ನವದೆಹಲಿ: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಕೊನೆಗೂ ಪ್ರಕಟಗೊಂಡಿದೆ. ಇದರೊಂದಿಗೆ ಟಿ20 ನಾಯಕತ್ವ ವಿಚಾರ, ಹಿರಿಯ ಆಟಗಾರರ ವಿಶ್ರಾಂತಿ ವಿಚಾರದಲ್ಲಿ ಎದುರಾಗಿದ್ದ ಗೊಂದಲಗಳಿಗೆ ತೆರೆಬಿದ್ದಿದೆ. ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ ಟಿ20 ಸರಣಿಗೆ ತಂಡದ ಸಾರಥ್ಯ ವಹಿಸಲಿದ್ದಾರೆ.
ಜು.27ರಿಂದ ಆರಂಭಗೊಳ್ಳಲಿರುವ ಟಿ20 ಹಾಗೂ ಏಕದಿನ ಸರಣಿಗೆ ಗುರುವಾರ ಬಿಸಿಸಿಐ ತಲಾ 15 ಆಟಗಾರರ ತಂಡ ಪ್ರಕಟಿಸಿತು. ಭಾರತದ ಭವಿಷ್ಯದ ನಾಯಕ ಎಂದೇ ಬಿಂಬಿತರಾಗಿದ್ದ ಹಾರ್ದಿಕ್‌ರನ್ನು ಟಿ20 ನಾಯಕತ್ವದ ರೇಸ್‌ನಿಂದ ಬಿಸಿಸಿಐ ಸದ್ಯಕ್ಕೆ ಹೊರಗಿಟ್ಟಿದ್ದು, ಸೂರ್ಯಗೆ ಹೊಣೆ ನೀಡಲಾಗಿದೆ.
ಕಳೆದ ನವೆಂಬರ್‌ನಲ್ಲಿ ಸೂರ್ಯ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಗೆದ್ದಿತ್ತು. ಇದೇ ವೇಳೆ ಉಪನಾಯಕನಾಗಿ ಶುಭ್‌ಮನ್ ಗಿಲ್‌ರನ್ನು ಬಿಸಿಸಿಐ ನೇಮಕ ಮಾಡಿದೆ.ಇನ್ನು, ಏಕದಿನ ಸರಣಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಸುದ್ದಿಯಾಗಿದ್ದರೂ ಇಬ್ಬರು ಆಟಗಾರರೂ ಸರಣಿಗೆ ಲಭ್ಯವಿದ್ದಾರೆ.
ಗಿಲ್ ಉಪನಾಯಕನಾಗಿ ಕಾರ್ಯನಿವರ್ಹಿಸಲಿದ್ದಾರೆ. ಸರಣಿಯಿಂದ ಜಸ್‌ಪ್ರೀತ್ ಬೂಮ್ರಾ ವಿಶ್ರಾಂತಿ ಪಡೆದಿದ್ದು, ರವೀಂದ್ರ ಜಡೇಜಾಗೆ ಸ್ಥಾನ ಸಿಕ್ಕಿಲ್ಲ. ಡಿಸೆಂಬರ್ ಬಳಿಕ ಶ್ರೇಯಸ್ ಅಯ್ಯರ್ ಮತ್ತೆ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.ಟಿ20 ಸರಣಿಯ 3 ಪಂದ್ಯಗಳು ಕ್ರಮವಾಗಿ ಜು.27, 28 ಹಾಗೂ 30ರಂದು ಪಲ್ಲೆಕೆಲೆಯಲ್ಲಿ ನಡೆಯಲಿವೆ. ಬಳಿಕ ಕೊಲಂಬೊದಲ್ಲಿ ಆ.2, 4 ಹಾಗೂ 7ರಂದು 3 ಏಕದಿನ ಪಂದ್ಯಗಳು ನಿಗದಿಯಾಗಿವೆ.
ಟಿ20 ತಂಡ: ಸೂರ್ಯಕುಮಾರ್(ನಾಯಕ), ಗಿಲ್(ಉಪ ನಾಯಕ), ಜೈಸ್ವಾಲ್, ರಿಂಕು ಸಿಂಗ್, ರಿಯಾನ್, ರಿಷಭ್, ಸ್ಯಾಮ್ಸನ್, ಹಾರ್ದಿಕ್, ಶಿವಂ ದುಬೆ, ಅಕ್ಷರ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಶ್‌ದೀಪ್, ಖಲೀಲ್ ಅಹ್ಮದ್, ಸಿರಾಜ್.
ಏಕದಿನ ತಂಡ: ರೋಹಿತ್(ನಾಯಕ), ಗಿಲ್(ಉಪ ನಾಯಕ), ವಿರಾಟ್, ರಾಹುಲ್, ರಿಷಭ್, ಶ್ರೇಯಸ್, ದುಬೆ, ಕುಲ್ದೀಪ್, ಸಿರಾಜ್, ವಾಷಿಂಗ್ಟನ್, ಅರ್ಶ್‌ದೀಪ್, ರಿಯಾನ್, ಅಕ್ಷರ್, ಖಲೀಲ್,ಹರ್ಷಿತ್.
ಗಂಭೀರ್‌ಗೆ ಆರಂಭಿಕ ಮೇಲುಗೈ!
ಲಂಕಾ ಸರಣಿ ಮೂಲಕ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ ಗೌತಮ್ ಗಂಭೀರ್ ಸರಣಿಗೂ ಮುನ್ನ ಆರಂಭಿಕ ಮೇಲುಗೈ ಸಾಧಿಸಿದ್ದಾರೆ. ರೋಹಿತ್, ಕೊಹ್ಲಿ ಸರಣಿಗೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಹಿರಿಯರು ಸರಣಿಗೆ ಲಭ್ಯವಿರಬೇಕು ಎಂದು ಗಂಭೀರ್ ಸೂಚಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ರೋಹಿತ್, ಕೊಹ್ಲಿ ತಂಡಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಗಿಲ್ ಭವಿಷ್ಯದ ನಾಯಕ?
ತಾರಾ ಬ್ಯಾಟರ್ ಶುಭ್‌ಮನ್ ಗಿಲ್ ಟಿ20 ಜೊತೆ ಏಕದಿನ ತಂಡದ ಉಪನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಈ ಮೂಲಕ ಅವರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷ ಏಕದಿನ ವಿಶ್ವಕಪ್, ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹಾರ್ದಿಕ್ ಉಪನಾಯಕರಾಗಿದ್ದರು. ಆದರೆ ಫಿಟ್ನೆಸ್ ಸಮಸ್ಯೆ ಕಾರಣಕ್ಕೆ ಅವರನ್ನು ನಾಯಕತ್ವದಿಂದ ದೂರವಿಡಲಾಗಿದೆ. ಇನ್ನು, ಕೆ.ಎಲ್.ರಾಹುಲ್, ರಿಷಭ್ ಪಂತ್‌ರನ್ನೂ ನಾಯಕತ್ವಕ್ಕೆ ಪರಿಗಣಿಸದ ಬಿಸಿಸಿಐ, 2027 ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಗಿಲ್‌ಗೆ ಉಪನಾಯಕತ್ವ ವಹಿಸಿದೆ.
ಅಭಿಷೇಕ್‌ಗಿಲ್ಲ ಚಾನ್ಸ್!
ಐಪಿಎಲ್ ಬಳಿಕ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧವೂ ಅಬ್ಬರಿಸಿದ್ದ ಯುವ ಬ್ಯಾಟರ್, ಟಿ20ಯಲ್ಲಿ ರೋಹಿತ್ ಶರ್ಮಾರ ಆರಂಭಿಕ ಸ್ಥಾನ ತುಂಬಬಲ್ಲ ಸೂಕ್ತ ಆಟಗಾರ ಎಂದೇ ಬಿಂಬಿತವಾಗಿದ್ದ ಅಭಿಷೇಕ್ ಶರ್ಮಾ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಋತುರಾಜ್ ಗಾಯಕ್ವಾಡ್ ಕೂಡಾ ಎರಡು ಸರಣಿಗಳಲ್ಲೂ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.
ರಿಯಾನ್‌ಗೆ ಎರಡು ಸರಣಿಗೂ ಅವಕಾಶ
ತಾರಾ ಬ್ಯಾಟರ್ ರಿಯಾನ್ ಪರಾಗ್‌ಗೆ ಬಿಸಿಸಿಐ ಎರಡು ಸರಣಿಗಳಲ್ಲೂ ಅವಕಾಶ ನೀಡಿದೆ. ದೇಸಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ರಿಯಾನ್, ಮಧ್ಯಮ ಕ್ರಮಾಂಕದ ಬ್ಯಾಟರ್.
ನಾಯಕತ್ವದಿಂದ ರಾಹುಲ್‌ಗೆ ಕೊಕ್
ಭಾರತ ತಂಡದ ನಾಯಕತ್ವದ ರೇಸ್‌ನಲ್ಲಿದ್ದ ಕರ್ನಾಟಕದ ಕೆ.ಎಲ್.ರಾಹುಲ್‌ಗೆ ಅವಕಾಶ ಕೈತಪ್ಪಿದೆ. ರೋಹಿತ್ ಅಲಭ್ಯರಾದರೆ ರಾಹುಲ್ ಏಕದಿನಕ್ಕೆ ನಾಯಕರಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ರೋಹಿತ್ ತಂಡಕ್ಕೆ ಆಗಮಿಸಿದ್ದು, ಉಪನಾಯಕನ ಸ್ಥಾನ ಗಿಲ್‌ಗೆ ಲಭಿಸಿದೆ. ರಾಹುಲ್ ತಂಡಕ್ಕೆ ಆಯ್ಕೆಯಾಗಿದ್ದರೂ ಇತರ ಯುವ ಬ್ಯಾಟರ್‌ಗಳಿಂದ ಭಾರಿ ಸ್ಪರ್ಧೆ ಎದುರಾಗಲಿರುವ ಕಾರಣ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯೂ ಇದೆ.