ಪ್ಲೇ-ಆಫ್‌ನಿಂದ ಸನ್‌ರೈಸರ್ಸ್‌ ಔಟ್‌!

ಸಾರಾಂಶ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅತ್ಯಾಕರ್ಷಕ ಬೌಲಿಂಗ್‌ ದಾಳಿ ನಡೆಸಿ, ಇನ್ನೇನು ಪಂದ್ಯವನ್ನು ಸುಲಭದಲ್ಲಿ ಗೆದ್ದೇ ಬಿಟ್ಟೆವು ಎಂಬಂತಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಮಳೆರಾಯ ಚೇತರಿಸಿಕೊಳ್ಳಲಾಗದ ಶಾಕ್ ಕೊಟ್ಟಿದ್ದಾನೆ.

ಹೈದರಾಬಾದ್‌: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅತ್ಯಾಕರ್ಷಕ ಬೌಲಿಂಗ್‌ ದಾಳಿ ನಡೆಸಿ, ಇನ್ನೇನು ಪಂದ್ಯವನ್ನು ಸುಲಭದಲ್ಲಿ ಗೆದ್ದೇ ಬಿಟ್ಟೆವು ಎಂಬಂತಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಮಳೆರಾಯ ಚೇತರಿಸಿಕೊಳ್ಳಲಾಗದ ಶಾಕ್ ಕೊಟ್ಟಿದ್ದಾನೆ. ಪರಿಣಾಮ ಸನ್‌ರೈಸರ್ಸ್‌ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಮವಾರದ ನಿರ್ಣಾಯಕ ಸೆಣಸಾಟದಲ್ಲಿ ತಂಡಕ್ಕೆ ಗೆಲ್ಲಲೇಬೇಕಿತ್ತು. ಆದರೆ ಅದಕ್ಕೆ ಮಳೆರಾಯ ಬಿಡಲಿಲ್ಲ. ಧಾರಾಕಾರ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತು. ಸುಲಭದಲ್ಲಿ ಗೆದ್ದು 2 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್‌ ಕೇವಲ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿತು. ಆಡಿರುವ 11 ಪಂದ್ಯಗಳಲ್ಲಿ ಕೇವಲ 7 ಅಂಕ ಸಂಪಾದಿಸಿರುವ ತಂಡ, ನಾಕೌಟ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು. ಅತ್ತ ಡೆಲ್ಲಿ ಕೂಡಾ 1 ಅಂಕ ಗಳಿಸಿದರೂ, ತಂಡ 11 ಪಂದ್ಯಗಳಲ್ಲಿ 13 ಅಂಕದೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಇನ್ನೆರಡು ಪಂದ್ಯ ಗೆದ್ದರೂ ತಂಡಕ್ಕೆ ಪ್ಲೇ-ಆಫ್‌ಗೇರಬಹುದು.

ಮಾರಕ ಬೌಲಿಂಗ್‌: ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಡ ಸನ್‌ರೈಸರ್ಸ್‌, ಮಾರಕ ದಾಳಿ ಸಂಘಟಿಸಿತು. ನಾಯಕ ಪ್ಯಾಟ್‌ ಕಮಿನ್ಸ್‌ರ ಬೆಂಕಿ ದಾಳಿಯಿಂದಾಗಿ ಡೆಲ್ಲಿ ವಿಕೆಟ್‌ಗಳು ತರಗೆಲೆಯಂತೆ ಉದುರಿತು. 7.1 ಓವರಲ್ಲಿ 29 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಕೊನೆಯಲ್ಲಿ ಟ್ರಿಸ್ಟನ್‌ ಸ್ಟಬ್ಸ್‌(ಔಟಾಗದೆ 41), ಅಶುತೋಷ್‌ ಶರ್ಮಾ(41) ಆಸರೆಯಾದರು. ಕಮಿನ್ಸ್‌ 4 ಓವರಲ್ಲಿ 19 ರನ್‌ಗೆ 4 ವಿಕೆಟ್‌ ಕಿತ್ತರು.

ಸುಲಭ ಗುರಿ ಪಡೆದ ಸನ್‌ರೈಸರ್ಸ್ ಚೇಸಿಂಗ್‌ಗೆ ಇಳಿಯುವ ಮುನ್ನ ಮಳೆ ಸುರಿಯಲಾರಂಭಿಸಿತು. ಆ ಬಳಿಕ ಮಳೆ ನಿಂತಿತ್ತು. ರಾತ್ರಿ 11 ಗಂಟೆಗೆ. ಒಂದೂವರೆ ಗಂಟೆ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು. ಹೀಗಾಗಿ 11.10ರ ವೇಳೆಗೆ ಪಂದ್ಯ ರದ್ದುಗೊಳಿಸಲಾಯಿತು.

ರೇಸ್‌ನಿಂದ 3ನೇ

ತಂಡ ಹೊರಕ್ಕೆ

ಈ ಬಾರಿ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ 3ನೇ ತಂಡ ಸನ್‌ರೈಸರ್ಸ್‌. ಈಗಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌, ರಾಜಸ್ಥಾನ ರಾಯಲ್ಸ್‌ ತಂಡಗಳು ಅಧಿಕೃವಾಗಿ ಹೊರಬಿದ್ದಿದ್ದವು. ಸನ್‌ರೈಸರ್ಸ್, ಚೆನ್ನೈಗೆ ಇನ್ನು ತಲಾ 3, ರಾಜಸ್ಥಾನಕ್ಕೆ 2 ಪಂದ್ಯ ಬಾಕಿಯಿದೆ.

Share this article