ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆಗೂ ಬೆಲೆ ಕೊಡದೆ ರಣಜಿ ಪಂದ್ಯದಲ್ಲಿ ಆಡದ್ದಕ್ಕೆ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಬೆಲೆ ತೆತ್ತಿದ್ದಾರೆ.
ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆಗೂ ಬೆಲೆ ಕೊಡದೆ ರಣಜಿ ಪಂದ್ಯದಲ್ಲಿ ಆಡದ್ದಕ್ಕೆ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಬೆಲೆ ತೆತ್ತಿದ್ದಾರೆ.
2023-24ರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಇಬ್ಬರೂ ಹೊರಬಿದ್ದಿದ್ದಾರೆ. ಇಬ್ಬರನ್ನೂ ಗುತ್ತಿಗೆಗೆ ಪರಿಗಣಿಸಿಲ್ಲ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದು, ದೇಸಿ ಕ್ರಿಕೆಟ್ ಕಡೆಗಣಿಸುವ ಆಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ಬುಧವಾರ 30 ಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಅ.1, 2023ರಿಂದ ಸೆ.30, 2024ರ ಅವಧಿಗೆ ಈ ಗುತ್ತಿಗೆ ಇರಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜಾ ‘ಎ+’ ದರ್ಜೆಯಲ್ಲೇ ಮುಂದುವರಿದಿದ್ದಾರೆ.
‘ಎ’ ದರ್ಜೆಯಲ್ಲಿ 6 ಆಟಗಾರರಿದ್ದು, ಮೊಹಮದ್ ಸಿರಾಜ್, ಕೆ.ಎಲ್.ರಾಹುಲ್ ಹಾಗೂ ಶುಭ್‌ಮನ್ ಗಿಲ್‌ಗೆ ಮುಂಬಡ್ತಿ ನೀಡಿ ‘ಎ’ ದರ್ಜೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಕಳೆದ ವರ್ಷ ‘ಎ’ ದರ್ಜೆಯಲ್ಲಿದ್ದ ಕುಲ್ದೀಪ್ ಯಾದವ್ ಹಾಗೂ ರಿಷಭ್ ಪಂತ್ ‘ಬಿ’ ದರ್ಜೆಗೆ ಹಿಂಬಡ್ತಿ ಪಡೆದಿದ್ದು, ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಯಶಸ್ವಿ ಜೈಸ್ವಾಲ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
ಯಶಸ್ವಿ ಸೇರಿ 11 ಆಟಗಾರರು ಗುತ್ತಿಗೆ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಬಿಸಿಸಿಐ ಆಟಗಾರರ ಸಂಭಾವನೆಯ ಬಗ್ಗೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿಲ್ಲ.
ಆದರೆ ಕಳೆದ ವರ್ಷ ‘ಎ+’ಗೆ ವಾರ್ಷಿಕ 7 ಕೋಟಿ ರು., ‘ಎ’ ದರ್ಜೆಗೆ 5 ಕೋಟಿ ರು., ‘ಬಿ’ ದರ್ಜೆಗೆ 3 ಕೋಟಿ ರು., ‘ಸಿ’ ದರ್ಜೆಗೆ ವಾರ್ಷಿಕ 1 ಕೋಟಿ ರು. ವೇತನ ಸಿಗಲಿದೆ.
ಇದಲ್ಲದೇ ಪ್ರತಿ ಪಂದ್ಯ ಆಡಿದ್ದಕ್ಕೆ ಪ್ರತ್ಯೇಕವಾಗಿ ಸಂಭಾವನೆ ದೊರೆಯಲಿದೆ. ಇನ್ನು ನಿಗದಿತ ಅವಧಿಯಲ್ಲಿ ಯಾವುದೇ ಆಟಗಾರ ಕನಿಷ್ಠ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಅಂ.ರಾ.ಟಿ20 ಪಂದ್ಯಗಳನ್ನು ಆಡಿದರೆ, ಆತ ‘ಸಿ’ ದರ್ಜೆ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾನೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ‘ಎ+’ ದರ್ಜೆ (ವಾರ್ಷಿಕ 7 ಕೋಟಿ ರು.): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ.
‘ಎ’ ದರ್ಜೆ (ವಾರ್ಷಿಕ 5 ಕೋಟಿ ರು.): ಆರ್.ಅಶ್ವಿನ್, ಮೊಹಮದ್ ಶಮಿ, ಮೊಹಮದ್ ಸಿರಾಜ್, ಕೆ.ಎಲ್.ರಾಹುಲ್, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ.
‘ಬಿ’ ದರ್ಜೆ (ವಾರ್ಷಿಕ 3 ಕೋಟಿ ರು.): ಸೂರ್ಯಕುಮಾರ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್.
‘ಸಿ’ ದರ್ಜೆ (ವಾರ್ಷಿಕ 1 ಕೋಟಿ ರು.): ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಶ್‌ದೀಪ್ ಸಿಂಗ್, ಕೆ.ಎಸ್.ಭರತ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ರಜತ್ ಪಾಟೀದಾರ್. ಶ್ರೇಯಸ್, ಕಿಶನ್ ಮೇಲೆ ಬಿಸಿಸಿಐ ಸಿಟ್ಟು!
ಕಳೆದ ಅಕ್ಟೋಬರ್‌ನಿಂದ ಶ್ರೇಯಸ್ 4 ಟೆಸ್ಟ್, 12 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದರೂ, ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಶ್ರೇಯಸ್ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌ಗಳಲ್ಲಿ ಆಡಿದ್ದರು.
ಆ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದಾಗಿ ಮುಂದಿನ 2 ಟೆಸ್ಟ್‌ಗಳಿಂದ ಹೊರಬಿದ್ದರು. ಅವರು ಆಡಲು ಫಿಟ್ ಇದ್ದಾರೆ ಎಂದು ಎನ್‌ಸಿಎ ಫಿಸಿಯೋ ವರದಿ ನೀಡಿದರೂ, ಬೆನ್ನು ನೋವಿನ ನೆಪ ನೀಡಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ಗೆ ಗೈರಾಗಿದ್ದಕ್ಕೆ ಬಿಸಿಸಿಐ ಅಸಾಮಾಧಾನಗೊಂಡಿದೆ ಎಂದು ತಿಳಿದುಬಂದಿದೆ.
ಇನ್ನು ಕಿಶನ್ ಕಳೆದ ಅಕ್ಟೋಬರ್‌ನಿಂದ ಕೇವಲ 2 ಏಕದಿನ, 3 ಟಿ20 ಪಂದ್ಯಗಳನ್ನಾಡಿದ್ದಾರೆ. ಕರ್ನಾಟಕದ ವೇಗಿಗಳಾದ ವೈಶಾಖ್, ವಿದ್ವತ್‌ಗೆ ಬಿಸಿಸಿಐ ಮನ್ನಣೆ!
ರಾಜ್ಯದ ವೇಗಿಗಳಾದ ವೈಶಾಖ್ ವಿಜಯ್ ಕುಮಾರ್ ಹಾಗೂ ವಿದ್ವತ್ ಕಾವೇರಪ್ಪ ಸೇರಿ ಐವರು ವೇಗಿಗಳಿಗೆ ಬಿಸಿಸಿಐ ವಿಶೇಷ ಗುತ್ತಿಗೆ ನೀಡಿದೆ. ಈ ಪಟ್ಟಿಯಲ್ಲಿ ಉಮ್ರಾನ್ ಮಲಿಕ್, ಆಕಾಶ್ ದೀಪ್ ಹಾಗೂ ಯಶ್ ದಯಾಳ್ ಸಹ ಸ್ಥಾನ ಪಡೆದಿದ್ದಾರೆ. ಗುತ್ತಿಗೆ ಪಟ್ಟಿಯಿಂದ ಪೂಜಾರ, ರಹಾನೆ ಔಟ್!ಕಳೆದ ವರ್ಷ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿದ್ದ ನಾಲ್ವರು ಹಿರಿಯ ಆಟಗಾರರು ಗುತ್ತಿಗೆ ಕಳೆದುಕೊಂಡಿದ್ದಾರೆ. ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್ ಹಾಗೂ ಯಜುವೇಂದ್ರ ಚಹಲ್‌ಗೆ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.