ಟಿ20 ವಿಶ್ವಕಪ್‌: ಕೊನೆ ಬಾಲ್‌ ಥ್ರಿಲ್ಲರ್‌ನಲ್ಲಿ ಆಫ್ರಿಕಾಕ್ಕೆ ನೇಪಾಳ ಶರಣು

KannadaprabhaNewsNetwork |  
Published : Jun 16, 2024, 01:55 AM ISTUpdated : Jun 16, 2024, 04:25 AM IST
ಶಮ್ಸಿ | Kannada Prabha

ಸಾರಾಂಶ

1 ರನ್‌ನಿಂದ ವೀರೋಚಿತ ಸೋಲು ಕಂಡ ನೇಪಾಳ. ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 115 ರನ್‌. ನೇಪಾಳ 114/7. ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ ನೇಪಾಳ ಬ್ಯಾಟರ್‌ ರನೌಟ್‌.

ಕಿಂಗ್ಸ್‌ಟೌನ್‌(ಸೇಂಟ್‌ ವಿನ್ಸೆಂಟ್‌): ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಬೇಜವಾಬ್ದಾರಿತನದಿಂದ ರನ್‌ಔಟ್‌ ಆಗುವುದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಫಲಿತಾಂಶ ದಾಖಲಿಸುವ ಅವಕಾಶವನ್ನು ನೇಪಾಳ ತಂಡ ಕಳೆದುಕೊಂಡಿದೆ. 

ಕೊನೆ ಎಸೆತದ ಥ್ರಿಲ್ಲರ್‌ಗೆ ಸಾಕ್ಷಿಯಾದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ನೇಪಾಳ ವಿರುದ್ಧ ದ.ಆಫ್ರಿಕಾ 1 ರನ್‌ ರೋಚಕ ಗೆಲುವು ಸಾಧಿಸಿದ್ದು, ಸತತ 4 ಜಯದೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ಸೂಪರ್‌-8ಕ್ಕೇರಿದೆ. ನೇಪಾಳ ಟೂರ್ನಿಯ ಮೊದಲ ಗೆಲುವಿಗೆ ಮತ್ತಷ್ಟು ಸಮಯ ಕಾಯುವಂತಾಯಿತು.ಮೊದಲು ಬ್ಯಾಟ್‌ ಮಾಡಿದ ಆಫ್ರಿಕಾ, ನೇಪಾಳದ ಮಾರಕ ದಾಳಿಗೆ ತತ್ತರಿಸಿ ಕಲೆಹಾಕಿದ್ದು 7 ವಿಕೆಟ್‌ಗೆ 115 ರನ್. ನಾಯಕ ಮಾರ್ಕ್‌ರಮ್‌(15), ಡಿ ಕಾಕ್‌(10), ಕ್ಲಾಸೆನ್‌(03), ಮಿಲ್ಲರ್‌(07) ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್‌(49 ಎಸೆತಗಳಲ್ಲಿ 43) ಹಾಗೂ ಟ್ರಿಸ್ಟನ್‌ ಸ್ಟಬ್ಸ್‌(18 ಎಸೆತಗಳಲ್ಲಿ ಔಟಾಗದೆ 27) ತಂಡಕ್ಕೆ ಆಸರೆಯಾದರು. 

ಕುಶಾಲ್‌ 19 ರನ್‌ಗೆ 4, ದೀಪೇಂದ್ರ ಸಿಂಗ್‌ 21 ರನ್‌ಗೆ 3 ವಿಕೆಟ್‌ ಕಬಳಿಸಿದರು.116 ರನ್‌ ಸುಲಭ ಗುರಿಯೇ ಆಗಿದ್ದರೂ, ಈ ಬಾರಿ ವಿಶ್ವಕಪ್‌ನ ಪಿಚ್‌ಗಳ ಪರಿಸ್ಥಿತಿ ಗಮನಿಸಿದರೆ ಈ ಮೊತ್ತವನ್ನು ದ.ಆಫ್ರಿಕಾ ರಕ್ಷಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ ನೇಪಾಳದ ಬ್ಯಾಟರ್‌ಗಳು ಪ್ರಬಲ ಹೋರಾಟ ಪ್ರದರ್ಶಿಸಿದರು. ಆಸಿಫ್‌ ಶೇಖ್‌(42) ಹಾಗೂ ಅನಿಲ್‌ ಶಾ(27) ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 

85ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ ಕುಸಿಯಿತು. ತಂಡಕ್ಕೆ ಕೊನೆ 18 ಎಸೆತಗಳಲ್ಲಿ 18 ರನ್‌ ಬೇಕಿತ್ತು. ಆ ಓವರ್‌ನ ಕೊನೆ ಎಸೆತದಲ್ಲಿ ಆಸಿಫ್‌ ಔಟಾದರು. ಆ ಬಳಿಕ 2 ಓವರಲ್ಲಿ 16 ರನ್ ಬೇಕಿದ್ದಾಗ ತಂಡ ಒತ್ತಡಕ್ಕೊಳಗಾಗಿ ಸೋಲೊಪ್ಪಿಕೊಂಡಿತು.ಸ್ಕೋರ್‌: ದ.ಆಫ್ರಿಕಾ 20 ಓವರಲ್ಲಿ 115/7 (ಹೆಂಡ್ರಿಕ್ಸ್‌ 43, ಸ್ಟಬ್ಸ್‌ 27*, ಕುಶಾಲ್‌ 4-19, ದೀಪೇಂದ್ರ 3-21), ನೇಪಾಳ 20 ಓವರಲ್ಲಿ 114/7 (ಆಸಿಫ್‌ 42, ಅನಿಲ್‌ 27, ಶಮ್ಸಿ 4-19) ಪಂದ್ಯಶ್ರೇಷ್ಠ: ತಬ್ರೇಜ್‌ ಶಮ್ಸಿ

ಹೇಗಿತ್ತು ಕೊನೆ ಓವರ್‌?

ಬಾರ್ಟ್ಮನ್‌ ಎಸೆದ ಕೊನೆ ಓವರಲ್ಲಿ 8 ರನ್‌ ಬೇಕಿತ್ತು. ಗುಲ್ಶಾನ್‌ ಝಾ 2 ಎಸೆತ ವ್ಯರ್ಥ ಮಾಡಿದರೂ 3ನೇ ಎಸೆತವನ್ನು ಬೌಂಡರಿಗಟ್ಟಿದರು. 4ನೇ ಎಸೆತದಲ್ಲಿ 2 ರನ್‌ ದೋಚಿದರು. 5ನೇ ಎಸೆತ ಡಾಟ್‌ ಆಗಿದ್ದರಿಂದ ಕೊನೆ ಎಸೆತದಲ್ಲಿ 2 ರನ್‌ ಬೇಕಿತ್ತು. ಗುಲ್ಶಾನ್‌ ಬ್ಯಾಟ್‌ಗೆ ಸಿಗದೆ ಬಾಲ್‌ ಕೀಪರ್‌ನ ಕೈ ಸೇರಿದರೂ ಓಡಲು ಶುರು ಮಾಡಿದ ಗುಲ್ಶಾನ್‌, ನಾನ್‌ಸ್ಟ್ರೈಕ್‌ ಗೆರೆ ಮುಟ್ಟುವ ಮೊದಲೇ ಬೇಜವಾಬ್ದಾರಿತನದಿಂದ ನಿಧಾನವಾದ ಕಾರಣ ರನ್‌ಔಟ್‌ ಆದರು. ರನ್ ಪೂರ್ಣಗೊಳಿಸಿದ್ದರೆ ಪಂದ್ಯ ಸೂಪರ್‌ ಓವರ್‌ಗೆ ಹೋಗುತ್ತಿತ್ತು

.06ನೇ ಬಾರಿ: ಟಿ20 ವಿಶ್ವಕಪ್‌ನಲ್ಲಿ ತಂಡವೊಂದು 1 ರನ್‌ನಿಂದ ಗೆದ್ದಿರುವುದು ಇದು 6ನೇ ಬಾರಿ.

05ನೇ ಬಾರಿ: ಅಂತಾರಾಷ್ಟ್ರೀಯ ಟಿ20ಯಲ್ಲಿ ದ.ಆಫ್ರಿಕಾ 5ನೇ ಬಾರಿ 1 ರನ್‌ ಅಂತರದಲ್ಲಿ ಗೆದ್ದಿತು. ಬೇರೆ ಯಾವ ತಂಡವೂ 2ಕ್ಕಿಂತ ಹೆಚ್ಚು ಬಾರಿ ಗೆದ್ದಿದ್ದಿಲ್ಲ.

 

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ