ತೆಲಂಗಾಣ: ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯ ಮೊಹಮದ್ ಸಿರಾಜ್‌ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜಮೀನು ಮತ್ತು ಸರ್ಕಾರಿ ಹುದ್ದೆ ನೀಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತವರು ತೆಲಂಗಾಣಕ್ಕೆ ಆಗಮಿಸಿದ್ದ ಸಿರಾಜ್‌ರನ್ನು ಮಂಗಳವಾರ ಮುಖ್ಯಮಂತ್ರಿ ರೇವಂತ್ ಅವರು ತಮ್ಮ ನಿವಾಸದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೆ ಸಿರಾಜ್‌ಗೆ ಹೈದರಾಬಾದ್‌ನಲ್ಲಿ ಜಾಗ ಹಾಗೂ ಸರ್ಕಾರಿ ಹುದ್ದೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಿರಾಜ್, ಭಾರತದ ಜೆರ್ಸಿಯನ್ನು ಮುಖ್ಯಮಂತ್ರಿಗೆ ಉಡುಗೊರೆಯಾಗಿ ನೀಡಿದರು. ಭಾರತದ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಈ ಸಂದರ್ಭ ಉಪಸ್ಥಿತರಿದ್ದರು.ವಿವರಿಸಲು ಪದ ಸಿಗುತ್ತಿಲ್ಲ: ದ್ರಾವಿಡ್ ಬಗ್ಗೆ ರೋಹಿತ್ ಭಾವನಾತ್ಮಕ ಪೋಸ್ಟ್
ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ನಾವು ಒಟ್ಟಿಗೇ ವಿಶ್ವಕಪ್ ಗೆದ್ದಿದ್ದು ನನ್ನ ಅದೃಷ್ಟ ಎಂದು ಬಣ್ಣಿಸಿದ್ದಾರೆ. ‘ಪ್ರೀತಿಯ ದ್ರಾವಿಡ್, ನನ್ನ ಭಾವನೆ ಹಂಚಿಕೊಳ್ಳಲು ಸರಿಯಾದ ಪದಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ನಾನು ಎಲ್ಲರಂತೆ ನಿಮ್ಮ ಕ್ರಿಕೆಟ್ ನೋಡುತ್ತಲೇ ಬೆಳೆದಿದ್ದೇನೆ. ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನೀವು ಅಪಾರ ಸಾಧನೆ ಮಾಡಿದ್ದೀರಿ. ಆದರೆ ಅದೆಲ್ಲವನ್ನೂ ಪಕ್ಕಕ್ಕಿಟ್ಟು ನಮ್ಮೊಂದಿಗೆ ಕೋಚ್ ಆಗಿ ಕೆಲಸ ಮಾಡಲು ಬಂದಿದ್ದೀರಿ. ಅದು ನಮಗೆ ಸಿಕ್ಕ ದೊಡ್ಡ ಕೊಡುಗೆ’ ಎಂದಿದ್ದಾರೆ.ಅಲ್ಲದೆ, ‘ನೀವು ನನ್ನ ಕೆಲಸದ ವೈಫ್ ಎಂದು ನನ್ನ ಹೆಂಡತಿ ಕಾಲೆಳೆಯುತ್ತಾಳೆ. ಹಾಗೆ ಕರೆಸಿಕೊಳ್ಳುವುದಲ್ಲಿ ನನಗೆ ಸಂತೋಷವಿದೆ. ನಾವು ಒಟ್ಟಿಗೆ ವಿಶ್ವಕಪ್ ಗೆದ್ದಿದ್ದು ನನ್ನ ಅದೃಷ್ಟ. ನೀವು ನನ್ನ ಕೋಚ್, ಸ್ನೇಹಿತ ಮತ್ತು ಗುರು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ’ ಎಂದು ರೋಹಿತ್ ತಿಳಿಸಿದ್ದಾರೆ.