;Resize=(412,232))
ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ಗೆ ಶನಿವಾರ ಚಾಲನೆ ಸಿಗಲಿದೆ. ಭಾರತದ 5, ಶ್ರೀಲಂಕಾದ 3 ನಗರಗಳು ವಿಶ್ವಕಪ್ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿ ನಿಂತಿವೆ. ಕಳೆದ ಬಾರಿಯಂತೆ ಈ ಬಾರಿಯೂ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಸೆಣಸಾಡಲಿವೆ. ಟೂರ್ನಿಯಲ್ಲಿ ಕಪ್ ಗೆಲ್ಲಲು ಹೋರಾಡಲಿರುವ 20 ತಂಡಗಳು ಯಾವುವು? ಈ ಹಿಂದಿನ ಟೂರ್ನಿಗಳಲ್ಲಿ ಅವುಗಳ ಸಾಧನೆಯೇನು? ಈ ಬಾರಿ ತಂಡಗಳ ಬಲಾಬಲ ಏನು? ಪ್ರಮುಖ ಆಟಗಾರರು ಯಾರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.
ಹಾಲಿ ವಿಶ್ವ ಚಾಂಪಿಯನ್ ಎಂಬ ಪಟ್ಟವನ್ನು ಹೊತ್ತುಕೊಂಡಿರುವ ಟೀಂ ಇಂಡಿಯಾ ಈಗ ಮತ್ತೊಂದು ವಿಶ್ವಕಪ್ ಸಮರಕ್ಕೆ ಸಜ್ಜಾಗಿದೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಕಪ್ ಗೆದ್ದಿದ್ದ ತಂಡ, 2024ರಲ್ಲಿ ಮತ್ತೊಂದು ಟ್ರೋಫಿ ಗೆದ್ದು 17 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿತ್ತು. ಈಗ ಭಾರತದ ಮುಂದಿರುವುದು ಟ್ರೋಫಿ ಉಳಿಸಿಕೊಳ್ಳುವ ಗುರಿ. ಕಳೆದ ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈ ಬಾರಿ ತಂಡದಲ್ಲಿ ಇಲ್ಲ. ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡಿರುವ ಸೂರ್ಯಕುಮಾರ್ ಯಾದವ್ ತಂಡವನ್ನು ಸರಿಯಾದ ದಾರಿಯಲ್ಲೇ ಕೊಂಡೊಯ್ಯುತ್ತಿದ್ದಾರೆ. ಯುವ, ಪ್ರತಿಭಾವಂತ ಆಟಗಾರರನ್ನು ಒಳಗೊಂಡಿರುವ ಟೀಮ್, ತವರಿನಲ್ಲಿ ಮ್ಯಾಜಿಕ್ ಮಾಡಲಿದೆಯೇ ಎಂಬ ಕಾತರ ಎಲ್ಲರಲ್ಲಿದೆ. ಯಾವುದೇ ದೇಶವು ತಾನು ಆತಿಥ್ಯ ವಹಿಸಿದಾಗ ಟ್ರೋಫಿ ಗೆದ್ದಿಲ್ಲ. ಅಲ್ಲದೇ ಯಾವ ತಂಡವೂ 3 ಬಾರಿ ಕಪ್ ಗೆದ್ದಿಲ್ಲ. ಈ ಎರಡೂ ದಾಖಲೆಗಳನ್ನು ಬರೆಯಲು ಭಾರತಕ್ಕೆ ಅವಕಾಶವಿದೆ.
ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್, ತಿಲಕ್ ವರ್ಮಾ, ಶಿವಂ ದುಬೆ ತಂಡದ ಬ್ಯಾಟಿಂಗ್ ಶಕ್ತಿ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಅವರಂತಹ ಶ್ರೇಷ್ಠ ಆಲ್ರೌಂಡರ್‌ಗಳು 2024ರ ವಿಶ್ವಕಪ್‌ನಂತೆ ಈ ಬಾರಿಯೂ ತಂಡಕ್ಕೆ ಕಪ್ ಗೆಲ್ಲಿಸಿಕೊಡುವ ಕಾತರದಲ್ಲಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ ತಮ್ಮ ಬೌಲಿಂಗ್ ಕೈಚಳಕದ ಮೂಲಕ ಎದುರಾಳಿಗಳನ್ನು ಕಾಡಲು ಸಜ್ಜಾಗಿದ್ದಾರೆ. ತಂಡ ಸಂಪೂರ್ಣ ಸಿದ್ಧಗೊಂಡಿದ್ದರೂ ವಿಶ್ವಕಪ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದಷ್ಟೇ ಸದ್ಯದ ಕುತೂಹಲ.
ಶ್ರೇಷ್ಠ ಸಾಧನೆ: 2007, 2024ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಅಭಿಷೇಕ್, ಸೂರ್ಯ, ತಿಲಕ್, ಬೂಮ್ರಾ, ಹಾರ್ದಿಕ್
ಆಸ್ಟ್ರೇಲಿಯಾ:
ಈ ಬಾರಿ ಕೆಲ ತಾರಾ ಆಟಗಾರರು ಗಾಯಗೊಂಡಿದ್ದರೂ ಆಸ್ಟ್ರೇಲಿಯಾ ಐಸಿಸಿ ಟೂರ್ನಿಗಳಲ್ಲಿ ಯಾವತ್ತೂ ಕಿಂಗ್. ಹೀಗಾಗಿಯೇ ತಂಡ ಈ ಸಲ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಟಿ20ಗೆ ಹೇಳಿ ಮಾಡಿಸಿದಂತಹ ಆಟಗಾರರೇ ತಂಡದಲ್ಲಿದ್ದು, ಏಕಾಂಗಿಯಾಗಿಯೇ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಹಲವರಿದ್ದಾರೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.2
ಶ್ರೇಷ್ಠ ಸಾಧನೆ: 2021ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಮಾರ್ಷ್, ಹೆಡ್, ಸ್ಟೋಯ್ನಿಸ್, ಟಿಮ್ ಡೇವಿಡ್
ಇಂಗ್ಲೆಂಡ್:
ಇತ್ತೀಚಿನ ವರ್ಷಗಳಲ್ಲಿ ತಂಡದ ಆಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೆ ಐಸಿಸಿ ಟೂರ್ನಿಗಳಲ್ಲಿ ತಂಡದಿಂದ ಶ್ರೇಷ್ಠ ಆಟ ನಿರೀಕ್ಷಿಸಬಹುದು. 2 ಬಾರಿ ಟಿ20 ವಿಶ್ವ ಚಾಂಪಿಯನ್ ಎಂಬ ಪಟ್ಟವೂ ತಂಡಕ್ಕಿದೆ. ಹ್ಯಾರಿ ಬ್ರೂಕ್ ನಾಯಕತ್ವದ ತಂಡದಲ್ಲಿ ಬಟ್ಲರ್, ಫಿಲ್ ಸಾಲ್ಟ್, ವಿಲ್ ಜ್ಯಾಕ್ಸ್, ಬೆಥೆಲ್‌ರಂತಹ ಟಿ20 ತಜ್ಞ ಆಟಗಾರರಿದ್ದಾರೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.3
ಶ್ರೇಷ್ಠ ಸಾಧನೆ: 2010, 2022ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಬಟ್ಲರ್, ಸಾಲ್ಟ್, ಜ್ಯಾಕ್ಸ್, ಬೆಥೆಲ್, ಬ್ರೂಕ್
ನ್ಯೂಜಿಲೆಂಡ್
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಟೂರ್ನಿಗೂ ಮುನ್ನ ದೊಡ್ಡ ಸದ್ದು ಮಾಡಿದರೆ, ಸೈಲೆಂಟ್ ಆಗಿಯೇ ಟೂರ್ನಿ ಪ್ರವೇಶಿಸಿ ಅಮೋಘ ಆಟವಾಡುವುದು ನ್ಯೂಜಿಲೆಂಡ್ ಗುಣ. ಸ್ಫೋಟಕ ಬ್ಯಾಟರ್ಸ್, ಮಾರಕ ವೇಗಿಗಳು, ಮೋಡಿ ಮಾಡಬಲ್ಲ ಸ್ಪಿನ್ನರ್ಸ್ ತಂಡದಲ್ಲಿ ಹಲವರಿದ್ದಾರೆ. ಆದರೆ ಲಕ್ ಕೈಹಿಡಿಯಬೇಕಷ್ಟೇ. ತಂಡ ಚೊಚ್ಚಲ ವಿಶ್ವಕಪ್‌ನ ಕನವರಿಕೆಯಲ್ಲಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.4
ಶ್ರೇಷ್ಠ ಸಾಧನೆ: 2021ರಲ್ಲಿ ರನ್ನರ್-ಅಪ್
ತಾರಾ ಆಟಗಾರರು: ಆ್ಯಲೆನ್, ಡ್ಯಾರಿಲ್, ಫಿಲಿಪ್ಸ್, ಸ್ಯಾಂಟ್ನರ್
ದಕ್ಷಿಣ ಆಫ್ರಿಕಾ
ಚೋಕರ್ಸ್ ಖ್ಯಾತಿಯ ದ.ಆಫ್ರಿಕಾ ಕಳೆದ ಬಾರಿ ಭಾರತ ವಿರುದ್ಧ ಫೈನಲ್‌ನಲ್ಲಿ ಸೋತಿತ್ತು. ಗೆಲ್ಲುವ ಪಂದ್ಯದಲ್ಲಿ ಸೋತು ಕಪ್ ತಪ್ಪಿಸಿಕೊಳ್ಳುವ ಕೆಟ್ಟ ಗುಣ ತಂಡಕ್ಕಿದೆ. ಉಳಿದಂತೆ ಪರ್ಫೆಕ್ಟ್ ತಂಡ. ಮಾರ್ಕ್‌ರಮ್, ಮಿಲ್ಲರ್, ಡಿ ಕಾಕ್, ಸ್ಟಬ್ಸ್ ಸೇರಿದಂತೆ ಸ್ಫೋಟಕ ಬ್ಯಾಟರ್‌ಗಳೇ ತಂಡದಲ್ಲಿದ್ದಾರೆ. ಬೌಲಿಂಗ್ ವಿಭಾಗವೂ ಅತ್ಯುತ್ತಮವಾಗಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.5
ಶ್ರೇಷ್ಠ ಸಾಧನೆ: 2024ರಲ್ಲಿ ರನ್ನರ್-ಅಪ್
ತಾರಾ ಆಟಗಾರರು: ಏಡನ್, ಸ್ಟಬ್ಸ್, ಮಿಲ್ಲರ್, ಡಿ ಕಾಕ್, ರಬಾಡ
ಪಾಕಿಸ್ತಾನ
ತನ್ನ ಆಟಕ್ಕಿಂತ ಹೆಚ್ಚಾಗಿ ವಿವಾದದ ಮೂಲಕವೇ ಗುರುತಿಸಿಕೊಳ್ಳುತ್ತಿರುವ ಪಾಕಿಸ್ತಾನ, ಹೊರಗಿನ ಗದ್ದಲಗಳ ನಡುವೆ ವಿಶ್ವಕಪ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಕಾದು ನೋಡಬೇಕು. ಒಂದು ಕಾಲದಲ್ಲಿ ವಿಶ್ವಶ್ರೇಷ್ಠ ಟಿ20 ಆಟಗಾರರನ್ನು ಹೊಂದಿದ್ದ ಪಾಕ್ ಈಗ ತನ್ನ ಖ್ಯಾತಿ ಕಳೆದುಕೊಂಡಿದೆ. ತಂಡ ಈ ಬಾರಿ 2ನೇ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.6
ಶ್ರೇಷ್ಠ ಸಾಧನೆ: 2009ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಸಲ್ಮಾನ್, ಸೈಮ್, ಶಾಹೀನ್, ಶದಾಬ್.
ವೆಸ್ಟ್‌ಇಂಡೀಸ್
ಕೇವಲ 5 ವರ್ಷದ ಅಂತರದಲ್ಲೇ 2 ಬಾರಿ ಟಿ20 ವಿಶ್ವಕಪ್ ಗೆದ್ದಿದ್ದ ವಿಂಡೀಸ್, ಈಗ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ತಂಡ ಆಗೊಮ್ಮೆ ಈಗೊಮ್ಮೆ ಸ್ಫೋಟಕ ಆಟದ ಮೂಲಕ ಗುರುತಿಸಿಕೊಂಡರೂ ಈಗಲೂ ಟಿ20 ವಿಶ್ವಕಪ್ ಗೆಲ್ಲುವಷ್ಟು ಸಾಮರ್ಥ್ಯ ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆ ಇದೆ. ಹೆಟ್ಮೇಯರ್, ಶೆರ್ಫಾನ್ ಈ ಬಾರಿ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.7
ಶ್ರೇಷ್ಠ ಸಾಧನೆ: 2012, 2016ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಹೆಟ್ಮೇಯರ್, ಶೆರ್ಫಾನ್, ಹೋಪ್, ಪೊವೆಲ್
-ಶ್ರೀಲಂಕಾ
ವಿಂಡೀಸ್ ರೀತಿಯೇ ಒಂದೊಮ್ಮೆ ಕ್ರಿಕೆಟ್ ಜಗತ್ತನ್ನು ಆಳಿದ್ದ ಶ್ರೀಲಂಕಾ, ಈಗ ಮಂಕಾಗಿದೆ. ಕೆಲ ವರ್ಷಗಳಿಂದ ತಂಡ ದ್ವಿಪಕ್ಷೀಯ ಸರಣಿ, ಐಸಿಸಿ ಟೂರ್ನಿಗಳಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. 2014ರಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಕಳೆದ 5 ಆವೃತ್ತಿಗಳಲ್ಲಿ ತಂಡ ಒಮ್ಮೆಯೂ ನಾಕೌಟ್ ತಲುಪಿಲ್ಲ. ಆದರೂ ಈ ಬಾರಿ ತವರಿನ ಲಾಭವೆತ್ತಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.8
ಶ್ರೇಷ್ಠ ಸಾಧನೆ: 2014ರಲ್ಲಿ ಚಾಂಪಿಯನ್
ತಾರಾ ಆಟಗಾರರು: ಶಾನಕ, ನಿಸ್ಸಾಂಕ, ಕಮಿಂಡು, ಹಸರಂಗ
ಅಫ್ಘಾನಿಸ್ತಾನ
ಕಳೆದ ಕೆಲ ವರ್ಷಗಳಲ್ಲಿ ಆಫ್ಘನ್‌ನಷ್ಟು ಸುಧಾರಣೆ ಕಂಡ ಕ್ರಿಕೆಟ್ ಟೀಮ್ ಬೇರೊಂದು ಇರಲಿಕ್ಕಿಲ್ಲ. ಯಾವುದೇ ಬಲಿಷ್ಠ ತಂಡವನ್ನು ಸೋಲಿಸಬಲ್ಲ ಸಾಮರ್ಥ್ಯವಿರುವ ಆಫ್ಘನ್, ಕಳೆದ ಬಾರಿ ಸೆಮಿಫೈನಲ್‌ವರೆಗೂ ತಲುಪಿತ್ತು. ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳನ್ನು ಹೊಂದಿರುವ ತಂಡ ಈ ಬಾರಿಯೂ ಮ್ಯಾಜಿಕ್ ಮಾಡಲಿದೆಯೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.10
ಶ್ರೇಷ್ಠ ಸಾಧನೆ: 2024ರಲ್ಲಿ ರನ್ನರ್-ಅಪ್
ತಾರಾ ಆಟಗಾರರು: ರಶೀದ್, ಗುರ್ಬಾಜ್, ಮುಜೀಬ್, ಜದ್ರಾನ್.
ಐರ್ಲೆಂಡ್
ವಿಶ್ವದ ಬಲಿಷ್ಠ ತಂಡಗಳನ್ನು ಸೋಲಿಸಲು ಸಾಮರ್ಥ್ಯವಿರುವ ಮತ್ತೊಂದು ತಂಡ ಐರ್ಲೆಂಡ್. ಕಳೆದ ಬಾರಿ ತಂಡ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತಾದರೂ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಅನುಭವಿಗಳಾದ ಸ್ಟಿರ್ಲಿಂಗ್ ಜೊತೆ ಯುವ ತಾರೆಗಳಾದ ಜೋಶ್ ಲಿಟ್ಲ್, ಹ್ಯಾರಿ ಟೆಕ್ಟರ್, ಕ್ಯಾಂಫರ್ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.11
ಶ್ರೇಷ್ಠ ಸಾಧನೆ: 2009ರಲ್ಲಿ ಸೂಪರ್-8
ತಾರಾ ಆಟಗಾರರು: ಸ್ಟಿರ್ಲಿಂಗ್, ಜೋಶ್ ಲಿಟ್ಲ್, ಟೆಕ್ಟರ್, ಕ್ಯಾಂಫರ್.
ಜಿಂಬಾಬ್ವೆ
2024ರಲ್ಲಿ ಗಾಂಬಿಯಾ ವಿರುದ್ಧ 4 ವಿಕೆಟ್‌ಗೆ 344 ರನ್ ಕಲೆಹಾಕಿದ್ದ ಜಿಂಬಾಬ್ವೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ದಾಖಲೆ ಹೊಂದಿದೆ. ಆದರೆ ತಂಡ ಅಸ್ಥಿರ ಆಟಕ್ಕೆ ಹೆಸರುವಾಸಿ. ಸಿಕಂದರ್ ರಝಾರಂತಹ ಹಲವು ಅನುಭವಿ ಆಟಗಾರರಿದ್ದರೂ ತಂಡ ಗೆಲ್ಲುವ ಪಂದ್ಯಗಳಲ್ಲಿ ಎಡವಿ ಸೋತಿದ್ದೇ ಹೆಚ್ಚು. 7ನೇ ಬಾರಿ ಟಿ20 ವಿಶ್ವಕಪ್ ಆಡುತ್ತಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.12
ಶ್ರೇಷ್ಠ ಸಾಧನೆ: 2022ರಲ್ಲಿ ಸೂಪರ್-12
ತಾರಾ ಆಟಗಾರರು: ಸಿಕಂದರ್, ಟೇಲರ್, ಬರ್ಲ್, ಎವಾನ್ಸ್.
ನೆದರ್‌ಲೆಂಡ್ಸ್
2022ರ ಟಿ20 ವಿಶ್ವಕಪ್‌ನಲ್ಲಿ ಸೂಪರ್-12 ಹಂತ ಪ್ರವೇಶಿಸಿದ್ದ ಡಚ್ ಪಡೆಯಲ್ಲಿ ಈ ಬಾರಿ ಅನುಭವಿ ಕ್ರಿಕೆಟಿಗರೇ ಹೆಚ್ಚಿದ್ದಾರೆ. ಸ್ಕಾಟ್ ಎಡ್ವರ್ಟ್, ಮ್ಯಾಕ್ಸ್ ಒಡೌಟ್, ಮೀಕರನ್, ಆ್ಯಕರ್‌ಮನ್, ವ್ಯಾನ್ ಡೆರ್ ಮರ್ವೆಗೆ ಹಲವು ಐಸಿಸಿ ಟೂರ್ನಿ ಆಡಿದ ಅನುಭವವಿದೆ. ಬಸ್ ಡೆ ಲೀಡೆ, ಕೈಲ್ ಕ್ಲೈನ್ ಸೇರಿ ಯುವ ಆಟಗಾರರ ಮೇಲೆ ತಂಡಕ್ಕೆ ಹೆಚ್ಚಿನ ಭರವಸೆಯಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.13
ಶ್ರೇಷ್ಠ ಸಾಧನೆ: 2014ರಲ್ಲಿ ಸೂಪರ್-10
ತಾರಾ ಆಟಗಾರರು: ಎಡ್ವರ್ಡ್ಸ್, ಒಡೌಡ್, ಲೀಡೆ, ಡೆರ್ ಮರ್ವೆ.
ಸ್ಕಾಟ್ಲೆಂಡ್
ಬಾಂಗ್ಲಾದೇಶ ಹೊರಬಿದ್ದ ಕಾರಣ ರ್‍ಯಾಂಕಿಂಗ್ ಆಧಾರದಲ್ಲಿ ಕೊನೆ ಕ್ಷಣದಲ್ಲಿ ಟೂರ್ನಿ ಆಡಲು ಅರ್ಹತೆ ಪಡೆದಿರುವ ಸ್ಕಾಟ್ಲೆಂಡ್, ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಬೆರಿಂಗ್ಟನ್, ಮ್ಯಾಥ್ಯೂ ಕ್ರಾವ್ಸ್, ಮೆಕ್‌ಮುಲನ್ ಸೇರಿ ಹಲವು ಆಟಗಾರರಿಗೆ ಈ ಹಿಂದೆ ಕೆಲ ವಿಶ್ವಕಪ್‌ಗಳಲ್ಲಿ ಆಡಿದ ಅನುಭವವಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.14
ಶ್ರೇಷ್ಠ ಸಾಧನೆ: 2014ರಲ್ಲಿ ಸೂಪರ್-10
ತಾರಾ ಆಟಗಾರರು: ಬೆರಿಂಗ್ಟನ್, ಮುನ್ಸೆ, ಗ್ರೀವ್ಸ್, ಮೆಕ್‌ಮುಲನ್
ನಮೀಬಿಯಾ
ಆಫ್ರಿಕಾ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ವಿಶ್ವಕಪ್ ತಲುಪಿರುವ ನಮೀಬಿಯಾಗೆ ಈ ಬಾರಿ ಡೇವಿಡ್ ವೀಸಾ ಅನುಪಸ್ಥಿತಿ ಕಾಡಬಹುದು. ಆದರೂ ತಂಡದಲ್ಲಿ ಕೆಲ ಘಟಾನುಘಟಿ ಆಟಗಾರರಿದ್ದಾರೆ. ಪಾಕ್ ತಂಡ ಭಾರತ ವಿರುದ್ಧ ಪಂದ್ಯ ಆಡಲ್ಲ ಎನ್ನುತ್ತಿದೆ. ಹೀಗಾಗಿ ಇದೇ ಗುಂಪಿನಲ್ಲಿರುವ ನಮೀಬಿಯಾ 2-3 ಪಂದ್ಯ ಗೆದ್ದು ಸೂಪರ್-8 ಪ್ರವೇಶಿಸುವ ವಿಶ್ವಾಸದಲ್ಲಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.15
ಶ್ರೇಷ್ಠ ಸಾಧನೆ: 2021ರಲ್ಲಿ ಸೂಪರ್-12
ತಾರಾ ಆಟಗಾರರು: ಎರಾಸ್ಮಸ್, ಟ್ರಂಪಲ್‌ಮನ್, ಜೆ.ಜೆ.ಸ್ಮಿತ್, ಫ್ರೈಲಿಂಕ್
ನೇಪಾಳ
ಟಿ20ಯಲ್ಲಿ ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ನೇಪಾಳ, ಈ ಬಾರಿ ಅರ್ಹತಾ ಸುತ್ತಿನಲ್ಲಿ ಅಜೇಯವಾಗಿತ್ತು. ನಾಯಕ ರೋಹಿತ್, ಸಂದೀಪ್ ಲಮಿಚ್ಚಾನೆ, ದೀಪೇಂದ್ರ ಸೇರಿದಂತೆ ಹಲವು ಖ್ಯಾತ ಆಟಗಾರರು ತಂಡದ ಬಲ. ‘ಸಿ’ ಗುಂಪಿನಲ್ಲಿರುವ ತಂಡಕ್ಕೆ ಇಂಗ್ಲೆಂಡ್, ವಿಂಡೀಸ್ ಮಾತ್ರ ಪ್ರಮುಖ ಎದುರಾಳಿಯಾಗಿದ್ದು, ಗೆದ್ದು ಸೂಪರ್-8ಗೇರುವ ಕಾತರದಲ್ಲಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.16
ಶ್ರೇಷ್ಠ ಸಾಧನೆ: 2014, 2024ರಲ್ಲಿ ಮೊದಲ ಸುತ್ತು
ತಾರಾ ಆಟಗಾರರು: ರೋಹಿತ್, ಲಮಿಚ್ಚಾನೆ, ದೀಪೇಂದ್ರ, ಆರೀಫ್.
ಯುಎಇ
ಕಳೆದ ವರ್ಷ 23ರ ಪೈಕಿ 11 ಟಿ20 ಪಂದ್ಯಗಳಲ್ಲಿ ಗೆದ್ದಿದ್ದ ಯುಎಇ, ಟಿ20 ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ತಂಡ. ಇದರಲ್ಲಿರುವ ಕೆಲ ಆಟಗಾರರು ಹಲವು ದಾಖಲೆಗಳನ್ನು ಹೊಂದಿದ್ದಾರೆ. 93 ಪಂದ್ಯದಲ್ಲಿ 3236 ರನ್ ಗಳಿಸಿರುವ ನಾಯಕ ಮುಹಮ್ಮದ್ ವಸೀಂ ತಂಡದ ಪ್ರಮುಖ ಆಟಗಾರ. ಸ್ಫೋಟಕ ಬ್ಯಾಟರ್‌ಗಳು, ವೇಗಿಗಳು ತಂಡದಲ್ಲಿ ಹೆಚ್ಚಿದ್ದಾರೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.17
ಶ್ರೇಷ್ಠ ಸಾಧನೆ: 2014, 2022ರಲ್ಲಿ ಮೊದಲ ಸುತ್ತು
ತಾರಾ ಆಟಗಾರರು: ವಸೀಂ, ಜುನೈದ್, ಆರ್ಯನ್ಸ್.
ಯುಎಸ್‌ಎ
ಕಳೆದ ಬಾರಿ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸೂಪರ್-8 ಪ್ರವೇಶಿಸಿದ್ದ ಅಮೆರಿಕ ತಂಡ, ಅಗ್ರ-7 ಸ್ಥಾನ ಪಡೆದಿದ್ದರಿಂದ ಈ ಬಾರಿ ವಿಶ್ವಕಪ್‌ಗೆ ನೇರ ಅರ್ಹತೆ ಪಡೆದಿದೆ. ಭಾರತೀಯ ಮೂಲದ ಹಲವು ಆಟಗಾರರು ಈ ಬಾರಿ ತಮ್ಮ ತವರಿನಲ್ಲಿ ಆಡಲು ಕಾಯುತ್ತಿದ್ದು, ಉತ್ತಮ ಪ್ರದರ್ಶನದ ಮೂಲಕ ತಂಡವನ್ನು ನಾಕೌಟ್‌ಗೇರಿಸುವ ಗುರಿ ಇಟ್ಟುಕೊಂಡಿದ್ದಾರೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.18
ಶ್ರೇಷ್ಠ ಸಾಧನೆ: 2024ರಲ್ಲಿ ಸೂಪರ್-8
ತಾರಾ ಆಟಗಾರರು: ಮೋನಂಕ್, ಅಲಿ ಖಾನ್, ನೇತ್ರವಾಲ್ಕರ್, ಗೌಸ್
ಕೆನಡಾ
ಅಮೆರಿಕ ಖಂಡದ ಅರ್ಹತಾ ಟೂರ್ನಿಯಲ್ಲಿ ಅಜೇಯವಾಗಿದ್ದ ಕೆನಡಾಗೆ ಇದು 2ನೇ ಟಿ20 ವಿಶ್ವಕಪ್. ಕಳೆದ ಬಾರಿ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ತಂಡದಲ್ಲಿ 30+ ವಯಸ್ಸಿನ 8 ಆಟಗಾರರಿದ್ದಾರೆ. ತಮ್ಮ ಅನುಭವ ಬಳಸಿ ತಂಡವನ್ನು ಗುಂಪು ಹಂತ ದಾಟಿಸುವುದು ಪ್ರಮುಖ ಗುರಿ. ಆದರೆ ಗುಂಪಿನಲ್ಲಿ ದ.ಆಫ್ರಿಕಾ, ಕಿವೀಸ್, ಆಫ್ಘನ್ ಸವಾಲು ಎದುರಿಸಬೇಕಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.19
ಶ್ರೇಷ್ಠ ಸಾಧನೆ: 2024ರಲ್ಲಿ ಮೊದಲ ಸುತ್ತು
ತಾರಾ ಆಟಗಾರರು: ದಿಲ್‌ಪ್ರೀತ್, ನವ್‌ನೀತ್, ರವೀಂದ್‌ಪಾಲ್.
ಒಮಾನ್
2015ರ ಬಳಿಕ ಟಿ20 ಆಡುತ್ತಿರುವ ಒಮಾನ್, ಈವರೆಗೂ 110 ಪಂದ್ಯಗಳಲ್ಲಿ 52ರಲ್ಲಿ ಗೆದ್ದಿದೆ. ಈ ಹಿಂದೆ 3 ಬಾರಿ ಟಿ20 ವಿಶ್ವಕಪ್ ಆಡಿದ್ದರೂ ಒಮ್ಮೆಯೂ ಗುಂಪು ಹಂತ ದಾಟಿ ಮುಂದೆ ಬಂದಿಲ್ಲ. ಅನುಭವಿ ಆಟಗಾರ ಜತೀಂದರ್ ನಾಯಕತ್ವದಲ್ಲಿ ಆಡಲಿರುವ ತಂಡದಲ್ಲಿ ಈ ಬಾರಿ ಹಿರಿಯ ಆಟಗಾರರೇ ಹೆಚ್ಚಿದ್ದಾರೆ. ಬರೋಬ್ಬರಿ 11 ಮಂದಿಯ ವಯಸ್ಸು 30+. ಇಬ್ಬರ ವಯಸ್ಸು 43 ದಾಟಿದೆ.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.20
ಶ್ರೇಷ್ಠ ಸಾಧನೆ: 2016, 2021, 2024ರಲ್ಲಿ ಮೊದಲ ಸುತ್ತು
ತಾರಾ ಆಟಗಾರರು: ಜತೀಂದರ್, ಸುಫ್ಯಾನ್, ಶಕೀಲ್.
ಇಟಲಿ
ಚೊಚ್ಚಲ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಇಟಲಿ ಮೊದಲ ಪ್ರಯತ್ನದಲ್ಲೇ ಮೋಡಿ ಮಾಡಲು ಕಾಯುತ್ತಿದೆ. ಯುರೋಪ್ ಅರ್ಹತಾ ಟೂರ್ನಿಯಲ್ಲಿ ಸ್ಕಾಟ್ಲೆಂಡ್‌ನ ಮಣಿಸಿದ್ದ ತಂಡ, ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. ದ.ಆಫ್ರಿಕಾ ಪರ ಆಡಿದ್ದ ಜೆಜೆ ಸ್ಮಟ್ಸ್, ಇಂಗ್ಲೆಂಡ್ ಕೌಂಟಿ ಸೇರಿ ಹಲವು ಟೂರ್ನಿಗಳಲ್ಲಿ ಆಡಿಸುವ ಮ್ಯಾಡ್ಸನ್ ಪ್ರಮುಖ ಆಟಗಾರರು.
ಐಸಿಸಿ ರ್‍ಯಾಂಕಿಂಗ್: ವಿಶ್ವ ನಂ.27
ಶ್ರೇಷ್ಠ ಸಾಧನೆ: ಮೊದಲ ಬಾರಿ ಕಣಕ್ಕೆ
ತಾರಾ ಆಟಗಾರರು: ಮ್ಯಾಡ್ಸನ್, ಅಂಥೋನಿ, ಸ್ಮಟ್ಸ್, ಸ್ಟೆವಾರ್ಟ್