ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಶೂಟರ್‌ಗಳು ಆರಂಭಿಕ ವೈಫಲ್ಯ ಅನುಭವಿಸಿದ್ದು, ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಶನಿವಾರ ನಡೆದ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಎರಡು ತಂಡಗಳೂ ಅರ್ಹತಾ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದವು. ರಮಿತಾ ಜಿಂದಾಲ್ ಹಾಗೂ ಅರ್ಜುನ್ ಬಬುತಾ ಜೋಡಿ 628.7 ಅಂಕಗಳೊಂದಿಗೆ 6ನೇ ಸ್ಥಾನ ಪಡೆದರೆ, ಇಳವೆನಿಲ್ ವಳರಿವನ್ ಹಾಗೂ ಸಂದೀಪ್ ಸಿಂಗ್ ಜೋಡಿ 626.3 ಅಂಕಗಳೊಂದಿಗೆ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಒಟ್ಟಾರೆ 28 ತಂಡಗಳಿದ್ದ ಈ ಸ್ಪರ್ಧೆಯಲ್ಲಿ ಅಗ್ರ-4 ಸ್ಥಾನ ಪಡೆದರೆ ಪದಕ ಸುತ್ತಿಗೆ ಅರ್ಹತೆ ಸಿಗುತ್ತಿತ್ತು. ಚೀನಾ, ದ.ಕೊರಿಯಾ ಹಾಗೂ ಕಜಕಸ್ತಾನದ ಜೋಡಿಗಳು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದುಕೊಂಡವು.
ಸರಬ್ಜೋತ್‌ಗೆ ಜಸ್ಟ್ ಮಿಸ್
ಶನಿವಾರ ಪುರುಷರ 10 ಮೀ. ಏರ್ ಪಿಸ್ತೂಲ್‌ನ ಅರ್ಹತಾ ಸುತ್ತಿನಲ್ಲಿ ಸರಬ್ಜೋತ್ ಸಿಂಗ್ ಕೂದಲೆಳೆಯ ಅಂತರದಲ್ಲಿ ಫೈನಲ್ ಸ್ಥಾನದಿಂದ ವಂಚಿತರಾದರು. ಅವರು 577 ಅಂಕಗಳೊಂದಿಗೆ 9ನೇ ಸ್ಥಾನ ಗಿಟ್ಟಿಸಿಕೊಂಡರು. ಜರ್ಮನಿ ರಾಬಿನ್ ವಾಲ್ಟರ್ ಕೂಡಾ 577 ಅಂಕ ಸಂಪಾದಿಸಿದ್ದರು. ಆದರೆ ಸರಬ್ಜೋತ್‌ಗಿಂದ 1 ಬಾರಿ ಹೆಚ್ಚು 10x ಅಂಕದ ವೃತಕ್ಕೆ ಶೂಟ್ ಮಾಡಿದ ಕಾರಣಕ್ಕೆ ವಾಲ್ಟರ್ 8ನೇ ಸ್ಥಾನಿಯಾಗಿ ಫೈನಲ್‌ಗೆ ಪ್ರವೇಶಿಸಿದರು. ಭಾರತದ ಮತ್ತೋರ್ವ ಸ್ಪರ್ಧಿ ಅರ್ಜುನಾ ಚೀಮಾ 574 ಅಂಕ ಪಡೆದು 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಪದಕಕ್ಕೆ ಗುರಿ ಇಡ್ತಾರಾ ಮನು?
ಭಾರತ ಬಹುತೇಕ ಶೂಟರ್‌ಗಳು ಶನಿವಾರ ನಿರಾಸೆ ಅನುಭವಿಸಿದರೂ, ಸ್ಟಾರ್ ಶೂಟರ್ ಮನು ಭಾಕರ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಫೈನಲ್‌ಗೇರಿರು. ಅವರು ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಸಂಪಾದಿಸಿ 3ನೇ ಸ್ಥಾನಿಯಾಗಿ ಪದಕ ಸುತ್ತಿಗೆ ಪ್ರವೇಶ ಪಡೆದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಮ್ಮ ಪಿಸ್ತೂಲ್ ಕೈಕೊಟ್ಟ ಕಾರಣ ಭಾಕರ್ ಫೈನಲ್‌ಗೇರಲು ವಿಫಲವಾಗಿದ್ದರು. ಈ ಬಾರಿ ಪದಕ ನಿರೀಕ್ಷೆಯಲ್ಲಿರುವ 22 ವರ್ಷ ಭಾಕರ್ ಭಾನುವಾರ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಇದೇ ವೇಳೆ ಭಾರತದ ಮತ್ತೋರ್ವ ಶೂಟರ್ ರಿಧಂ ಸಾಂಗ್ವಾನ್ 573 ಅಂಕಗಳೊಂದಿಗೆ 15ನೇ ಸ್ಥಾನಿಯಾಗಿ, ಫೈನಲ್‌ಗೇರುವ ಅವಕಾಶ ತಪ್ಪಿಸಿಕೊಂಡರು.