ಪ್ರೊ ಕಬಡ್ಡಿ ಅನೇಕರ ಜೀವನ ಬದಲಿಸಿದೆ: ದಿಗ್ಗಜ ಆಟಗಾರರು!

KannadaprabhaNewsNetwork |  
Published : Jan 16, 2024, 01:46 AM IST
1000ನೇ ಪ್ರೊ ಕಬಡ್ಡಿ ಪಂದ್ಯದ ಅಂಗವಾಗಿ ಲೀಗ್‌ನ ದಿಗ್ಗಜ ಆಟಗಾರರಾದ ಅನೂಪ್‌ ಕುಮಾರ್‌, ಮಂಜೀತ್‌ ಚಿಲ್ಲರ್‌, ಅಜಯ್‌ ಠಾಕೂರ್‌, ಧರ್ಮರಾಜ್‌ ಚೆರಲಾತನ್‌ ಹಾಗೂ ರಿಶಾಂಕ್‌ ದೇವಾಡಿಗಗೆ ಆಯೋಜಕರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು.  | Kannada Prabha

ಸಾರಾಂಶ

ಪ್ರೊ ಕಬಡ್ಡಿ 1000ನೇ ಪಂದ್ಯದ ಮೈಲಿಗಲ್ಲು ತಲುಪಿದ ಅಂಗವಾಗಿ ದಿಗ್ಗಜ ಕಬಡ್ಡಿ ಆಟಗಾರರಿಗೆ ಲೀಗ್‌ ಆಯೋಜಕರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರೊ ಕಬಡ್ಡಿ ಹಲವರ ಜೀವನವನ್ನೇ ಬದಲಿಸಿದೆ ಎಂದು ದಿಗ್ಗಜ ಆಟಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಜೈಪುರ

ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 1000 ಪಂದ್ಯಗಳನ್ನು ಪೂರೈಸಿದ ಸಂಭ್ರಮದಲ್ಲಿ ಟೂರ್ನಿಯ ಆಯೋಜಕರು ದಿಗ್ಗಜ ಆಟಗಾರರನ್ನು ಸನ್ಮಾನಿಸಿದರು. ಮೊದಲ ಆವೃತ್ತಿಯಿಂದಲೂ ಲೀಗ್‌ ಜೊತೆ ಗುರುತಿಸಿಕೊಂಡು, ಪಿಕೆಎಲ್‌ ಭಾರತದ ಜನಪ್ರಿಯ ಲೀಗ್‌ ಆಗಿ ಬೆಳೆಯಲು ಕೊಡುಗೆ ನೀಡಿರುವ ಅನೂಪ್‌ ಕುಮಾರ್‌, ಮಂಜೀತ್‌ ಚಿಲ್ಲಾರ್‌, ಅಜಯ್‌ ಠಾಕೂರ್‌, ಧರ್ಮರಾಜ ಚೆರಲಾತನ್‌ ಹಾಗೂ ರಿಶಾಂಕ್‌ ದೇವಾಡಿಗಗೆ 1000ನೇ ಪಂದ್ಯಕ್ಕೂ ಮುನ್ನ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇಳೆ ದಿಗ್ಗಜ ಆಟಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿರು. ಧರ್ಮರಾಜ್‌ ಚೆರಲಾತನ್‌ ‘ಪ್ರೊ ಕಬಡ್ಡಿ ಅನೇಕರ ಜೀವನವನ್ನು ಬದಲಿಸಿದೆ. ಮುಂದೆ ಇನ್ನಷ್ಟು ಆಟಗಾರರ ಜೀವನ ಬದಲಾಗಲಿದೆ’ ಎಂದರು. ಅನೂಪ್‌ ಕುಮಾರ್‌ ಮಾತನಾಡಿ, ‘ಕಬಡ್ಡಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಲು ಪ್ರೊ ಕಬಡ್ಡಿ ಕಾರಣ. ಆಟ ಇಂದು ಬಹಳ ವೇಗವಾಗಿ ಬೆಳೆಯುತ್ತಿದೆ. ತಂಡಗಳು ಪ್ರತಿ ಆಟಗಾರನಿಗೂ ಬ್ಯಾಕ್‌ ಅಪ್‌ ಆಟಗಾರರನ್ನು ಸಿದ್ಧಗೊಳಿಸಿ, ಬಹಳ ಬಲಿಷ್ಠ ಪಡೆಗಳನ್ನು ಕಟ್ಟುತ್ತಿವೆ. ಕೋಚ್‌ಗಳ ಕೌಶಲ್ಯಗಳೂ ವೃದ್ಧಿಯಾಗುತ್ತಿರುವುದು ಬಹಳ ಖುಷಿಯ ವಿಚಾರ’ ಎಂದರು. ಮಂಜೀತ್‌ ಚಿಲ್ಲರ್‌ ಮಾತನಾಡಿ, ‘ನಾನು 10ನೇ ಆವೃತ್ತಿಯಲ್ಲೂ ಆಡಬೇಕು ಅಂದುಕೊಂಡಿದ್ದೆ. ಈ ಬಗ್ಗೆ ಅಜಯ್‌ ಠಾಕೂರ್‌ ಜೊತೆಯೂ ಚರ್ಚೆ ಮಾಡಿದ್ದೆ. ಅಜಯ್‌ ನಿವೃತ್ತಿ ಘೋಷಿಸಿದ ಕಾರಣ ನನಗೂ ಆಡಬೇಕು ಅನಿಸಲಿಲ್ಲ. ಪ್ರೊ ಕಬಡ್ಡಿ 1 ಲಕ್ಷ ಪಂದ್ಯಗಳನ್ನು ಪೂರೈಸಬೇಕು. ಅಂದು ನನಗಿಂತ ಖುಷಿ ಪಡುವ ವ್ಯಕ್ತಿ ಮತ್ತೊಬ್ಬರು ಇರುವುದಿಲ್ಲ’ ಎಂದು ಹೇಳಿದರು. ರಿಶಾಂಕ್ ದೇವಾಡಿಗ ಮಾತನಾಡಿ, ‘ಪ್ರೊ ಕಬಡ್ಡಿ 1000ನೇ ಪಂದ್ಯದ ಮೈಲಿಗಲ್ಲು ತಲುಪಿರುವುದು ಬಹಳ ಖುಷಿ ಹಾಗೂ ಸಂಭ್ರಮಿಸಬೇಕಾದ ವಿಚಾರ. ಈ ಲೀಗ್‌ನಲ್ಲಿ ಆಟಗಾರನಾಗಿದ್ದಾಗ ಪಟ್ಟಷ್ಟೇ ಖುಷಿ, ಕಾಮೆಂಟ್ರಿ ಮಾಡುವಾಗಲೂ ಇದೆ’ ಎಂದು ಸಂತೋಷ ವ್ಯಕ್ತಪಡಿಸಿದರು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ