ರಣಜಿ ಟ್ರೋಫಿ : ಕೃಷ್ಣನ್‌ ಶ್ರೀಜಿತ್‌ ಶತಕ, ಯಶೋವರ್ಧನ್‌ ಅರ್ಧಶತಕ, ಕರ್ನಾಟಕ ಮೇಲುಗೈ

KannadaprabhaNewsNetwork | Updated : Nov 15 2024, 04:10 AM IST

ಸಾರಾಂಶ

ಕೃಷ್ಣನ್‌ ಶ್ರೀಜಿತ್‌ ಶತಕ, ಯಶೋವರ್ಧನ್‌ ಅರ್ಧಶತಕ. ಕರ್ನಾಟಕ ಮೊದಲ ಇನ್ನಿಂಗ್ಸಲ್ಲಿ ರಾಜ್ಯ ತಂಡ 275 ರನ್‌, 186 ರನ್‌ ಮುನ್ನಡೆ. 2ನೇ ಇನ್ನಿಂಗ್ಸಲ್ಲಿ ಉ.ಪ್ರದೇಶ ಉತ್ತಮ ಹೋರಾಟ.

ಲಖನೌ: ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ. ಮೊದಲ ದಿನವೇ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ್ದ ರಾಜ್ಯ ತಂಡ, ವಿಕೆಟ್ ಕೀಪರ್‌ ಬ್ಯಾಟರ್‌ ಕೃಷ್ಣನ್‌ ಶ್ರೀಜಿತ್‌ರ ಆಕರ್ಷಕ ಶತಕ, ಯಶೋವರ್ಧನ್‌ರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸಲ್ಲಿ 275 ರನ್‌ ಕಲೆಹಾಕಿ, 186 ರನ್‌ ಮುನ್ನಡೆ ಸಂಪಾದಿಸಿತು.

2ನೇ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರ ಪ್ರದೇಶ, 2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 78 ರನ್‌ ಕಲೆಹಾಕಿದ್ದು, ಇನ್ನೂ 108 ರನ್‌ ಹಿನ್ನಡೆಯಲ್ಲಿದೆ.

127 ರನ್‌ಗಳಿಗೆ 5 ವಿಕೆಟ್‌ಗಳಿಂದ 2ನೇ ದಿನದಾಟವನ್ನು ಆರಂಭಿಸಿದ ಕರ್ನಾಟಕ, ಬಹುಬೇಗನೆ ಶ್ರೇಯಸ್‌ ಗೋಪಾಲ್‌ (15)ರ ವಿಕೆಟ್‌ ಕಳೆದುಕೊಂಡಿತು. ಆದರೆ, ಶ್ರೀಜಿತ್‌ ಹಾಗೂ ಯಶೋವರ್ಧನ್‌ ತಂಡದ ಮೊತ್ತವನ್ನು 200 ರನ್‌ ದಾಟಿಸಿದರು.

153 ಎಸೆತಗಳನ್ನು ಎದುರಿಸಿದ ಶ್ರೀಜಿತ್‌ 12 ಬೌಂಡರಿಗಳೊಂದಿಗೆ 110 ರನ್‌ ಗಳಿಸಿ ಔಟಾದರು. ಬಳಿಕ, ಯಶೋವರ್ಧನ್‌ ಹಾಗೂ ವಿದ್ಯಾಧರ್‌ ಪಾಟೀಲ್‌(38) ಉತ್ತಮ ಬ್ಯಾಟಿಂಗ್‌ ನಡೆಸಿ 51 ರನ್‌ ಸೇರಿಸಿದರು. ಪಾದಾರ್ಪಣಾ ಪಂದ್ಯದಲ್ಲೇ 20 ವರ್ಷದ ಯಶೋವರ್ಧನ್‌ 125 ಎಸೆತ ಬ್ಯಾಟ್‌ ಮಾಡಿ 55 ರನ್‌ ಗಳಿಸಿ ಗಮನ ಸೆಳದರು.

2ನೇ ಇನ್ನಿಂಗ್ಸ್‌ನಲ್ಲಿ ಉತ್ತರ ಪ್ರದೇಶ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಅಭಿಷೇಕ್‌ ಗೋಸ್ವಾಮಿ 3 ರನ್‌ಗೆ ಔಟಾದರು. ಬಳಿಕ ಜೊತೆಯಾದ ಮಾಧವ್‌ ಕೌಶಿಕ್‌ ಹಾಗೂ ನಾಯಕ ಆರ್ಯನ್‌ ಜುಯಲ್‌ ಮುರಿಯದ 2ನೇ ವಿಕೆಟ್‌ಗೆ 70 ರನ್‌ ಸೇರಿಸಿದ್ದು, 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.ಸ್ಕೋರ್‌: ಉ.ಪ್ರದೇಶ 89 ಹಾಗೂ 78/1 (ಆರ್ಯನ್‌ 35, ಮಾಧವ್‌ 33, ಪಾಟೀಲ್‌ 1-25), ಕರ್ನಾಟಕ 275 (ಶ್ರೀಜಿತ್‌ 110, ಯಶೋವರ್ಧನ್‌ 55, ಅಕಿಬ್‌ 3-53)

Share this article