ನಾಡಿದ್ದು ಭಾರತ vs ಪಾಕ್‌ ಫೈನಲ್‌

Published : Sep 26, 2025, 11:33 AM IST
Team India squad for west indies test series

ಸಾರಾಂಶ

ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಎದುರಾಗಲಿದೆ. ಗುರುವಾರ ನಡೆದ ಸೂಪರ್‌-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿದ ಪಾಕಿಸ್ತಾನ ಫೈನಲ್‌ ಪ್ರವೇಶಿಸಿತು.

 ದುಬೈ: ಏಷ್ಯಾಕಪ್‌ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಎದುರಾಗಲಿದೆ. ಗುರುವಾರ ನಡೆದ ಸೂಪರ್‌-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿದ ಪಾಕಿಸ್ತಾನ ಫೈನಲ್‌ ಪ್ರವೇಶಿಸಿತು.

ಭಾರತ ವಿರುದ್ಧ ಸೋತು, ಶ್ರೀಲಂಕಾ ವಿರುದ್ಧ ಗೆದ್ದಿದ್ದ ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ವರ್ಚುವಲ್‌ ಸೆಮಿಫೈನಲ್‌ನಂತಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 10.5 ಓವರಲ್ಲಿ 49 ರನ್‌ಗೆ 5 ವಿಕೆಟ್‌ ಕಳೆದುಕೊಂಡಿತು.

ಮೊಹಮದ್‌ ಹ್ಯಾರಿಸ್‌ 31, ಶಾಹೀನ್‌ ಅಫ್ರಿದಿ 19, ಮೊಹಮದ್‌ ನವಾಜ್‌ 25 , ಫಹೀಂ ಅಶ್ರಫ್‌ ಔಟಾಗದೆ 14 ರನ್‌ ಗಳಿಸಿ ತಂಡ 100 ರನ್‌ ದಾಟಲು ನೆರವಾದರು. ಪಾಕ್‌ 8 ವಿಕೆಟ್‌ಗೆ 135 ರನ್‌ ಕಲೆಹಾಕಿತು.

ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ 73ಕ್ಕೆ 6 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಶಮಿಮ್‌ ಹೊಸೈನ್‌ರನ್ನು ಹೊರತುಪಡಿಸಿ ಉಳಿದವರಿಂದ ಹೋರಾಟ ಮೂಡಿಬರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 9 ವಿಕೆಟ್‌ಗೆ 124 ರನ್‌ ಗಳಿಸಿ ಸೋಲುಂಡಿತು.

ಸ್ಕೋರ್‌: ಪಾಕಿಸ್ತಾನ 135/8 (ಹ್ಯಾರಿಸ್‌ 31, ನವಾಜ್‌ 25, ಟಸ್ಕಿನ್‌ 3-28), ಬಾಂಗ್ಲಾ 20 ಓವರಲ್ಲಿ 124/9 (ಶಮೀಮ್‌ 30, ಶಾಹೀನ್‌ 3-17)

2 ವಾರದಲ್ಲಿ 3ನೇ ಬಾರಿಗೆ

ಭಾರತ-ಪಾಕ್‌ ಸೆಣಸು!

ಈ ಸಲದ ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 3ನೇ ಬಾರಿಗೆ ಪರಸ್ಪರ ಎದುರಾಗಲಿವೆ. ಗುಂಪು ಹಂತದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ, ಸೂಪರ್‌-4 ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ಸೆ.28ರಂದು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಬದ್ಧವೈರಿಯನ್ನು ಮತ್ತೊಮ್ಮೆ ಹೊಸಕಿಹಾಕಿ, 9ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಲು ಭಾರತ ಕಾತರಿಸುತ್ತಿದೆ.

ಮೊದಲ ಫೈನಲ್‌ ಮುಖಾಮುಖಿ

ಭಾರತ ಹಾಗೂ ಪಾಕಿಸ್ತಾನ ಏಷ್ಯಾಕಪ್‌ ಫೈನಲ್‌ನಲ್ಲಿ ಮೊದಲ ಬಾರಿಗೆ ಪರಸ್ಪರ ಎದುರಾಗಲಿವೆ. ಈ ವರೆಗೂ ಉಭಯ ತಂಡಗಳು ಏಷ್ಯಾಕಪ್‌ನಲ್ಲಿ 18 ಬಾರಿ ಮುಖಾಮುಖಿಯಾಗಿವೆ. ಈ ಪಂದ್ಯಗಳು ಗುಂಪು ಹಂತ, ಸೂಪರ್-4 ಹಂತಗಳಲ್ಲಿ ನಡೆದಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌
ಮಾ.5ರಂದು ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆ