳಿಸಿರುವ ಮುಂಬೈ ಸದ್ಯ ಒಟ್ಟು 207 ರನ್‌ ಮುನ್ನಡೆಯಲ್ಲಿದೆ. 106ಕ್ಕೆ 7 ವಿಕೆಟ್‌ ಕಳೆದುಕೊಂಡ ಬಳಿಕ ಶಾರ್ದೂಲ್‌ ಹಾಗೂ ತನುಶ್‌ ನಡೆಸಿದ ಹೋರಾಟ ಬೃಹತ್‌ ಮುನ್ನಡೆಗೆ ಕಾರಣವಾಯಿತು.

ಮುಂಬೈ: ಆರಂಭಿಕರು, ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಇನ್ನಿಂಗ್ಸ್‌ ಹಿನ್ನಡೆ ಭೀತಿಯಲ್ಲಿದ್ದ ಮುಂಬೈಗೆ ಶಾರ್ದೂಲ್‌ ಠಾಕೂರ್‌ ಆಪತ್ಬಾಂಧವರಾಗಿ ಮೂಡಿಬಂದಿದ್ದಾರೆ. 

ಅವರ ಸಾಹಸಿಕ ಸೆಂಚುರಿ ಜೊತೆಗೆ ತನುಶ್‌ ಕೋಟ್ಯಾನ್‌ ಅರ್ಧಶತಕದ ಬಲದಿಂದ ತಮಿಳುನಾಡು ವಿರುದ್ಧದ ರಣಜಿ ಸೆಮಿಫೈನಲ್‌ನಲ್ಲಿ ಮುಂಬೈ ಇನ್ನಿಂಗ್ಸ್‌ ಮುನ್ನಡೆ ಪಡೆದಿದೆ.

ತಮಿಳುನಾಡಿನ 146 ರನ್‌ಗೆ ಉತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಮುಂಬೈ 2ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 353 ರನ್ ಕಲೆಹಾಕಿದ್ದು, 207 ರನ್‌ ಮುನ್ನಡೆ ಸಾಧಿಸಿದೆ.

ಮೊದಲ ದಿನ 2 ವಿಕೆಟ್‌ಗೆ 45 ರನ್‌ ಗಳಿಸಿದ್ದ ಮುಂಬೈಗೆ ಭಾನುವಾರ ಆರಂಭದಲ್ಲೇ ಆಘಾತ ಎದುರಾಯಿತು. ಸಾಯಿ ಕಿಶೋರ್‌ ದಾಳಿಗೆ ತತ್ತರಿಸಿ ಮುಂಬೈ ಪೆವಿಲಿಯನ್‌ ಪರೇಡ್‌ ನಡೆಸಿತು.

ಅಜಿಂಕ್ಯಾ ರಹಾನೆ(19) ಹಾಗೂ ಶ್ರೇಯಸ್‌ ಅಯ್ಯರ್‌(02) ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. 55 ರನ್‌ ಗಳಿಸಿ ತಂಡಕ್ಕೆ ಆಸರೆಯಾದ ಮುಶೀರ್‌ ಖಾನ್‌ ಹಾಗೂ ಬಳಿಕ ಬಂದ ಶಮ್ಸ್‌ ಮುಲಾನಿ ಔಟಾಗುವುದರೊಂದಿಗೆ ತಂಡದ ಸ್ಕೋರ್‌ 7 ವಿಕೆಟ್‌ಗೆ 106 ರನ್.

ಆದರೆ 8ನೇ ವಿಕೆಟ್‌ಗೆ ಜೊತೆಯಾದ ಶಾರ್ದೂಲ್‌-ಹಾರ್ದಿಕ್‌ ತಮೋರೆ(35) 100 ರನ್‌ ಸೇರಿಸಿ ಇನ್ನಿಂಗ್ಸ್‌ ಹಿನ್ನಡೆಯಿಂದ ಪಾರು ಮಾಡಿದರು. ಬಳಿಕ 9ನೇ ವಿಕೆಟ್‌ಗೆ ತನುಶ್‌ ಕೋಟ್ಯಾನ್‌ ಜೊತೆಗೂಡಿ 79 ರನ್‌ ಸೇರಿಸಿದ ಶಾರ್ದೂಲ್‌ ತಂಡವನ್ನು 300ರ ಗಡಿ ದಾಟಿಸಿದರು. 

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಶಾರ್ದೂಲ್‌ 109ಕ್ಕೆ ವಿಕೆಟ್ ಒಪ್ಪಿಸಿದರು. ಮುರಿಯದ 10ನೇ ವಿಕೆಟ್‌ಗೆ 63 ರನ್‌ ಜೊತೆಯಾಟವಾಡಿರುವ ತನುಶ್‌(ಔಟಾಗದೆ 74), ತುಷಾರ್‌ ದೇಶಪಾಂಡೆ(ಔಟಾಗದೆ 17) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್: ತಮಿಳುನಾಡು 146/10, ಮುಂಬೈ 353/9(2ನೇ ದಿನದಂತ್ಯಕ್ಕೆ)(ಶಾರ್ದೂಲ್‌ 109, ತನುಶ್ 74*, ಸಾಯಿ ಕಿಶೋರ್‌ 6-97)

ಮಧ್ಯಪ್ರದೇಶಕ್ಕೆ ಮುನ್ನಡೆ: ನಾಗ್ಪುರದಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಮಧ್ಯಪ್ರದೇಶ ಇನ್ನಿಂಗ್ಸ್‌ ಮುನ್ನಡೆ ಪಡೆದಿದೆ. 

ವಿದರ್ಭ 170 ರನ್‌ಗೆ ಆಲೌಟಾದ ಬಳಿಕ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್‌ ಕಲೆಹಾಕಿ 82 ರನ್‌ ಮುನ್ನಡೆ ಪಡೆಯಿತು. ಹಿಮಾನ್ಶು ಮಂತ್ರಿ 126 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. 

ಬಳಿಕ ಇನ್ನಿಂಗ್ಸ್‌ ಆರಂಭಿಸಿರುವ ವಿದರ್ಭ 2ನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 13 ರನ್‌ ಗಳಿಸಿದ್ದು, ಇನ್ನೂ 69 ರನ್‌ ಹಿನ್ನಡೆಯಲ್ಲಿದೆ.

Share this article