ಪ್ರೊ ಕಬಡ್ಡಿಯಲ್ಲೂ ಬರಲಿದೆ ಟೈ ಬ್ರೇಕರ್‌!

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ರೈಡ್‌ಗೆ 30 ಸೆಕೆಂಡ್‌ ಕಾಲ ಮಿತಿ, ಸೂಪರ್‌ ರೈಡ್‌, ಸೂಪರ್‌ ಟ್ಯಾಕಲ್‌ ಹೀಗೆ ಹಲವು ಹೊಸತನಗಳನ್ನು ಕಬಡ್ಡಿಗೆ ಪರಿಚಯಿಸಿದ್ದೇ ಪ್ರೊ ಕಬಡ್ಡಿ. ಈಗ ಟೈ ಬ್ರೇಕರ್‌ ಮೂಲಕ ಮತ್ತೊಂದು ಮಹತ್ವದ ಬದಲಾವಣೆ ತರುವ ಚಿಂತನೆಯಲ್ಲಿದ್ದಾರೆ ಲೀಗ್‌ ಆಯೋಜಕರು.

- ಕನ್ನಡಪ್ರಭ ವಿಶೇಷ ಸ್ಪಂದನ್‌ ಕಣಿಯಾರ್‌ ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪ್ಪಟ ಭಾರತೀಯ ಕ್ರೀಡೆ ಕಬಡ್ಡಿಯನ್ನು ಪ್ರೇಕ್ಷಕ ಸ್ನೇಹಿಯಾಗಿಸಿದ ಹಿರಿಮೆ ಪ್ರೊ ಕಬಡ್ಡಿ ಲೀಗ್‌ಗೆ ಸಲ್ಲುತ್ತದೆ. ಪ್ರತಿ ರೈಡ್‌ಗೆ 30 ಸೆಕೆಂಡ್‌ಗಳ ಕಾಲ ಮಿತಿ, ಸೂಪರ್‌ ರೈಡ್‌, ಸೂಪರ್‌ ಟ್ಯಾಕಲ್‌ ಹೀಗೆ ಹಲವು ಹೊಸತನಗಳನ್ನು ಕಬಡ್ಡಿಗೆ ಪರಿಚಯಿಸಿದ ಪ್ರೊ ಕಬಡ್ಡಿಯಲ್ಲಿ ಟೈ ಬ್ರೇಕರ್‌ ನಿಯಮವನ್ನೂ ತರಲು ಆಯೋಜಕರು ನಿರ್ಧರಿಸಿದ್ದಾರೆ. ಕ್ರಿಕೆಟ್‌ನಲ್ಲಿ ಪಂದ್ಯ ಟೈ ಆದಾದ ಫಲಿತಾಂಶಕ್ಕಾಗಿ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಫುಟ್ಬಾಲ್‌ ಹಾಗೂ ಹಾಕಿಯಲ್ಲಿ ಪೆನಾಲ್ಟಿ ಶೂಟೌಟ್‌ಗಳನ್ನು ನಾವು ನೋಡುತ್ತೇವೆ. ಅದೇ ರೀತಿ ಪ್ರೊ ಕಬಡ್ಡಿಯಲ್ಲಿ ಪಂದ್ಯ ಟೈ ಆದರೆ, ಗೆಲುವು-ಸೋಲು ನಿರ್ಧರಿಸಲು ಟೈ ಬ್ರೇಕರ್‌ನ ಮೊರೆ ಹೋಗುವ ದಿನಗಳು ದೂರವಿಲ್ಲ.

ಪ್ರಸ್ತುತ ಚಾಲ್ತಿಯಲ್ಲಿರುವ 10ನೇ ಆವೃತ್ತಿ ಆರಂಭಕ್ಕೂ ಮುನ್ನ ಟೈ ಬ್ರೇಕರ್‌ ಅಳವಡಿಕೆಗೆ ಬೇಕಿರುವ ರೂಪುರೇಶೆ ಸಿದ್ಧಪಡಿಸುವ ಕೆಲಸವನ್ನು ಆಯೋಜಕರು ಮಾಡಿದ್ದರು. ಕೆಲ ಅಭ್ಯಾಸ ಪಂದ್ಯಗಳಲ್ಲಿ ನಿಯಮದ ಪ್ರಯೋಗವೂ ನಡೆದಿತ್ತು ಎನ್ನುವ ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಆದರೆ ಪ್ರಸಾರಕರು ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ನಿಯಮದ ಪರಿಚಯವನ್ನು ಮುಂದೂಡಲಾಯಿತು. 2024ರ ಪ್ರೊ ಕಬಡ್ಡಿಯಲ್ಲಿ ಅಭಿಮಾನಿಗಳು ಟೈ ಬ್ರೇಕರ್‌ ನಿಯಮವನ್ನು ನೋಡಬಹುದು ಎಂದು ಲೀಗ್‌ನ ಆಯುಕ್ತ ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ.

ಟೈ ಬ್ರೇಕರ್ ಅಳವಡಿಕೆ ಏಕೆ?ಒಂದು ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ 130ಕ್ಕೂ ಹೆಚ್ಚಿನ ಪಂದ್ಯಗಳು ನಡೆಯಲಿವೆ. ಈ ಹಿಂದಿನ 4-5 ಆವೃತ್ತಿಗಳನ್ನು ಗಮನಿಸಿದಾಗ ಪ್ರತಿ ಆವೃತ್ತಿಯಲ್ಲೂ ಏನಿಲ್ಲವೆಂದರೂ ಸರಾಸರಿ 8-10 ಪಂದ್ಯಗಳು ಟೈ ಆಗಿವೆ. ಪಂದ್ಯ ಟೈ ಆದಾಗ ಉಭಯ ತಂಡಕ್ಕೂ ತಲಾ 3 ಅಂಕ ಹಂಚಲಾಗುತ್ತದೆ. ಟೈನಿಂದಾಗಿ ಕೆಲ ತಂಡಗಳು ಪ್ಲೇ-ಆಫ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿದ್ದವು. ಅಂಕಪಟ್ಟಿಯಲ್ಲಿ ಕೆಲ ತಂಡಗಳಿಗೆ ಅರ್ಹ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಟೈ ಬ್ರೇಕರ್‌ಗೆ ತಂಡಗಳಿಂದಲೂ ಬೇಡಿಕೆ ಇತ್ತು.

-ಹೇಗಿರಲಿದೆ ಟೈ ಬ್ರೇಕರ್?ಟೈ ಬ್ರೇಕರ್‌ನಲ್ಲಿ ಎರಡೂ ತಂಡಗಳಿಗೂ ತಲಾ 5 ರೈಡ್‌ಗಳು ಸಿಗಲಿವೆ. ಬೋನಸ್‌ ಲೈನ್‌ ಬದಲು ಬಾಕ್‌ ಲೈನ್ ಅನ್ನೇ ಬೋನಸ್‌ ಲೈನ್‌ ಆಗಿ ಪರಿಗಣಿಸುವ ಸಾಧ್ಯತೆ ಇದೆ. 5 ರೈಡ್‌ಗಳ ಮುಕ್ತಾಯಕ್ಕೆ ಹೆಚ್ಚು ಅಂಕ ಪಡೆಯುವ ತಂಡ ಗೆಲ್ಲಲಿದೆ. 5 ರೈಡ್‌ ಬಳಿಕವೂ ಯಾವ ತಂಡವೂ ಮುನ್ನಡೆ ಪಡೆಯದಿದ್ದರೆ, ಮುನ್ನಡೆ ಸಿಗುವ ವರೆಗೂ ಟೈ ಬ್ರೇಕರ್‌ ಮುಂದುವರಿಯಲಿದೆ. ಪಂದ್ಯ ಗೆಲ್ಲುವ ತಂಡಕ್ಕೆ 5 ಅಂಕ, ಮತ್ತೊಂದು ತಂಡಕ್ಕೆ 3 ಅಂಕ ಸಿಗಲಿದೆ. ಟೈ ಬ್ರೇಕರ್‌ನಲ್ಲಿ ಗಳಿಸಿದ ಅಂಕಗಳು ಒಟ್ಟಾರೆ ಅಂಕ ವ್ಯತ್ಯಾಸಕ್ಕೆ ಪರಿಗಣಿಸಲ್ಪಡುವುದಿಲ್ಲ. ಆಟಗಾರರ ವೈಯಕ್ತಿಕವಾಗಿ ಗಳಿಸಿದ ರೈಡ್‌, ಟ್ಯಾಕಲ್‌ ಅಂಕಗಳೂ ಅವರವರ ಖಾತೆಗೆ ಸೇರ್ಪಡೆಗೊಳ್ಳುವುದಿಲ್ಲ.

--ಪ್ರೊ ಕಬಡ್ಡಿ ಲೀಗ್‌ನಲ್ಲಿ ಹಲವು ಹೊಸ ನಿಯಮಗಳನ್ನು ಪರಿಚಯಿಸಿ ಕ್ರೀಡೆಯು ನಿರಂತರವಾಗಿ ಹೊಸ ಪ್ರೇಕ್ಷಕರನ್ನು ಪಡೆಯುವಂತೆ ಮಾಡಿದ್ದೇವೆ. ಟೈ ಬ್ರೇಕರ್ ನಿಯಮ ಸಹ ಆಟದ ರೋಚಕತೆಯನ್ನು ಹೆಚ್ಚಿಸಲಿದೆ ಎನ್ನುವ ಭರವಸೆ ಇದೆ.- ಅನುಪಮ್ ಗೋಸ್ವಾಮಿ, ಪ್ರೊ ಕಬಡ್ಡಿ ಆಯುಕ್ತ

---ಗೆಲ್ಲಬಹುದಾದ ಪಂದ್ಯ ಟೈ ಆದಾಗ ಸಹಜವಾಗಿಯೇ ತಂಡಗಳಿಗೆ ಬೇಸರವಾಗಲಿದೆ. ತಂಡ ಮುಂದಿನ ಹಂತಕ್ಕೆ ಪ್ರವೇಶಿಸುವುದಕ್ಕೂ ಅಡ್ಡಿಯಾಗುವುದನ್ನು ನೋಡಿದ್ದೇವೆ. ಈ ನಿಟ್ಟಿನಲ್ಲಿ ಟೈ ಬ್ರೇಕರ್‌ ಜಾರಿಯಾಗುವುದು ಉತ್ತಮ. - ಬಿ.ಸಿ.ರಮೇಶ್‌, ಪುಣೇರಿ ಪಲ್ಟನ್‌ ಕೋಚ್‌

Share this article