ನವದೆಹಲಿ: ಹೆಚ್ಚಿನ ಲಾಭ ಬರದ ಹಿನ್ನೆಲೆಯಲ್ಲಿ ಬಿಸಿಸಿಐ ಅಂಡರ್-19 ಕ್ರಿಕೆಟ್ ವಿಶ್ವಕಪ್ ಆಯೋಜಿಸುವುದಿಲ್ಲ ಎಂಬ ಆರೋಪವನ್ನು ಬಿಸಿಸಿಐ ಮಾಜಿ ಅಧ್ಯಕ್ಷ, ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಳ್ಳಿಹಾಕಿದ್ದಾರೆ.
ಈ ಸಂಬಂಧ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಹಿರಿಯರು ಆಡುವ ಹೆಚ್ಚಿನ ವಿಶ್ವಕಪ್ ಟೂರ್ನಿಗಳು ಸಹ ಲಾಭ ರಹಿತವಾಗಿವೆ. ಭಾರತದಲ್ಲಿ ಕಿರಿಯರ ಟೂರ್ನಿ ಆಯೋಜಿಸದಿರಲು ಇದು ಕಾರಣವಲ್ಲ.
ಮುಂದೆ ಬಿಸಿಸಿಐ ಅಂಡರ್-19 ವಿಶ್ವಕಪ್‌ಗಳನ್ನು ಭಾರತದಲ್ಲಿ ಆಯೋಜಿಸಬಹುದು. ಇದರಲ್ಲಿ ಯಾವುದೇ ಸಂಶಯ ಬೇಡ ಎಂದಿದ್ದಾರೆ.ಜಗತ್ತಿನ ವಿವಿಧ ಸ್ಥಳಗಳಿಗೆ ಕ್ರಿಕೆಟ್ ಆಟವನ್ನು ಕೊಂಡೊಯ್ಯುವುದು ಅಂಡರ್-19 ವಿಶ್ವಕಪ್‌ನಂತಹ ಟೂರ್ನಿಗಳ ಆಯೋಜನೆ ಹಿಂದಿರುವ ಪ್ರಮುಖ ಉದ್ದೇಶ.
ಹಿರಿಯರ ವಿಶ್ವಕಪ್‌ಗಳು ನಡೆಯದ ಸ್ಥಳಗಳಲ್ಲಿ ಕಿರಿಯರ ಟೂರ್ನಿಗಳನ್ನು ಆಯೋಜಿಸಿದರೆ ತಪ್ಪೇನು ಎಂದು ಗಂಗೂಲಿ ಪ್ರಶ್ನೆ ಮಾಡಿದ್ದಾರೆ.
ಐದು ಬಾರಿ ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ, ಇದುವರೆಗೂ ಈ ಟೂರ್ನಿ ಆಯೋಜಿಸಿಲ್ಲ. ಮೇಲಾಗಿ 2026ರಲ್ಲಿ ಕೂಡಾ ಜಿಂಬಾಂಬ್ವೆ ಮತ್ತು ನಮೀಬಿಯಾ ದೇಶಗಳು ಜಂಟಿಯಾಗಿ ಅಂಡರ್-19 ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲಿವೆ.