ಹೈದರಾಬಾದ್: ‘ಬಾಜ್‌ಬಾಲ್’ ಹೆಸರಿನಲ್ಲಿ ಆಕ್ರಮಣಕಾರಿ ಆಟದ ಮೂಲಕ ವಿಶ್ವದ ವಿವಿಧ ಬಲಿಷ್ಠ ತಂಡಗಳ ನಿದ್ದೆಗೆಡಿಸಿದ್ದ ಇಂಗ್ಲೆಂಡ್‌ನ ಕಾರ್ಯತಂತ್ರ ಭಾರತೀಯರ ಸ್ಪಿನ್ ಬಾಲ್ ಮುಂದೆ ಮೊದಲ ದಿನವೇ ಠುಸ್ಸಾಗಿದೆ. ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ‘ಬಾಜ್‌ಬಾಲ್’ ಆಟವನ್ನು ಟೀಂ ಇಂಡಿಯಾ ತನ್ನ ತವರಿನಲ್ಲಿ ತಡೆದಿದ್ದು, ತನ್ನದೇ ‘ಜೈಸ್‌ಬಾಲ್’ ಮೂಲಕ ತಿರುಗೇಟು ನೀಡಿದೆ. ಇದರೊಂದಿಗೆ ಮೊದಲ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತ ಬಿಗಿ ಹಿಡಿತ ಸಾಧಿಸಿದೆ.ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ತಿಣುಕಾಡಿದ ಇಂಗ್ಲೆಂಡ್ ಕೇವಲ 246ಕ್ಕೆ ಸರ್ವಪತನಗೊಂಡಿತು. ಬಳಿಕ ಅನನುಭವಿ ಇಂಗ್ಲೆಂಡ್ ಸ್ಪಿನ್ನರ್‌ಗಳನ್ನು ಚೆಂಡಾಡಿದ ಭಾರತ, ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 119 ರನ್ ಗಳಿಸಿದ್ದು, ಇನ್ನು ಕೇವಲ 127 ರನ್ ಹಿನ್ನಡೆಯಲ್ಲಿದೆ.ಆರಂಭಿಕ ಅಬ್ಬರ: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಎಂದಿನಂತೆ ಅಬ್ಬರದ ಆರಂಭ ಪಡೆಯಿತು. ಜ್ಯಾಕ್ ಕ್ರಾವ್ಲಿ(20), ಬೆನ್ ಡಕೆಟ್(35) ಮೊದಲ ವಿಕೆಟ್‌ಗೆ 11.5 ಓವರಲ್ಲಿ 55 ರನ್ ಸೇರಿಸಿದರು. ಆದರೆ ಡಕೆಟ್‌ರನ್ನು ಅಶ್ವಿನ್ ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ಇಂಗ್ಲೆಂಡ್ ತಣ್ಣಗಾಯಿತು. ಓಲಿ ಪೋಪ್(01) ಮತ್ತು ಜೋ ರೂಟ್(29) ಜಡೇಜಾಗೆ ಬಲಿಯಾದರೆ, ಬೇರ್‌ಸ್ಟೋವ್(37) ಹಾಗೂ ಬೆನ್ ಫೋಕ್ಸ್(04)ರನ್ನು ಜಡೇಜಾ ಔಟ್ ಮಾಡಿದರು. ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದ ನಾಯಕ ಬೆನ್ ಸ್ಟೋಕ್ಸ್ ಹೋರಾಟದ 70 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಜಡೇಜಾ, ಅಶ್ವಿನ್ ತಲಾ 3, ಅಕ್ಷರ್, ಬೂಮ್ರಾ ತಲಾ 2 ವಿಕೆಟ್ ಕಿತ್ತರು.ಜೈಸ್ವಾಲ್ ಸ್ಫೋಟಕ ಫಿಫ್ಟಿ: ಇಂಗ್ಲೆಂಡ್‌ನ ಬಾಜ್‌ಬಾಲ್ ಆಟಕ್ಕೆ ಕಡಿವಾಣ ಹಾಕಿದ ಭಾರತ ಬಳಿಕ ಅವರದೇ ಶೈಲಿಯಲ್ಲಿ ತಿರುಗೇಟು ನೀಡಿತು. ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಯಶಸ್ವಿ ಜೈಸ್ವಾಲ್, 2ನೇ ಓವರಲ್ಲಿ ಎರಡೆರಡು ಸಿಕ್ಸರ್ ಸಿಡಿಸುವ ಮೂಲಕ ಆಕ್ರಮಣಕಾರಿ ಆಟಕ್ಕೆ ನಾಂದಿ ಹಾಡಿದರು. ತಂಡ 6.3 ಓವರಲ್ಲೇ 50 ರನ್ ಪೂರ್ತಿಗೊಳಿಸಿತು. ಈ ನಡುವೆ ರೋಹಿತ್ ಕೂಡಾ ಅಬ್ಬರದ ಆಟಕ್ಕೆ ಮುಂದಾದರೂ, ಅವರ ಇನ್ನಿಂಗ್ಸ್ 24 ರನ್‌ಗೆ ಕೊನೆಗೊಂಡಿತು. ಆದರೆ ಇಂಗ್ಲೆಂಡ್ ಬೌಲರ್‌ಗಳನ್ನು ಚೆಂಡಾಡಿದ ಜೈಸ್ವಾಲ್, 70 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 76 ರನ್ ಸಿಡಿಸಿದರು. 14 ರನ್ ಗಳಿಸಿರುವ ಶುಭ್‌ಮನ್ ಗಿಲ್ ಕೂಡಾ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 14ನೇ ಓವರ್ ವೇಳೆಗಾಗಲೇ ತನ್ನೆಲ್ಲಾ ಡಿಆರ್‌ಎಸ್ ಅವಕಾಶಗಳನ್ನು ಕಳೆದುಕೊಂಡಿರುವ ಇಂಗ್ಲೆಂಡ್ ಸಂಕಷ್ಟದಲ್ಲಿದೆ.ಸ್ಕೋರ್: ಇಂಗ್ಲೆಂಡ್ 64.3 ಓವರಲ್ಲಿ 246/10(ಸ್ಟೋಕ್ಸ್ 70, ಬೇರ್‌ಸ್ಟೋವ್ 37, ಅಶ್ವಿನ್ 3-68, ಜಡೇಜಾ 3-88), ಭಾರತ 23 ಓವರಲ್ಲಿ 119/1(ಮೊದಲ ದಿನದಂತ್ಯಕ್ಕೆ) (ಜೈಸ್ವಾಲ್ 76*, ರೋಹಿತ್ 24, ಲೀಚ್ 1-24).-ಎಲ್ಲಾ ಮಾದರಿಯಲ್ಲಿ 50 ಪಂದ್ಯ ರಾಹುಲ್ ದಾಖಲೆ
ಕೆ.ಎಲ್.ರಾಹುಲ್ 50ನೇ ಟೆಸ್ಟ್ ಪಂದ್ಯವಾಡಿದರು. ಈ ಮೂಲಕ ಎಲ್ಲಾ ಮಾದರಿ(ಟೆಸ್ಟ್, ಏಕದಿನ, ಟಿ20)ಯಲ್ಲಿ ಕನಿಷ್ಠ 50 ಪಂದ್ಯಗಳನ್ನಾಡಿದ ಕರ್ನಾಟಕದ ಮೊದಲ ಮತ್ತು ಭಾರತದ ಒಟ್ಟಾರೆ 6ನೇ ಆಟಗಾರ ಎನಿಸಿಕೊಂಡರು. ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಆರ್.ಅಶ್ವಿನ್, ರೋಹಿತ್ ಶರ್ಮಾ ಕೂಡಾ ಈ ಸಾಧನೆ ಮಾಡಿದ್ದಾರೆ. ಇನ್ನು ರಾಹುಲ್ ಭಾರತದ ಪರ 50 ಟೆಸ್ಟ್ ಆಡಿದ ಕರ್ನಾಟಕದ 7ನೇ ಆಟಗಾರ. ದ್ರಾವಿಡ್(164), ಅನಿಲ್ ಕುಂಬ್ಳೆ(132), ಜಿ.ಆರ್.ವಿಶ್ವನಾಥ್(91), ಸಯ್ಯದ್ ಕೀರ್ಮಾನಿ(88), ಜಾವಗಲ್ ಶ್ರೀನಾಥ್(67), ಚಂದ್ರಶೇಕರ್(58) ಇತರ ಸಾಧಕರು.-ಜಡೇಜಾ-ಅಶ್ವಿನ್‌ಹೊಸ ದಾಖಲೆಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ-ಅಶ್ವಿನ್ ಜೋಡಿ ಹೊಸ ದಾಖಲೆ ಬರೆದಿದೆ. ಒಟ್ಟಿಗೆ ಆಡುವಾಗ ಇವರಿಬ್ಬರೂ ಸೇರಿ 506 ವಿಕೆಟ್ ಪಡೆದಿದ್ದು, ಭಾರತ ಪರ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ-ಹರ್ಭಜನ್ ಒಟ್ಟಿಗೇ ಆಡುವಾಗ 501 ವಿಕೆಟ್ ಪಡೆದಿದ್ದರು.-01ನೇ ಭಾರತೀಯವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 150+ ವಿಕೆಟ್ ಕಿತ್ತ ಭಾರತದ ಮೊದಲ ಬೌಲರ್ ಆರ್.ಅಶ್ವಿನ್. ಆಸ್ಟ್ರೇಲಿಯಾದ ನೇಥನ್ ಲಯನ್(170), ಪ್ಯಾಟ್ ಕಮಿನ್ಸ್(169) ಕೂಡಾ ಈ ಸಾಧನೆ ಮಾಡಿದ್ದಾರೆ.