ಟಿ20 ವಿಶ್ವಕಪ್‌: ಆಫ್ಘನ್‌ ಚಾಲೆಂಜ್‌ಗೆ ಟೀಂ ಇಂಡಿಯಾ ರೆಡಿ

KannadaprabhaNewsNetwork |  
Published : Jun 20, 2024, 01:03 AM ISTUpdated : Jun 20, 2024, 03:55 AM IST
ಸೂಪರ್‌-8 ಹಂತದಲ್ಲಿ ಶುಭಾರಂಭ ಮಾಡಲು ಟೀಂ ಇಂಡಿಯಾ ಕಾತರ.  | Kannada Prabha

ಸಾರಾಂಶ

ಇಂದು ಟೀಂ ಇಂಡಿಯಾಗೆ ಎದುರಾಗಲಿದೆ ಅಫ್ಘಾನಿಸ್ತಾನ ಸವಾಲು. ಈ ವರ್ಷ ಜನವರಿಯಲ್ಲಿ ಅತಿರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾಗಿದ್ದ ಎರಡೂ ತಂಡಗಳು. ಅಭಿಮಾನಿಗಳಿಗೆ ಮತ್ತೊಂದು ರೋಚಕ ಅನುಭವ ಕಟ್ಟಿಕೊಡುತ್ವಾ ಭಾರತ, ಅಫ್ಘಾನಿಸ್ತಾನ?

ಬ್ರಿಡ್ಜ್‌ಟೌನ್‌ (ಬಾರ್ಬಡೊಸ್‌): ಗುಂಪು ಹಂತದಲ್ಲಿ ಅಧಿಕಾರಯುತ ಗೆಲುವುಗಳನ್ನು ಸಾಧಿಸಲು ಯಶಸ್ವಿಯಾಗದ ಭಾರತ, ಸೂಪರ್‌-8 ಹಂತದ ಗುಂಪು 1ರ ಮೊದಲ ಪಂದ್ಯದಲ್ಲಿ ಗುರುವಾರ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ.ಭಾರತಕ್ಕೆ ಮೊದಲೆರಡು ಪಂದ್ಯಗಳಲ್ಲಿ ಆಫ್ಘನ್‌ ಹಾಗೂ ಬಾಂಗ್ಲಾದೇಶ ಎದುರಾಗಲಿದ್ದು, 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೊದಲೇ ಸೆಮಿಫೈನಲ್‌ಗೆ ಪ್ರವೇಶ ಖಚಿತಪಡಿಸಿಕೊಳ್ಳುವುದು ತಂಡದ ಗುರಿಯಾಗಲಿದೆ.

ಈ ಪಂದ್ಯದಲ್ಲಿ ರನ್ ಮಷಿನ್‌ ವಿರಾಟ್‌ ಕೊಹ್ಲಿ ಲಯಕ್ಕೆ ಮರಳಲು ಕಾಯುತ್ತಿದ್ದರೆ, ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.ಭಾರತ ತಂಡದ ಸಂಯೋಜನೆ ಬಗ್ಗೆ ಭಾರಿ ಕುತೂಹಲವಿದ್ದು, ನಾಯಕ ರೋಹಿತ್‌ ಹಾಗೂ ಕೋಚ್‌ ದ್ರಾವಿಡ್‌ ತಂಡದಲ್ಲಿ ಬದಲಾವಣೆ ಮಾಡುತ್ತಾರೆಯೇ ಅಥವಾ ಗುಂಪು ಹಂತದಲ್ಲಿ ಆಡಿದ ತಂಡವನ್ನೇ ಮುಂದುವರಿಸುತ್ತಾರೆಯೇ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ಟೂರ್ನಿ ಆರಂಭಕ್ಕೂ ಮುನ್ನ ರೋಹಿತ್‌, ಆಡುವ ಹನ್ನೊಂದರ ಬಳಗದಲ್ಲಿ ಎಲ್ಲಾ ನಾಲ್ಕು ಆಲ್ರೌಂಡರ್‌ಗಳನ್ನು ಆಡಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಅದರಂತೆಯೇ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌ ಹಾಗೂ ಶಿವಂ ದುಬೆಯನ್ನು ಆಡಿಸಲಾಗುತ್ತಿದ್ದು, ಈ ಪಂದ್ಯದಲ್ಲೂ ಇವರನ್ನೇ ಮುಂದುವರಿಸಿದರೆ ಅಚ್ಚರಿಯಿಲ್ಲ.ತಂಡದ ಈ ಯೋಜನೆ ನ್ಯೂಯಾರ್ಕ್‌ನ ಬೌಲರ್‌ ಸ್ನೇಹಿ ಪಿಚ್‌ಗಳಲ್ಲಿ ಕೈಹಿಡಿದಿತ್ತು. ಆದರೆ, ಇದೇ ಯೋಜನೆಯನ್ನು ವಿಂಡೀಸ್‌ನಲ್ಲೂ ಮುಂದುವರಿಸಲಾಗುತ್ತದೆಯೇ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಕುಲ್ದೀಪ್‌ಗಾಗಿ ಜಾಗ ಬಿಡುವವರು ಯಾರು?: ತಂಡದ ಎರಡು ಅಭ್ಯಾಸ ಅವಧಿಗಳನ್ನು ಗಮನಿಸಿದಾಗ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಬಹುದು ಎಂದು ಭಾರತ ನಿರೀಕ್ಷಿಸಿದಂತೆ ಕಾಣುತ್ತಿದೆ. ಹೀಗಾಗಿ ಕುಲ್ದೀಪ್‌ಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿಹಾಕಲು ಆಗಲ್ಲ. ಒಂದು ವೇಳೆ ಕುಲ್ದೀಪ್‌ರನ್ನು ಆಡಿಸಲು ನಿರ್ಧರಿಸಿದರೆ, ಆಗ ವೇಗಿ ಮೊಹಮದ್‌ ಸಿರಾಜ್‌ ಹೊರಗೆ ಕೂರಬೇಕಾಗಬಹುದು. ದುಬೆ ಬದಲಿಗೆ ಸಂಜು ಸ್ಯಾಮ್ಸನ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ.

ಮತ್ತೊಂದೆಡೆ ಅಫ್ಘಾನಿಸ್ತಾನ ತನ್ನ ಬೌಲಿಂಗ್‌ ಪಡೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಫಜಲ್‌ಹಕ್‌ ಫಾರೂಕಿ 12 ವಿಕೆಟ್‌ಗಳೊಂದಿಗೆ ಟೂರ್ನಿಯ ಗರಿಷ್ಠ ವಿಕೆಟ್‌ ಸರದಾರ ಎನಿಸಿದ್ದು, ನಾಯಕ ರಶೀದ್‌ ಖಾನ್‌, ವೇಗಿ ನವೀನ್‌ ಉಲ್‌-ಹಕ್‌, ಎಡಗೈ ಸ್ಪಿನ್ನರ್‌ ನೂರ್‌ ಅಹ್ಮದ್‌, ಅನುಭವಿಗಳಾದ ಗುಲ್ಬದಿನ್‌ ನೈಬ್‌, ಮೊಹಮದ್‌ ನಬಿ ಬಲವೂ ತಂಡಕ್ಕಿದೆ. ಇನ್ನು ರಹಮಾನುಲ್ಲಾ ಗುರ್ಬಾಜ್‌ ಹಾಗೂ ಇಬ್ರಾಹಿಂ ಜದ್ರಾನ್‌ ಉತ್ತಮ ಲಯದಲ್ಲಿದ್ದು, ಇವರಿಬ್ಬರನ್ನು ಭಾರತ ಎಷ್ಟು ಬೇಗ ಔಟ್‌ ಮಾಡುತ್ತದೆಯೋ ಗೆಲುವು ಅಷ್ಟು ಸುಲಭವಾಗಬಹುದು.

ಒಟ್ಟು ಮುಖಾಮುಖಿ: 08

ಭಾರತ: 07ಆಫ್ಘನ್‌: 00

ಫಲಿತಾಂಶವಿಲ್ಲ: 01ಸಂಭವನೀಯ ಆಟಗಾರರ ಪಟ್ಟಿಭಾರತ: ರೋಹಿತ್‌ (ನಾಯಕ), ಕೊಹ್ಲಿ, ಪಂತ್‌, ಸೂರ್ಯಕುಮಾರ್‌, ದುಬೆ/ಸಂಜು, ಹಾರ್ದಿಕ್‌, ಅಕ್ಷರ್‌, ಜಡೇಜಾ, ಕುಲ್ದೀಪ್‌/ಸಿರಾಜ್‌, ಬೂಮ್ರಾ, ಅರ್ಶ್‌ದೀಪ್‌.

ಆಫ್ಘನ್‌: ರಹಮಾನುಲ್ಲಾ, ಇಬ್ರಾಹಿಂ, ಗುಲ್ಬದಿನ್‌, ಅಜ್ಮತುಲ್ಲಾ, ನಜೀಬುಲ್ಲಾ, ನಬಿ, ಕರೀಂ, ರಶೀದ್‌(ನಾಯಕ), ನೂರ್‌ ಅಹ್ಮದ್‌, ನವೀನ್‌, ಫಾರೂಕಿ.ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌ಪಿಚ್‌ ರಿಪೋರ್ಟ್‌ಕೆನ್ಸಿಂಗ್ಟನ್‌ ಓವಲ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದು, ಬೃಹತ್‌ ಮೊತ್ತ ದಾಖಲಾಗುವ ಸಾಧ್ಯತೆ ಕಡಿಮೆ. ಎರಡೂ ತಂಡಗಳಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳಿದ್ದು, ಅವರ ಪ್ರದರ್ಶನ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಮದುವೆಯಾಗಿ 11 ತಿಂಗಳ ಬಳಿಕ ನೀರಜ್‌ರ ಆರತಕ್ಷತೆ : ಪ್ರಧಾನಿ ಮೋದಿ ಶುಭಹಾರೈಕೆ
ಕ್ಯಾಚ್‌ ಬಿಟ್ಟರೂ ಮ್ಯಾಚ್‌ ಬಿಡದ ಭಾರತ!