ದುಬೈ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಾಗೂ ಹಿಂಸಾಚಾರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಸುರಕ್ಷತೆ ದೃಷ್ಟಿಯಿಂದ ಮುಂಬರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಬಾಂಗ್ಲಾದಿಂದ ಯುಎಇಗೆ ಸ್ಥಳಾಂತರಿಸಿದೆ.
ಬಾಂಗ್ಲಾದಲ್ಲಿ ಹಿಂಸಾಚಾರ ಆರಂಭಗೊಂಡ ದಿನವೇ ಐಸಿಸಿ ಅಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿತ್ತು. ಬಾಂಗ್ಲಾ ಕ್ರಿಕೆಟ್ ಸಂಸ್ಥೆ (ಬಿಸಿಬಿ) ಕೂಡ ವಿಶ್ವಕಪ್ ಆಯೋಜನೆಗೆ ಯಾವುದೇ ಸಮಸ್ಯೆಯಾಗದಂತೆ ರಕ್ಷಣೆ ಒದಗಿಸುವುದಾಗಿ ಗ್ಯಾರಂಟಿ ನೀಡುವಂತೆ ಬಾಂಗ್ಲಾ ಸೇನೆಯನ್ನು ಕೇಳಿತ್ತು. ಆದರೆ ಸರಿಯಾದ ಪ್ರತಿಕ್ರಿಯೆ ದೊರಕದ ಕಾರಣ, ಐಸಿಸಿ ಬಳಿ ತನ್ನ ಅಸಹಾಯಕತೆ ವ್ಯಕ್ತಪಡಿಸಿತ್ತು. ಬಳಿಕ ವಿಶ್ವಕಪ್ ಆಯೋಜಿಸುವಂತೆ ಬಿಸಿಸಿಐ ಬಳಿ ಐಸಿಸಿ ಮನವಿ ಮಾಡಿತ್ತು. ಆದರೆ ಬಿಸಿಸಿಐ, ಐಸಿಸಿ ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ, ಟೂರ್ನಿಯನ್ನು ಸ್ಥಳಾಂತರಿಸದೆ ಐಸಿಸಿಗೆ ಬೇರೆ ದಾರಿಯೇ ಇರಲಿಲ್ಲ.