ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಅರ್ಹತಾ ಸುತ್ತಿನ ಅಭೂತಪೂರ್ವ ಪ್ರದರ್ಶನದ ಬಳಿಕ ಭಾರತದ ಅಗ್ರ ಟೆನಿಸಿಗ ಸುಮಿತ್ ನಗಾಲ್ ತಮ್ಮ ಗೆಲುವಿನ ಓಟವನ್ನು ಪ್ರಧಾನ ಸುತ್ತಿನಲ್ಲೂ ಮುಂದುವರಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ.
26ರ ನಗಾಲ್ ಮಂಗಳವಾರ 2 ಗಂಟೆ 38 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಮುಖ್ಯ ಸುತ್ತಿನ ಪಂದ್ಯದಲ್ಲಿ 31ನೇ ಶ್ರೇಯಾಂಕಿತ, ವಿಶ್ವ ನಂ.27, ಕಜಕಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ 6-4, 6-2, 7-6(7-5) ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.
ಈ ಮೂಲಕ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕಳೆದ 35 ವರ್ಷಗಳಲ್ಲಿ ಶ್ರೇಯಾಂಕಿತ ಆಟಗಾರನ ವಿರುದ್ಧ ಗೆಲುವು ಸಾಧಿಸಿದ ಭಾರತದ ಮೊದಲ ಟೆನಿಸಿಗ ಎಂಬ ಖ್ಯಾತಿ ಗಳಿಸಿದರು. 1989ರಲ್ಲಿ ರಮೇಶ್ ಕೃಷ್ಣನ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಗಿನ ವಿಶ್ವ ನಂ.1, ಹಾಲಿ ಚಾಂಪಿಯನ್ ಮ್ಯಾಟ್ಸ್ ವಿಲಾಂಡೆರ್‌ರನ್ನು ಸೋಲಿಸಿದ್ದರು.
ಇನ್ನು, ವಿಶ್ವ ರ್‍ಯಾಂಕಿಂಗ್‌ನಲ್ಲಿ 137ನೇ ಸ್ಥಾನದಲ್ಲಿರುವ ನಗಾಲ್ 2ನೇ ಬಾರಿ ಗ್ರ್ಯಾನ್‌ಸ್ಲಾಂನ 2ನೇ ಸುತ್ತಿಗೇರಿದರು. ಈ ಮೊದಲು 2020ರ ಯುಎಸ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ನಗಾಲ್ ಈ ಬಾರಿ ಟೂರ್ನಿಯಲ್ಲಿ 3 ಅರ್ಹತಾ ಸುತ್ತು ಸೇರಿ 4 ಪಂದ್ಯಗಳನ್ನಾಡಿದ್ದು, ಒಂದೂ ಸೆಟ್ ಸೋತಿಲ್ಲ.
05ನೇ ಭಾರತೀಯ: ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಗೆದ್ದ 4ನೇ ಭಾರತೀಯ ಸುಮಿತ್. ಈ ಮೊದಲು ರಮೇಶ್ ಕೃಷ್ಣನ್, ವಿಜಯ್ ಅಮೃತ್‌ರಾಜ್, ಲಿಯಾಂಡರ್ ಪೇಸ್, ಸೋಮ್‌ದೇವ್ ದೇವ್‌ವರ್ಮನ್ ಸಿಂಗಲ್ಸ್‌ನಲ್ಲಿ ಗೆದ್ದಿದ್ದರು. ಆದರೆ ಯಾರೂ 3ನೇ ಸುತ್ತು ದಾಟಿಲ್ಲ.
ಸಂಕಷ್ಟದಲ್ಲಿದ್ದ ನಗಾಲ್ ಈಗ ಕೋಟಿ ಒಡೆಯ
ಭಾರತದ ಅಗ್ರ ಶ್ರೇಯಾಂಕಿತ ಟೆನಿಸಿಗನಾಗಿದ್ದರೂ ಸುಮಿತ್‌ಗೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಕಳೆದ ವರ್ಷ ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಬೇಸರ ತೋಡಿಕೊಂಡಿದ್ದ ಅವರು, ತಮ್ಮ ಬ್ಯಾಂಕ್ ಖಾತೆಯಲ್ಲಿ ಕೇವಲ ₹80 ಸಾವಿರ ಇದೆ.
ಇದರಿಂದ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಆಡಲು ಸಾಧ್ಯವಿಲ್ಲ ಎಂದಿದ್ದರು. ಸದ್ಯ ಆಸ್ಟ್ರೇಲಿಯನ್ ಓಪನ್ ಮೊದಲ ಸುತ್ತಲ್ಲಿ ಗೆದ್ದಿದ್ದರಿಂದ ಅವರಿಗೆ ಅಂದಾಜು ₹65 ಲಕ್ಷ ರು. ಸಿಗಲಿದೆ. ಈಗಾಗಲೇ ಅರ್ಹತಾ ಸುತ್ತಿನ 3 ಪಂದ್ಯ ಗೆದ್ದಿರುವುದರಿಂದ ಅದರಿಂದಲೂ ಒಟ್ಟು ₹35 ಲಕ್ಷ ನಗಾಲ್ ಖಾತೆ ಸೇರಲಿದೆ.
ಈ ಗೆಲುವು ಆರ್ಥಿಕ ನೆರವಿನ ಜೊತೆಗೆ ಈ ವರ್ಷದ ಇನ್ನುಳಿದ 3 ಗ್ರ್ಯಾನ್‌ಸ್ಲಾಂ ಟೂರ್ನಿಗೂ ಮುನ್ನ ನಗಾಲ್ ಆತ್ಮವಿಶ್ವಾಸ ಹೆಚ್ಚಿಸಿದೆ.
ಸ್ವಿಯಾಟೆಕ್, ಆಲ್ಕರಜ್ 2ನೇ ಸುತ್ತಿಗೆ ಪ್ರವೇಶ
ವಿಶ್ವ ನಂ.1 ಇಗಾ ಸ್ವಿಯಾಟೆಕ್, ಟೆನಿಸ್‌ನ ಯುವ ಸೂಪರ್‌ಸ್ಟಾರ್ ಕಾರ್ಲೊಸ್ ಆಲ್ಕರಜ್ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ, ಮಾಜಿ ಚಾಂಪಿಯನ್, ಅಮೆರಿಕದ ಸೋಫಿಯಾ ಕೆನಿನ್ ವಿರುದ್ಧ 7-6(2), 6-2 ಅಂತರದಲ್ಲಿ ಗೆದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ 20ರ ಆಲ್ಕರಜ್ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್‌ರನ್ನು ಸೋಲಿಸಿದರು.
ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕಿತೆ ಎಲೆನಾ ರಬೈಕೆನಾ, ಎಮ್ಮಾ ರಾಡುಕಾನು, ಜೆಸ್ಸಿಕಾ ಪೆಗುಲಾ, ವಿಕ್ಟೋರಿಯಾ ಅಜರೆಂಕಾ, ಪುರುಷರ ಸಿಂಗಲ್ಸ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್, ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ, ಕ್ಯಾಸ್ಪೆರ್ ರುಡ್ 2ನೇ ಸುತ್ತು ಪ್ರವೇಶಿಸಿದರು.
ಯೂಕಿಗೆ ಸೋಲು: ಪುರುಷರ ಡಬಲ್ಸ್‌ನಲ್ಲಿ ಭಾರತದ ಯೂಕಿ ಬ್ಹಾಂಬ್ರಿ-ನೆದರ್‌ಲೆಂಡ್ಸ್‌ನ ರಾಬಿನ್ ಹಾಸ್ ಜೋಡಿ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು. ಈ ಜೋಡಿಗೆ ಕೊಲಂಬಿಯಾದ ನಿಕೋಲಸ್ ಬ್ಯಾರೀನ್ಟಸ್-ಬ್ರೆಜಿಲ್‌ನ ರಾಫೆಲ್ ಮಾಟೊಸ್ ಜೋಡಿ 6-1, 6-7 (8-10), 6-7, (7-10) ಅಂತರದಲ್ಲಿ ಸೋಲುಣಿಸಿತು.