ನವದೆಹಲಿ: ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಹಾಕಿಗೆ ನಿವೃತ್ತಿ ಘೋಷಿಸಿದ್ದ ಭಾರತದ ದಿಗ್ಗಜ ಗೋಲ್‌ಕೀಪರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಭಾರತ ಕಿರಿಯರ ಹಾಕಿ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ಶ್ರೀಜೇಶ್‌ಗೆ ಶುಭಹಾರೈಸಿದ್ದಾರೆ. ‘ನೀವು ಹಾಕಿಗೆ ನಿವೃತ್ತಿ ಘೋಷಿಸಿದ್ದೀರಿ. ಆದರೆ ಭಾರತೀಯ ಹಾಕಿಗೆ ನಿಮ್ಮ ಸ್ಮರಣೀಯ ಕೊಡುಗೆಗಳಿಗಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಆ.16ರಂದು ಬರೆದಿರುವ ಪತ್ರದಲ್ಲಿ ಮೋದಿ ತಿಳಿಸಿದ್ದಾರೆ. ಇದನ್ನು ಬುಧವಾರ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಶ್ರೀಜೇಶ್, ‘ಪ್ರಧಾನಿ ಮೋದಿ ಪತ್ರ ನೋಡಿ ಖುಷಿಯಾಯಿತು. ಹಾಕಿ ನನ್ನ ಬದುಕು. ಹಾಕಿಯಲ್ಲಿ ಭಾರತ ಮತ್ತಷ್ಟು ಉನ್ನತಿಗೇರಲು ನಾನು ಕೊಡುಗೆ ನೀಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಬಾಂಗ್ಲಾ ಸರಣಿ: ಭಾರತದ ಆಟಗಾರರು ನಾಳೆ ಚೆನ್ನೈಗೆ
ಚೆನ್ನೈ: ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗಾಗಿ ಭಾರತ ತಂಡದ ಆಟಗಾರರು ಗುರುವಾರ ಚೆನ್ನೈಗೆ ಆಗಮಿಸಲಿದ್ದಾರೆ. ಸುದೀರ್ಘ ವಿಶ್ರಾಂತಿ ಪಡೆದಿರುವ ಹಲವು ಆಟಗಾರರು ಸೆ.13ರಿಂದ ನಗರದ ಚೆಪಾಕ್ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆಟಗಾರರು 6 ದಿನಗಳ ಕಾಲ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್ ಸೇರಿ ಕೆಲ ಆಟಗಾರರು ಟಿ20 ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿದ್ದಾರೆ. ಶುಭ್‌ಮನ್ ಗಿಲ್, ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಸೇರಿ ಇನ್ನೂ ಕೆಲ ಆಟಗಾರರು ದುಲೀಪ್ ಟ್ರೋಫಿಯ ಮೊದಲ ಹಂತದ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಎಲ್ಲಾ ಆಟಗಾರರು ಚೆನ್ನೈಗೆ ಆಗಮಿಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಾಂಗ್ಲಾದೇಶ ಆಟಗಾರರು ಭಾನುವಾರ ಚೆನ್ನೈಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.ಸದ್ಯ ಮೊದಲ ಟೆಸ್ಟ್‌ಗೆ ಮಾತ್ರ ಭಾರತ ತಂಡ ಪ್ರಕಟಿಸಲಾಗಿದೆ. 2ನೇ ಪಂದ್ಯ ಕಾನ್ಪುರದಲ್ಲಿ ಸೆ.27ರಿಂದ ಅ.1ರ ವರೆಗೆ ನಡೆಯಲಿದೆ. ಆ ಪಂದ್ಯಕ್ಕೆ ಇನ್ನಷ್ಟೇ ತಂಡ ಪ್ರಕಟಗೊಳ್ಳಬೇಕಿದೆ.