ಬ್ರಿಡ್ಜ್‌ಟೌನ್: ಟಿ20 ವಿಶ್ವಕಪ್ ವಿಜೇತ ಭಾರತ ತಂಡ ಬುಧವಾರ ತವರಿಗೆ ಆಗಮಿಸಲಿದೆ. ಆಟಗಾರರು, ಅವರ ಕುಟುಂಬಸ್ಥರು, ಕೋಚ್, ಸಹಾಯಕ ಸಿಬ್ಬಂದಿ ಸೇರಿ ಒಟ್ಟು 70ಕ್ಕೂ ಹೆಚ್ಚು ಮಂದಿ ಮಂಗಳವಾರ ರಾತ್ರಿ ವಿಶೇಷ ವಿಮಾನದಲ್ಲಿ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಿಂದ ಹೊರಟು, ಸತತ 16 ಗಂಟೆಗಳ ಪ್ರಯಾಣಿಸಿ ಬುಧವಾರ ಸಂಜೆ 7.45ಕ್ಕೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಭಾರತ ತಂಡ ನ್ಯೂಯಾರ್ಕ್‌ಗೆ ತೆರಳಿ, ಅಲ್ಲಿಂದ ಎಮಿರೇಟ್ಸ್ ವಿಮಾನದಲ್ಲಿ ದುಬೈ ಮೂಲಕ ದೆಹಲಿಗೆ ಆಗಮಿಸಬೇಕಿತ್ತು. ಆದರೆ, ಬೆರಿಲ್ ಚಂಡಮಾರುತದ ಕಾರಣ ಏರ್‌ಪೋರ್ಟ್ ಬಂದ್ ಆಗಿದ್ದರಿಂದ ತಂಡ 2 ದಿನಗಳ ಕಾಲ ಬ್ರಿಡ್ಜ್‌ಟೌನ್‌ನಲ್ಲೇ ಉಳಿಯಬೇಕಾಯಿತು.ದೆಹಲಿಯಲ್ಲಿ ಮೋದಿ ಭೇಟಿರಾಷ್ಟ್ರ ರಾಜಧಾನಿಗೆ ಬುಧವಾರ ಸಂಜೆ ಆಗಮಿಸಲಿರುವ ತಂಡ ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ತಮ್ಮ ನಿವಾಸದಲ್ಲಿ ಪ್ರಧಾನಿ, ಇಡೀ ತಂಡಕ್ಕೆ ಔತಣಕೂಟ ಏರ್ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕಾರ್ಯಕ್ರಮದ ದಿನಾಂಕ ಹಾಗೂ ಸಮಯ ಇನ್ನೂ ನಿಗದಿಯಾಗಿಲ್ಲ. ಕಾರ್ಯಕ್ರಮದಲ್ಲಿ ಭಾರತ ತಂಡಕ್ಕೆ ಮೋದಿ ಸನ್ಮಾನಿಸಲಿದ್ದಾರೆ ಎನ್ನಲಾಗಿದೆ.
ಮುಂಬೈನಲ್ಲಿ ಬೃಹತ್ ಮೆರವಣಿಗೆ?ಪ್ರಧಾನಿ ಭೇಟಿ ಬಳಿಕ ಆಟಗಾರರು, ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿ ಮುಂಬೈಗೆ ತೆರಳಲಿದ್ದು, ಅಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಬಳಿಕ ವಾಂಖೇಡೆ ಕ್ರೀಡಾಂಗಣದ ಆವರಣದಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಈ ವೇಳೆ ತಂಡಕ್ಕೆ 125 ಕೋಟಿ ರು. ಬಹುಮಾನ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ.ರೋಹಿತ್, ವಿರಾಟ್‌ಗೆ
ಸುದೀರ್ಘ ವಿಶ್ರಾಂತಿ ಅಂ.ರಾ.ಟಿ20ಯಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಕನಿಷ್ಠ 1 ತಿಂಗಳ ಕಾಲ ವಿಶ್ರಾಂತಿ ಸಿಗಲಿದೆ. ತಿಂಗಳಾಂತ್ಯದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಮೊದಲು 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಬಳಿಕ ಆ.2ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಆ ಸರಣಿಯಲ್ಲಿ ರೋಹಿತ್, ಕೊಹ್ಲಿ ಆಡುವ ನಿರೀಕ್ಷೆ ಇದೆ. ಒಂದು ವೇಳೆ ಲಂಕಾ ಏಕದಿನ ಸರಣಿಯಿಂದಲೂ ಈ ಇಬ್ಬರು ವಿಶ್ರಾಂತಿ ಬಯಸಿದರೆ, ಆಗ ಸೆ.19ರಿಂದ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಆರಂಭಗೊಳ್ಳಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ತಂಡಕ್ಕೆ ವಾಪಸಾಗಲಿದ್ದಾರೆ.