ಸ್ಪಂದನ್ ಕಣಿಯಾರ್
ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಸೋಮವಾರ ರನ್ ಹೊಳೆಗೆ ಸಾಕ್ಷಿಯಾಯಿತು. ದಾಖಲೆಗಳ ಸುರಿಮಳೆಯೇ ಸುರಿಯಿತು. ಸನ್‌ರೈಸರ್ಸ್ 287 ರನ್ ಸಿಡಿಸಿ ಐಪಿಎಲ್‌ನಲ್ಲಿ ಗರಿಷ್ಠ ರನ್ ದಾಖಲೆಯನ್ನು ಉತ್ತಮಗೊಳಿಸಿಕೊಂಡರೆ, ಅತ್ಯುತ್ತಮ ಹೋರಾಟ ತೋರಿದ ಆರ್‌ಸಿಬಿ 262 ರನ್ ಕಲೆಹಾಕಿ, 22 ರನ್‌ಗಳ ಸೋಲು ಕಂಡಿತು. ಪಂದ್ಯದಲ್ಲಿ ದಾಖಲಾಗಿದ್ದು ಒಟ್ಟು 549 ರನ್! ಇನ್ನೂ ಪಂದ್ಯದಲ್ಲಿ ಒಟ್ಟು 40 ಸಿಕ್ಸರ್‌ಗಳು ಸಿಡಿದವು. ಇದೂ ಕೂಡ ದಾಖಲೆ. ಭರ್ಜರಿ ಹೋರಾಟ ತೋರಿದರೂ, ಆರ್‌ಸಿಬಿ 7 ಪಂದ್ಯಗಳಲ್ಲಿ 6ನೇ ಸೋಲು ಕಂಡಿದೆ. ತಂಡದ ನೆಟ್ ರನ್ ರೇಟ್ ಪಾತಾಳಕ್ಕೆ ಕುಸಿದಿದ್ದು, ಪ್ಲೇ-ಆಫ್ ಬಾಗಿಲು ಹೆಚ್ಚೂ ಕಡಿಮೆ ಮುಚ್ಚಿದೆ. ಪ್ಲೇ-ಆಫ್ ಪ್ರವೇಶಿಸಬೇಕಿದ್ದರೆ ಆರ್‌ಸಿಬಿ ಬಾಗಿಲು ಮುರಿದು ಮುನ್ನಗ್ಗಬೇಕಷ್ಟೆ.
ಉತ್ತಮ ಹೋರಾಟ: ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ, ಮೊದಲ 6 ಓವರಲ್ಲಿ 79 ರನ್ ಸಿಡಿಸಿ, ಅಭಿಮಾನಿಗಳ ಮುಖದಲ್ಲಿ ಸ್ವಲ್ಪ ನಗು ತರಿಸುವ ಪ್ರಯತ್ನ ನಡೆಸಿದರು. ಕೊಹ್ಲಿ ಔಟಾಗುತ್ತಿದ್ದಂತೆ ಕ್ರೀಡಾಂಗಣ ಮೌನಕ್ಕೆ ಶರಣಾಯಿತು. ಅಲ್ಲಿಂದ ಮುಂದಕ್ಕೆ ಉಳಿದಿದ್ದು, ಆರ್‌ಸಿಬಿ ಎಷ್ಟು ರನ್‌ಗಳಿಂದ ಸೋಲಲಿದೆ ಎನ್ನುವ ಕುತೂಹಲವೊಂದೇ ಎನ್ನುವಂತಿತ್ತು. ಆದರೆ ದಿನೇಶ್ ಕಾರ್ತಿಕ್‌ರ ಹೋರಾಟ, ಆರ್‌ಸಿಬಿ ಹೀನಾಯವಾಗಿ ಸೋಲುವುದನ್ನು ತಪ್ಪಿಸಿತು. 35 ಎಸೆತದಲ್ಲಿ ಕಾರ್ತಿಕ್ 83 ರನ್ ಸಿಡಿಸಿ, ತಂಡ 250 ರನ್ ದಾಟಲು ಕಾರಣರಾದರು.
ಸನ್ ಪವರ್‌ಫುಲ್ ಆಟ: ಹೆಡ್ ಹಾಗೂ ಶರ್ಮಾ ಮೊದಲ 6 ಓವರಲ್ಲೇ 76 ರನ್ ಪೇರಿಸಿದರು. 7.1 ಓವರಲ್ಲಿ ಸನ್‌ರೈಸರ್ಸ್ 100 ರನ್ ದಾಟಿತು. 108 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ಬಳಿಕ ಅಭಿಷೇಕ್ ಔಟಾದರು. 39 ಎಸೆತದಲ್ಲಿ ಶತಕ ಸಿಡಿಸಿ, 41 ಎಸೆತದಲ್ಲಿ 9 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 102 ರನ್ ಗಳಿಸಿ ಹೆಡ್ ಔಟಾದಾಗ ತಂಡದ ಮೊತ್ತ 12.3 ಓವರಲ್ಲಿ 165 ರನ್. ಕ್ಲಾಸೆನ್ ಕ್ರೀಸ್‌ನಲ್ಲಿ ಇದ್ದಿದ್ದರಿಂದ ಸನ್‌ರೈಸರ್ಸ್ ದಾಖಲೆ ಮೊತ್ತ ಪೇರಿಸಲಿದೆ ಎನ್ನುವುದು ಖಾತರಿಯಾಗಿತ್ತು. ಕ್ಲಾಸೆನ್ 31 ಎಸೆತದಲ್ಲಿ 2 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 67 ರನ್ ಗಳಿಸಿ ಔಟಾದರು. ಏಡನ್ ಮಾರ್ಕ್‌ರಮ್ (32*), ಅಬ್ದುಲ್ ಸಮದ್ 10 ಎಸೆತದಲ್ಲಿ 37 ರನ್ ಚಚ್ಚಿ, ಸನ್‌ರೈಸರ್ಸ್ ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳಲು ನೆರವಾದರು.
ಸ್ಕೋರ್: ಸನ್‌ರೈಸರ್ಸ್: 20 ಓವರಲ್ಲಿ 287/3 (ಹೆಡ್ 102, ಕ್ಲಾಸೆನ್ 67, ಲಾಕಿ 2-52), ಆರ್‌ಸಿಬಿ 20 ಓವರಲ್ಲಿ 262/7 (ಕಾರ್ತಿಕ್ 83, ಡು ಪ್ಲೆಸಿ 62, ಕಮಿನ್ಸ್ 3-43) ಪಂದ್ಯಶ್ರೇಷ್ಠ: ಟ್ರ್ಯಾವಿಸ್ ಹೆಡ್
ನಾಲ್ವರು ಬೌಲರ್‌ಗಳು ಫಿಫ್ಟಿ: ದಾಖಲೆ!
ಸನ್‌ರೈಸರ್ಸ್ ಹೇಗಿದ್ದರೂ ಚೆಂಡಾಡಲಿದೆ ಎನ್ನುವ ಆರಿವು ಆರ್‌ಸಿಬಿಗಿತ್ತು ಎನಿಸುತ್ತೆ. ಇದೇ ಕಾರಣಕ್ಕೆ ಕೇವಲ ನಾಲ್ವರು ತಜ್ಞ ಬೌಲರ್‌ಗಳೊಂದಿಗೆ ಕಣಕ್ಕಿಳಿಯಿತು. ವಿಲ್ ಜ್ಯಾಕ್ಸ್ ತಂಡಕ್ಕಿದ್ದ ಮತ್ತೊಂದು ಬೌಲಿಂಗ್ ಆಯ್ಕೆ. ಆರ್‌ಸಿಬಿಯ ನಾಲ್ಕೂ ತಜ್ಞ ಬೌಲರ್‌ಗಳು ಭಾರಿ ದುಬಾರಿಯಾದರು. ಟಾಪ್ಲಿ 4 ಓವರಲ್ಲಿ 68, ಯಶ್ ದಯಾಳ್ 4 ಓವರಲ್ಲಿ 51, ಲಾಕಿ ಫರ್ಗ್ಯೂಸನ್ 4 ಓವರಲ್ಲಿ 52, ವೈಶಾಖ್ 4 ಓವರಲ್ಲಿ 64 ರನ್ ಚಚ್ಚಿಸಿಕೊಂಡರು.
549 ರನ್: ಟಿ20 ದಾಖಲೆ!
ಸನ್‌ರೈಸರ್ಸ್-ಆರ್‌ಸಿಬಿ ಪಂದ್ಯದಲ್ಲಿ ಒಟ್ಟು 549 ರನ್ ದಾಖಲಾಯಿತು. ಟಿ20 ಇತಿಹಾಸದಲ್ಲೇ ಅತಿಹೆಚ್ಚು ರನ್‌ಗೆ ಸಾಕ್ಷಿಯಾದ ಪಂದ್ಯವಿದು. ಇದಕ್ಕೂ ಮುನ್ನ ಇದೇ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ 523 ರನ್ ದಾಖಲಾಗಿತ್ತು. ಆ ದಾಖಲೆ ಪತನಗೊಂಡಿದೆ.