ಯಶಸ್ವಿ, ದುಬೆ ಅಬ್ಬರಕ್ಕೆ ಆಫ್ಘನ್‌ ತತ್ತರ

KannadaprabhaNewsNetwork |  
Published : Jan 15, 2024, 01:47 AM ISTUpdated : Jan 15, 2024, 01:47 PM IST
ಶಿವಂ ದುಬೆ  | Kannada Prabha

ಸಾರಾಂಶ

ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ ಜಯ ಸಿಕ್ಕಿದೆ. ಈ ಮೂಲಕ 2-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದೆ. ಆಫ್ಘನ್‌ 10 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸದರೆ, ಭಾರತ 4 ಕಳೆದುಕೊಂಡು 15.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಇಂದೋರ್‌: ಯಶಸ್ವಿ ಜೈಸ್ವಾಲ್‌, ಶಿವಂ ದುಬೆ ಅಬ್ಬರದಿಂದಾಗಿ ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20ಯಲ್ಲಿ ಭಾರತ 6 ವಿಕೆಟ್‌ ಭರ್ಜರಿ ಜಯಗಳಿಸಿದೆ. 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಗೆದ್ದುಕೊಂಡಿದೆ.

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 20 ಓವರಲ್ಲಿ 172ಕ್ಕೆ ಆಲೌಟಾಯಿತು. ಆದರೆ ಸ್ಪರ್ಧಾತ್ಮಕ ಗುರಿಯನ್ನು ಭಾರತ 15.4 ಓವರ್‌ಗಳಲ್ಲೇ 4 ವಿಕೆಟ್‌ ಕಳೆದುಕೊಂಡು ಬೆನ್ನತ್ತಿತು. 

ರೋಹಿತ್‌ ಶರ್ಮಾ ಮತ್ತೆ ಶೂನ್ಯ ಸುತ್ತಿದರೆ, ವಿರಾಟ್‌ ಕೊಹ್ಲಿ 16 ಎಸೆತದಲ್ಲಿ 29 ರನ್‌ ಸಿಡಿಸಿ ನಿರ್ಗಮಿಸಿದರು. ಆದರೆ 3ನೇ ವಿಕೆಟ್‌ಗೆ ಜೈಸ್ವಾಲ್‌-ದುಬೆ 92 ರನ್‌ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು.

ಜೈಸ್ವಾಲ್‌ 34 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್‌ನೊಂದಿಗೆ 68 ರನ್‌ ಸಿಡಿಸಿದರೆ, ದುಬೆ 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 63 ರನ್‌ ಚಚ್ಚಿದರು.

ಗುಲ್ಬದಿನ್‌ ಫಿಫ್ಟಿ ಆರಂಭದಿಂದಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಆಫ್ಘನ್‌ಗೆ ಅಲ್ಪ ನೆರವಾಗಿದ್ದು ಗುಲ್ಬದಿನ್‌ ನೈಬ್‌. ಅವರು 35 ಎಸೆತಗಳಲ್ಲಿ 57 ರನ್‌ ಸಿಡಿಸಿದ್ದು ಬಿಟ್ಟರೆ ಇತರರಿಂದ ದೊಡ್ಡ ಕೊಡುಗೆ ಸಿಗಲಿಲ್ಲ. ಅರ್ಶ್‌ದೀಪ್‌ 3, ಬಿಷ್ಣೋಯ್‌, ಅಕ್ಷರ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: ಅಫ್ಘಾನಿಸ್ತಾನ 20 ಓವರಲ್ಲಿ 172/10 (ಗುಲ್ಬದಿನ್‌ 57, ಅರ್ಶ್‌ದೀಪ್‌ 3-32), ಭಾರತ 15.4 ಓವರಲ್ಲಿ 173/4 (ಜೈಸ್ವಾಲ್‌ 68, ದುಬೆ 63*, ಕರೀಂ 2-13)

13ನೇ ಗೆಲುವು: ಭಾರತ ತವರಿನಲ್ಲಿ ಸತತ 13ನೇ ಟಿ20 ಸರಣಿ ಗೆಲುವು ಸಾಧಿಸಿತು. 2019ರಿಂದ ಭಾರತ ಟಿ20 ಸರಣಿ ಸೋತಿಲ್ಲ. 15 ಸರಣಿ ಆಡಿದ್ದು, 2 ಡ್ರಾಗೊಂಡಿವೆ.

01ನೇ ಆಟಗಾರ: ರೋಹಿತ್‌ ಶರ್ಮಾ 150 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗ.

ಧೋನಿ ದಾಖಲೆ ಸರಿಗಟ್ಟಿದ ರೋಹಿತ್‌: ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ 41 ಟಿ20 ಪಂದ್ಯಗಳನ್ನು ಗೆದ್ದಿದೆ. ಇದರೊಂದಿಗೆ ರೋಹಿತ್‌, ಧೋನಿಯ ದಾಖಲೆ ಸರಿಗಟ್ಟಿದರು. ಧೋನಿ ನಾಯಕತ್ವದಲ್ಲಿ ಭಾರತ 72 ಪಂದ್ಯಗಳಲ್ಲಿ 41ರಲ್ಲಿ ಗೆದ್ದಿದೆ. ರೋಹಿತ್‌ ಕೇವಲ 53 ಪಂದ್ಯಗಳಲ್ಲೇ ಈ ಮೈಲಿಗಲ್ಲು ತಲುಪಿದರು.

PREV

Recommended Stories

5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 6 ರನ್‌ ಅತಿ ರೋಚಕ ಗೆಲುವು
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !