ನವದೆಹಲಿ: ದಕ್ಷಿಣ ಆಫ್ರಿಕಾದ ಪವರ್ ಹಿಟ್ಟರ್ ಹೈನ್ರಿಚ್ ಕ್ಲಾಸೆನ್‌ರನ್ನು 2025ರ ಐಪಿಎಲ್‌ಗೆ ₹23 ಕೋಟಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಂಡಿದೆ ಎಂದು ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಕಳೆದ ಆವೃತ್ತಿಯಲ್ಲಿ ₹5.25 ಕೋಟಿಗೆ ಬಿಕರಿಯಾಗಿದ್ದು, ಕ್ಲಾಸೆನ್‌ಗೆ ಈ ಬಾರಿ ಹರಾಜಿಗೂ ಮೊದಲೇ ದುಬಾರಿ ಮೊತ್ತ ನೀಡಿ, ಸನ್‌ರೈಸರ್ಸ್ ರೀಟೈನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ಟ್ರ್ಯಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿಯನ್ನೂ ಸನ್‌ರೈಸರ್ಸ್ ಉಳಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಐಪಿಎಲ್ ರೀಟೆನ್ಷನ್ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ ₹18 ಕೋಟಿ, 2ನೇ ಆಟಗಾರನಿಗೆ ₹14 ಕೋಟಿ, 3ನೇ ಆಟಗಾರನಿಗೆ ₹11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ ₹18 ಕೋಟಿ ಹಾಗೂ ₹14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್ ಆಡದ ಆಟಗಾರನನ್ನು ₹4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ ₹79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.ಯಾವ ಆಟಗಾರನಿಗೆ ಎಷ್ಟು ದುಡ್ಡು ಕೊಡಬೇಕು ಎನ್ನುವುದನ್ನು ಫ್ರಾಂಚೈಸಿಗಳು ನಿರ್ಧರಿಸಬಹುದಾಗಿದ್ದು, ಒಂದು ವೇಳೆ ನಿಗದಿತ ₹79 ಕೋಟಿಗಿಂತ ಹೆಚ್ಚು ಮೊತ್ತವನ್ನು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಳಸಿದರೆ, ಹರಾಜಿನಲ್ಲಿ ಬಳಸಬಹುದಾದ ಮೊತ್ತದಿಂದ ಕಡಿತಗೊಳಿಸುವುದಾಗಿ ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.