ದಕ್ಷಿಣ ಭಾರತದ ಏಕೈಕ ಹಿಲ್ ರನ್ ''ದಿವ್ಯಶ್ರೀ ನಂದಿ ಮಾನ್ಸೂನ್ ರನ್''ಗೆ ಚಾಲನೆ

KannadaprabhaNewsNetwork |  
Published : Apr 23, 2026, 01:15 AM IST
ಹಿಲ್‌ ರನ್‌ | Kannada Prabha

ಸಾರಾಂಶ

ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಹಾಗೂ ಸುಸ್ಥಿರತೆಯ ದೃಢವಾದ ಗುರಿ ಹೊಂದಿರುವ 2026ರ 'ದಿವ್ಯಶ್ರೀ ನಂದಿ ಮಾನ್ಸೂನ್ ರನ್' (ಡಿಎನ್ಎಮ್ಆರ್), ಭಾರತದ ಓಟಗಾರರಿಗಾಗಿ ಒಂದು ಜನಪ್ರಿಯ 'ಡೆಸ್ಟಿನೇಶನ್ ರನ್' ಆಗಿ ಬೆಳೆಯುವ ಆಶಯ ಹೊಂದಿದೆ. ಮೋಡಗಳ ನಡುವಿನ ಈ ಓಟವು ಕ್ರೀಡಾಪಟುಗಳಿಗೆ ನೈಜ 'ಮಾನ್ಸೂನ್ ಮ್ಯಾಜಿಕ್'ನ ರೋಮಾಂಚನವನ್ನು ಉಣಬಡಿಸಲಿದೆ.

ಬೆಂಗಳೂರು: ದಕ್ಷಿಣ ಭಾರತದ ಏಕೈಕ ''ಹಿಲ್ ರನ್''(ಬೆಟ್ಟದ ಓಟ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಹುನಿರೀಕ್ಷಿತ ''ದಿವ್ಯಶ್ರೀ ನಂದಿ ಮಾನ್ಸೂನ್ ರನ್'' (ಡಿಎನ್ಎಮ್ಆರ್) ಕ್ರೀಡಾಕೂಟದ ಎರಡನೇ ಆವೃತ್ತಿಯನ್ನು ಇತ್ತೀಚೆಗೆ ನಗರದಲ್ಲಿ ನಡೆದ ಅದ್ಧೂರಿ ''ಕರ್ಟನ್ ರೈಸರ್'' ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜೆಜೆ ಆಕ್ಟಿವ್ ಹಾಗೂ ದಿವ್ಯಶ್ರೀ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ, ಡಿಎನ್ಎಮ್ಆರ್ 2026ನೇ ಆವೃತ್ತಿಯು ಆಗಸ್ಟ್ 9, 2026ರಂದು ನಿಸರ್ಗರಮ್ಯ ನಂದಿ ಬೆಟ್ಟದಲ್ಲಿ ಜರುಗಲಿದೆ ಎಂದು ಘೋಷಿಸಲಾಯಿತು. ಈ ಬಾರಿಯ ಕ್ರೀಡಾಕೂಟವು ಮತ್ತಷ್ಟು ಬೃಹತ್ತಾಗಿ, ಆಕರ್ಷಕವಾಗಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರಲು ವೇದಿಕೆ ಸಜ್ಜಾಗಿದೆ.2025ರಲ್ಲಿ ನಡೆದ ಮೊದಲ ಆವೃತ್ತಿಯ ಅಭೂತಪೂರ್ವ ಯಶಸ್ಸಿನ (ಬೆಂಗಳೂರಿನಿಂದಲೇ ಸುಮಾರು 3,000 ಓಟಗಾರರು ಭಾಗವಹಿಸಿದ್ದರು) ಹಿನ್ನೆಲೆಯಲ್ಲಿ, ಈ ವರ್ಷ ಕ್ರೀಡಾಕೂಟದ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಬಾರಿ ದೇಶಾದ್ಯಂತದ 6,000ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಇದೊಂದು ಪ್ರತಿಷ್ಠಿತ ''ಡೆಸ್ಟಿನೇಶನ್ ರನ್'' ಆಗಿ ವಿಕಸನಗೊಳ್ಳುವ ದೀರ್ಘಕಾಲೀನ ದೃಷ್ಟಿಕೋನವನ್ನು ಹೊಂದಿದ್ದು, ಭಾರತದ ಎಂಡ್ಯೂರೆನ್ಸ್ ಕ್ರೀಡಾ ಕ್ಯಾಲೆಂಡರ್‌ನಲ್ಲಿ ಪ್ರತಿಯೊಬ್ಬರೂ ತಪ್ಪದೇ ಪಾಲ್ಗೊಳ್ಳಬೇಕಾದ ಕ್ರೀಡಾಕೂಟವಾಗಿ ಡಿಎನ್ಎಮ್ಆರ್ ತನ್ನನ್ನು ತಾನು ರೂಪಿಸಿಕೊಳ್ಳುತ್ತಿದೆ. ಜೊತೆಗೆ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನೂ ಸೆಳೆಯುವ ಬೃಹತ್ ಯೋಜನೆಯನ್ನು ಹೊಂದಿದೆ.ಮಾನ್ಸೂನ್-ಪ್ರೇರಿತ ಬೆಟ್ಟದ ಓಟ ಹಾಗೂ ನಿಸರ್ಗದೊಂದಿಗೆ ಬೆರೆಯುವ ವಿಶಿಷ್ಟ ಅನುಭವ ನೀಡುವುದೇ ಡಿಎನ್ಎಮ್ಆರ್ನ ಪ್ರಮುಖ ಆಕರ್ಷಣೆಯಾಗಿದೆ. ಮಂಜು ಮುಸುಕಿದ ನಂದಿಬೆಟ್ಟದ ರಮಣೀಯ ಪರಿಸರದಲ್ಲಿ ನಡೆಯುವ ಈ ಕ್ರೀಡಾಕೂಟವು, ಸ್ಪರ್ಧಿಗಳಿಗೆ ಮೋಡಗಳ ನಡುವೆ ಓಡುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ. ಇದು ಕೇವಲ ದೈಹಿಕ ಸಾಮರ್ಥ್ಯದ ಪರೀಕ್ಷೆಯಷ್ಟೇ ಅಲ್ಲ, ಪ್ರಕೃತಿಯೊಂದಿಗಿನ ಆಳವಾದ ಕಾವ್ಯಾತ್ಮಕ ಸಂಬಂಧವನ್ನು ಬೆಸೆಯುವ ಅನುಭವವಾಗಿದೆ. ಭಾರತದಾದ್ಯಂತ ''ಹಿಲ್ ರನ್ನಿಂಗ್'' ಅಪಾರ ಜನಪ್ರಿಯತೆ ಗಳಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ದಕ್ಷಿಣ ಭಾರತದ ಏಕೈಕ ಹಿಲ್ ರನ್ ಆಗಿರುವ ಡಿಎನ್ಎಮ್ಆರ್ ಗುಡ್ಡಗಾಡು ರೇಸಿಂಗ್‌ನಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ.ಸುಸ್ಥಿರತೆಯ ಬಗೆಗಿನ ಬಲವಾದ ಬದ್ಧತೆಯೇ ದಿವ್ಯಶ್ರೀ ನಂದಿ ಮಾನ್ಸೂನ್ ರನ್‌ನ ಪ್ರಮುಖ ಆಧಾರಸ್ತಂಭ. ಇದು ಈ ಕ್ರೀಡಾಕೂಟವನ್ನು ಭಾರತದ ಮಾದರಿ ಹಸಿರು ಕ್ರೀಡಾ ಉಪಕ್ರಮವಾಗಿ ನಿಲ್ಲಿಸಿದೆ. ಸ್ಪರ್ಧಿಗಳು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ತರುವುದು ಮತ್ತು ಸಾರ್ವಜನಿಕ ಸಾರಿಗೆ ಅಥವಾ ಕಾರ್ ಪೂಲಿಂಗ್ ಬಳಸುವಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವ ''ಗ್ರೀನ್ ವಾರಿಯರ್ ಪ್ರೋಗ್ರಾಂ''ನಂತಹ ಹಲವು ಉಪಕ್ರಮಗಳ ಮೂಲಕ ಆಯೋಜಕರು ಈ ತತ್ವವನ್ನು ಸಾಕಾರಗೊಳಿಸಿದ್ದಾರೆ. ಶೂನ್ಯ ತ್ಯಾಜ್ಯ (Zero-waste) ಮಹತ್ವಾಕಾಂಕ್ಷೆಗೆ ಅನುಗುಣವಾಗಿ, ಡಿಎನ್ಎಮ್ಆರ್ ಕಟ್ಟುನಿಟ್ಟಾದ ''ಪ್ಲಾಸ್ಟಿಕ್-ಮುಕ್ತ'' ಹಾಗೂ ''ಬಿಸಾಡಬಹುದಾದ (ಡಿಸ್ಪೋಸಬಲ್) ಕಪ್‌ಗಳ ನಿಷೇಧ'' ನೀತಿಯನ್ನು ಅಳವಡಿಸಿಕೊಂಡಿದೆ. ಅಲ್ಲದೆ, ಮರುಬಳಕೆಯ ಟಂಬ್ಲರ್‌ಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ಜೊತೆಗೆ, ಮರ ನೆಡುವ ಉಪಕ್ರಮಗಳಿಗಾಗಿ ಪರಿಸರ ಸಂಸ್ಥೆಗಳೊಂದಿಗೆ ಕೈಜೋಡಿಸಲಿದ್ದು, ''ನೆಟ್-ಝೀರೋ'' ತ್ಯಾಜ್ಯದ ಗುರಿ ತಲುಪಲು ಥರ್ಡ್-ಪಾರ್ಟಿ ಆಡಿಟ್‌ಗಳನ್ನು (ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆ) ಸಹ ಕೈಗೊಳ್ಳಲಿದೆ.ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಕುಮಾರ್ ಸಿಂಗ್, "ದಿವ್ಯಶ್ರೀ ನಂದಿ ಮಾನ್ಸೂನ್ ರನ್ ಕ್ರೀಡೆ, ಆರೋಗ್ಯ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮವು ಯುವಕರನ್ನು ಫಿಟ್‌ನೆಸ್‌ನತ್ತ ಸೆಳೆಯುವುದರ ಜೊತೆಗೆ, ಬೃಹತ್ ಕಾರ್ಯಕ್ರಮಗಳನ್ನು ಪರಿಸರ ಕಾಳಜಿಯೊಂದಿಗೆ ಹೇಗೆ ಜವಾಬ್ದಾರಿಯುತವಾಗಿ ನಡೆಸಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಈ ಓಟವು ಸರ್ಕಾರದ ''ಸಶಕ್ತ ಕರ್ನಾಟಕ'' ಉಪಕ್ರಮದ ಮುಂದುವರಿದ ಭಾಗವಾಗಿದ್ದು, ರಾಜ್ಯದ ಪ್ರಮುಖ ಕ್ರೀಡಾ ಹಾಗೂ ಪ್ರವಾಸೋದ್ಯಮ ಕಾರ್ಯಕ್ರಮವಾಗಿ ಹೊರಹೊಮ್ಮುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ " ಎಂದು ಹರ್ಷ ವ್ಯಕ್ತಪಡಿಸಿದರು.ಈ ಉಪಕ್ರಮದ ಹಿಂದಿನ ದೃಷ್ಟಿಕೋನವನ್ನು ವಿವರಿಸಿದ ದಿವ್ಯಶ್ರೀ ಡೆವಲಪರ್ಸ್‌ನ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ವಿಭಾಗದ ಪ್ರೋಗ್ರಾಂ ಡೈರೆಕ್ಟರ್ ರುಚಿಕಾ ಭಾಸ್ಕರ್ ರಾಜು, "ದಿವ್ಯಶ್ರೀ ಸಂಸ್ಥೆಯಲ್ಲಿ ನಾವು ಕೇವಲ ಮೂಲಸೌಕರ್ಯಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಮೌಲ್ಯಯುತ ಅನುಭವಗಳನ್ನು ಸೃಷ್ಟಿಸುವಲ್ಲಿಯೂ ನಂಬಿಕೆ ಇಟ್ಟಿದ್ದೇವೆ. ಡಿಎನ್ಎಮ್ಆರ್ ಆ ತತ್ವದ ಪ್ರತಿಬಿಂಬವಾಗಿದ್ದು, ಪ್ರಕೃತಿ, ಸಮುದಾಯ ಮತ್ತು ಪ್ರಜ್ಞಾಪೂರ್ವಕ ಜೀವನಶೈಲಿಯನ್ನು ಬೆಸೆಯುತ್ತದೆ. ನಾವು ಎರಡನೇ ಆವೃತ್ತಿಗೆ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಡಿಎನ್ಎಮ್ಆರ್ ಅನ್ನು ಭಾರತದಾದ್ಯಂತದ ಓಟಗಾರರನ್ನು ಸೆಳೆಯುವ ''ಲ್ಯಾಂಡ್‌ಮಾರ್ಕ್'' ಕಾರ್ಯಕ್ರಮವಾಗಿ ಸ್ಥಾಪಿಸುವುದು ಹಾಗೂ ಬೆಂಗಳೂರಿನ ಪ್ರಮುಖ ವಾರ್ಷಿಕ ಕ್ರೀಡಾಕೂಟವಾಗಿ ವಿಕಸನಗೊಳಿಸುವುದು ನಮ್ಮ ಗುರಿಯಾಗಿದೆ " ಎಂದರು.ಕ್ರೀಡಾಕೂಟದ ತಾಂತ್ರಿಕ ಮತ್ತು ಸಮುದಾಯದ ಅಂಶಗಳ ಕುರಿತು ಮಾತನಾಡಿದ ಜೆಜೆ ಆಕ್ಟಿವ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಹೆಡ್ ಕೋಚ್ ಪ್ರಮೋದ್ ದೇಶಪಾಂಡೆ, "ದಿವ್ಯಶ್ರೀ ನಂದಿ ಮಾನ್ಸೂನ್ ರನ್ ಕ್ರೀಡಾಕೂಟವನ್ನು ವಿಶ್ವದರ್ಜೆಯ ಹಿಲ್ ರನ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದು ''ಭಾರತದ ರನ್ನಿಂಗ್ ಕ್ಯಾಪಿಟಲ್'' ಎಂಬ ಬೆಂಗಳೂರಿನ ಹೆಗ್ಗಳಿಕೆಗೆ ಹೊಸ ಗರಿ ಮೂಡಿಸಲಿದೆ. ಮಾರ್ಗಗಳ ಆಯ್ಕೆ, ಕ್ರೀಡಾಪಟುಗಳ ಸುರಕ್ಷತೆ ಹಾಗೂ ರೇಸ್ ದಿನದ ಅನುಷ್ಠಾನದವರೆಗೆ, ಪ್ರತಿಯೊಂದು ಹಂತದಲ್ಲೂ ಸ್ಪರ್ಧಿಗಳಿಗೆ ಸವಾಲು ಮತ್ತು ರೋಮಾಂಚನ ಒದಗಿಸಲು ಸೂಕ್ಷ್ಮವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದಾದ್ಯಂತ ಹೆಚ್ಚುತ್ತಿರುವ ಸ್ಪರ್ಧಿಗಳ ಭಾಗವಹಿಸುವಿಕೆಯೊಂದಿಗೆ, ಈ ಕ್ರೀಡಾಕೂಟದ ಮೂಲಕ ಬಲವಾದ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಸುಭದ್ರ ರನ್ನಿಂಗ್ ಸಮುದಾಯವನ್ನು ನಿರ್ಮಿಸಲು ನಾವು ಉತ್ಸುಕರಾಗಿದ್ದೇವೆ " ಎಂದು ತಿಳಿಸಿದರು.2026ರ ಡಿಎನ್ಎಮ್ಆರ್ ಆವೃತ್ತಿಯು ಕಳೆದ ವರ್ಷದಂತೆಯೇ ''ಹಾಫ್ ಮ್ಯಾರಥಾನ್'' (21.1 ಕಿ.ಮೀ) ಹಾಗೂ ''10K'' (10 ಕಿ.ಮೀ) ಎಂಬ ಎರಡು ರೇಸ್ ವಿಭಾಗಗಳನ್ನು ಮುಂದುವರಿಸಲಿದ್ದು, ವಿಭಿನ್ನ ಸಾಮರ್ಥ್ಯದ ಓಟಗಾರರಿಗೆ ಅವಕಾಶ ಕಲ್ಪಿಸಲಿದೆ. ವಿಶೇಷವೆಂದರೆ, ಈ ಎರಡೂ ಓಟದ ಮಾರ್ಗಗಳು ಈಗ ಪ್ರತಿಷ್ಠಿತ ''ವರ್ಲ್ಡ್ ಅಥ್ಲೆಟಿಕ್ಸ್'' ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟಿವೆ. ಸುಧಾರಿತ ಕ್ರೀಡಾ ಮೂಲಸೌಕರ್ಯ, ವಿಸ್ತೃತ ವ್ಯಾಪ್ತಿ ಹಾಗೂ ಸ್ಪರ್ಧಿಗಳ ಅನುಭವದ ಮೇಲೆ ವಿಶೇಷ ಗಮನ ಕೇಂದ್ರೀಕರಿಸುವ ಮೂಲಕ, ಈ ಕಾರ್ಯಕ್ರಮವು ನಮ್ಮ ಭಾಗದ ಎಂಡ್ಯೂರೆನ್ಸ್ ಕ್ರೀಡೆಗಳಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ.ಕರ್ಟನ್ ರೈಸರ್ ಕಾರ್ಯಕ್ರಮದ ಬೆನ್ನಲ್ಲೇ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ದಿವ್ಯಶ್ರೀ ನಂದಿ ಮಾನ್ಸೂನ್ ರನ್ 2026 ಪ್ರಮುಖ ಸುಸ್ಥಿರ ಬೆಟ್ಟದ ಓಟವಾಗಿ ತನ್ನ ಛಾಪು ಮೂಡಿಸಲು ಸಜ್ಜಾಗಿರುವುದರ ಜೊತೆಗೆ, ಕರ್ನಾಟಕದಲ್ಲಿ ಸಮುದಾಯದ ಆರೋಗ್ಯ, ಕ್ರೀಡಾ ಪ್ರವಾಸೋದ್ಯಮ ಹಾಗೂ ಪರಿಸರ ಪೂರಕ ಜೀವನಶೈಲಿಗೆ ಹೊಸ ವೇಗ ನೀಡುತ್ತಿದೆ.ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಇದೀಗ ಮುಕ್ತವಾಗಿದೆ. ಆಸಕ್ತ ಕ್ರೀಡಾಪಟುಗಳು ಅಧಿಕೃತ ವೆಬ್‌ಸೈಟ್ https://dnmr.co.in/ ಗೆ ಭೇಟಿ ನೀಡುವ ಮೂಲಕ ದಿವ್ಯಶ್ರೀ ನಂದಿ ಮಾನ್ಸೂನ್ ರನ್ 2026ರಲ್ಲಿ ಸೈನ್ ಅಪ್ ಆಗಿ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಬಹುದು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‌ : ಕೆಎಸ್‌ಸಿಎ ಸದಸ್ಯನ ವಿಚಾರಣೆ
ಚಿನ್ನಸ್ವಾಮಿಯ ದೋಸೆ, ಇಡ್ಲಿ, ಚಟ್ನಿ ಹಾಡಿಗೆ ಸಿಎಸ್‌ಕೆ ತಂಡ ಆಕ್ಷೇಪ, ಬಿಸಿಸಿಐಗೆ ದೂರು!