ಕಾಯುವಿಕೆ ಅಂತ್ಯ : ಬಹುನಿರೀಕ್ಷಿತ ಭಾರತ vs ಆಸ್ಟ್ರೇಲಿಯಾ ಬಿಗ್‌ ಫೈಟ್‌ ಇಂದಿನಿಂದ ಶುರು

KannadaprabhaNewsNetwork |  
Published : Nov 22, 2024, 01:20 AM ISTUpdated : Nov 22, 2024, 04:20 AM IST
ಭಾರತ vs ಆಸ್ಟ್ರೇಲಿಯಾ | Kannada Prabha

ಸಾರಾಂಶ

ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಮೊದಲ ಪಂದ್ಯ ಇಂದು ಪರ್ತ್‌ನಲ್ಲಿ ಶುರು. ಇತ್ತಂಡಕ್ಕೂ ಅತಿ ಮಹತ್ವದ ಸರಣಿ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸ್ಥಾನಕ್ಕೆ ಪೈಪೋಟಿ. ಆಸ್ಟ್ರೇಲಿಯಾದಲ್ಲಿ ಹ್ಯಾಟ್ರಿಕ್‌ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಪರ್ತ್‌: ಯಾವ ಐಸಿಸಿ ವಿಶ್ವಕಪ್‌ಗೂ ಕಮ್ಮಿಯಿಲ್ಲದ, ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳನ್ನು ಕಾತರದಿಂದ ಕಾಯುವಂತೆ ಮಾಡಿದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಆರಂಭಗೊಳ್ಳುವ ದಿನ ಬಂದೇ ಬಿಟ್ಟಿದೆ. 

ವಿಶ್ವ ಕ್ರಿಕೆಟ್‌ ಕುತೂಹಲದ ಕಣ್ಣುಗಳಿಂದ ನೋಡುತ್ತಿರುವ, ಬದ್ಧವೈರಿಗಳ ನಡುವಿನ ಹೈವೋಲ್ಟೇಜ್‌ ಕದನ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, 5 ಪಂದ್ಯಗಳ ಸರಣಿಯ ಮೊದಲ ಪಂದ್ಯ ಪರ್ತ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.ಒಂದೆಡೆ ಹಾಲಿ ಟೆಸ್ಟ್‌ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ. ಮತ್ತೊಂದೆಡೆ 2 ಬಾರಿ ವಿಶ್ವ ಚಾಂಪಿಯನ್‌ಶಿಪ್‌ ಪಟ್ಟ ಕೈ ತಪ್ಪಿದರೂ, ಟೆಸ್ಟ್‌ ಕ್ರಿಕೆಟ್‌ನ ಸಾಮ್ರಾಟನಾಗಿ ಗುರುತಿಸಿಕೊಳ್ಳುವ ಭಾರತ. ಈ ಬಾರಿ ಸರಣಿ ಆಸ್ಟ್ರೇಲಿಯಾದ ತವರಲ್ಲಿ ನಡೆಯುತ್ತಿದ್ದರೂ, ಭಾರತವೂ ಸರಣಿ ಗೆಲ್ಲುವ ಫೇವರಿಟ್‌ ಎಂದೇ ಗುರುತಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ, ಕಳೆದೆರಡು ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ಗೆದ್ದಿರುವುದು.

ಪಡಿಕ್ಕಲ್‌ಗೆ ಸ್ಥಾನ?: ಈ ಸರಣಿಗೆ ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದಲ್ಲಿ ಆಯ್ಕೆ ಗೊಂದಲ ಎದುರಾಗಿದೆ. ಮೊದಲ ಟೆಸ್ಟ್‌ಗೆ ಖಾಯಂ ನಾಯಕ ರೋಹಿತ್‌ ಶರ್ಮಾ ಅಲಭ್ಯರಾಗಲಿದ್ದು, ವೇಗಿ ಜಸ್‌ಪ್ರೀತ್‌ ಬೂಮ್ರಾ ತಂಡ ಮುನ್ನಡೆಸಲಿದ್ದಾರೆ. ಶುಭ್‌ಮನ್‌ ಗಿಲ್‌ ಕೂಡಾ ಹೊರಬಿದ್ದಿರುವ ಕಾರಣ ಅಂತಿಮ 11ರ ಆಯ್ಕೆ ಸವಾಲಾಗಿ ಪರಿಣಮಿಸಿದೆ. ರೋಹಿತ್‌ ಅನುಪಸ್ಥಿತಿಯಲ್ಲಿ ಕರ್ನಾಟಕದ ಕೆ.ಎಲ್‌.ರಾಹುಲ್‌ ಅವರು ಯಶಸ್ವಿ ಜೈಸ್ವಾಲ್‌ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಗಿಲ್‌ ಸ್ಥಾನಕ್ಕೆ 3ನೇ ಕ್ರಮಾಂಕದಲ್ಲಿ ದೇವದತ್‌ ಪಡಿಕ್ಕಲ್‌ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚು.ಸರ್ಫರಾಜ್‌ ಖಾನ್‌ ತಂಡದಲ್ಲಿದ್ದರೂ, ವಿಕೆಟ್‌ ಕೀಪರ್‌ ಬ್ಯಾಟರ್‌ ಧ್ರುವ್‌ ಜುರೆಲ್‌ರನ್ನು ತಜ್ಞ ಬ್ಯಾಟರ್‌ ಆಗಿ ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಈ ಸರಣಿಗೂ ಮುನ್ನ ಭಾರತ ‘ಎ’ ತಂಡದಲ್ಲಿದ್ದ ಧ್ರುವ್‌ ಹಾಗೂ ಪಡಿಕ್ಕಲ್‌ ಆಸ್ಟ್ರೇಲಿಯಾ ‘ಎ’ ವಿರುದ್ಧ ಮಿಂಚಿದ್ದರು. ಇದೇ ಕಾರಣಕ್ಕೆ ಇವರಿಬ್ಬರ ಮೇಲೆ ತಂಡದ ಆಡಳಿತ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಇನ್ನು, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ತಂಡದ ಪ್ರಮುಖ ಬ್ಯಾಟಿಂಗ್‌ ಆಧಾರಸ್ತಂಭ.

ಏಕೈಕ ಸ್ಪಿನ್ನರ್‌?: ಪರ್ತ್‌ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಭಾರತ ತಂಡ ಏಕೈಕ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯಬಹುದು. ಹೀಗಾದರೆ ಆರ್‌.ಅಶ್ವಿನ್‌ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು. ವೇಗದ ಬೌಲಿಂಗ್‌ ಆಲ್ರೌಂಡರ್‌ ಆಗಿ ನಿತೀತ್‌ ರೆಡ್ಡಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಇನ್ನು, ನಾಯಕ ಬೂಮ್ರಾ ಜೊತೆ ವೇಗಿಗಳಾಗಿ ಮೊಹಮದ್‌ ಸಿರಾಜ್‌ ಹಾಗೂ ಆಕಾಶ್‌ದೀಪ್‌ ಆಡಬಹುದು. ಹರ್ಷಿತ್‌ ರಾಣಾ, ಪ್ರಸಿದ್ಧ್‌ ಕೃಷ್ಣ ಕೂಡಾ ರೇಸ್‌ನಲ್ಲಿದ್ದು, ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಕುತೂಹಲವಿದೆ. 

ಆಸೀಸ್‌ ಫೇವರಿಟ್‌: ತವರಿನಲ್ಲಿ ಆಸೀಸ್‌ ಎಷ್ಟು ಅಪಾಯಕಾರಿ ತಂಡ ಎಂಬುದು ಭಾರತಕ್ಕೆ ಚೆನ್ನಾಗಿ ಗೊತ್ತಿದೆ. ಹಾಲಿ ವಿಶ್ವ ಚಾಂಪಿಯನ್‌ ಆಸೀಸ್‌ ಈ ಬಾರಿಯೂ ಸರಣಿ ಗೆಲ್ಲುವ ಫೇವರಿಟ್‌ ತಂಡ. ಪ್ಯಾಟ್‌ ಕಮಿನ್ಸ್‌ ನಾಯಕತ್ವದ ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ತೋರುತ್ತಿದೆ. ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಮಾರ್ನಸ್‌ ಲಬುಶೇನ್‌, ಉಸ್ಮಾನ್‌ ಖವಾಜ ಬ್ಯಾಟಿಂಗ್‌ ಆಧಾರಸ್ತಂಭ. ಕಮಿನ್ಸ್‌ ಜೊತೆ ಮಿಚೆಲ್‌ ಸ್ಟಾರ್ಕ್‌, ಹೇಜಲ್‌ವುಡ್‌ ವೇಗದ ಬೌಲಿಂಗ್‌ ಪಡೆಗೆ ಬಲ ತುಂಬಲಿದ್ದಾರೆ.

ಒಟ್ಟು ಮುಖಾಮುಖಿ: 107ಭಾರತ: 32ಆಸ್ಟ್ರೇಲಿಯಾ: 45ಡ್ರಾ: 29ಟೈ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಜೈಸ್ವಾಲ್‌, ಕೆ.ಎಲ್‌.ರಾಹುಲ್‌, ದೇವದತ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ಅಶ್ವಿನ್‌, ನಿತೀಶ್‌ ಕುಮಾರ್‌, ಬೂಮ್ರಾ(ನಾಯಕ), ಹರ್ಷಿತ್‌/ಪ್ರಸಿದ್ಧ್‌, ಸಿರಾಜ್‌/ಆಕಾಶ್‌ದೀಪ್‌.

ಆಸ್ಟ್ರೇಲಿಯಾ: ಖವಾಜ, ಮೆಕ್‌ಸ್ವೀನಿ, ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಅಲೆಕ್ಸ್‌ ಕೇರಿ, ಮಿಚೆಲ್‌ ಮಾರ್ಷ್‌, ಪ್ಯಾಟ್‌ ಕಮಿನ್ಸ್‌(ನಾಯಕ), ಮಿಚೆಲ್‌ ಸ್ಟಾರ್ಕ್‌, ಲಯನ್‌, ಹೇಜಲ್‌ವುಡ್‌,

ಪಿಚ್‌ ರಿಪೋರ್ಟ್‌: ಪರ್ತ್‌ ಕ್ರೀಡಾಂಗಣದ ಪಿಚ್‌ನಲ್ಲಿ ಹೆಚ್ಚು ವೇಗ ಹಾಗೂ ಬೌನ್ಸ್‌ ಇರಲಿದೆ. ಪಂದ್ಯದುದ್ದಕ್ಕೂ ವೇಗಿಗಳು ದೊಡ್ಡ ಮಟ್ಟದ ನೆರವು ಪಡೆಯಬಹುದು. ಶಾರ್ಟ್‌ ಪಿಚ್ಡ್‌ ಎಸೆತಗಳನ್ನು ಉತ್ತಮವಾಗಿ ನಿಭಾಯಿಸುವ ಬ್ಯಾಟರ್‌ಗಳು ಈ ಪಿಚ್‌ನಲ್ಲಿ ಯಶಸ್ಸು ಕಾಣಲಿದ್ದಾರೆ. ಪಂದ್ಯ ಆರಂಭ: ಬೆಳಗ್ಗೆ 7.50ಕ್ಕೆ(ಭಾರತೀಯ ಕಾಲಮಾನ), ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಟೆಸ್ಟ್‌ ಚಾಂಪಿಯನ್‌ಶಿಪ್‌ನ ‘ಸೆಮಿಫೈನಲ್‌’ ಹಣಾಹಣಿ

ಈ ಬಾರಿ ಸರಣಿ ಇತ್ತಂಡಗಳಿಗೂ 2023-25 ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ದೃಷ್ಟಿಯಿಂದ ಅತಿ ಮಹತ್ವದ ಸರಣಿ. ಒಂದರ್ಥದಲ್ಲಿ ವರ್ಚುವಲ್‌ ಸೆಮಿಫೈನಲ್‌ ಇದ್ದಂತೆ. ನ್ಯೂಜಿಲೆಂಡ್‌ ವಿರುದ್ಧ ಸರಣಿಗೂ ಮುನ್ನ ಭಾರತ ಫೈನಲ್‌ಗೇರುವ ನೆಚ್ಚಿನ ತಂಡವಾಗಿತ್ತು. ಆದರೆ ತವರಿನಲ್ಲೇ ಎದುರಾದ 0-3 ವೈಟ್‌ವಾಶ್‌ ಭಾರತದ ಹಾದಿಯನ್ನು ಕಠಿಣಗೊಳಿಸಿದೆ. ಸದ್ಯ ಭಾರತ ಶೇ.58.33 ಗೆಲುವಿನ ಪ್ರತಿಶತ ಹೊಂದಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ(ಶೇ.62.50) ಅಗ್ರಸ್ಥಾನದಲ್ಲಿದೆ. ಭಾರತಕ್ಕೆ ಈ ಸರಣಿಯ 5 ಪಂದ್ಯಗಳಷ್ಟೇ ಉಳಿದಿದ್ದು, ಕನಿಷ್ಠ 4 ಪಂದ್ಯಗಳಲ್ಲಿ ಗೆದ್ದರಷ್ಟೇ ಫೈನಲ್‌ಗೇರಲಿದೆ. ಅತ್ತ ಆಸೀಸ್‌ಗೆ ಭಾರತ ವಿರುದ್ಧದ 5 ಪಂದ್ಯದ ಜೊತೆಗೆ ಶ್ರೀಲಂಕಾ ವಿರುದ್ಧ 3 ಟೆಸ್ಟ್‌ ಬಾಕಿಯಿದೆ. ಈ ಪೈಕಿ 4 ಪಂದ್ಯ ಗೆದ್ದರೆ ಆಸೀಸ್‌ ಫೈನಲ್‌ಗೇರಲಿದೆ.

2014/15ರ ಬಳಿಕ ಸರಣಿ ಸೋತಿಲ್ಲ ಭಾರತ ತಂಡ

ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಸತತ 3ನೇ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. 2018/19 ಹಾಗೂ 2020/21ರಲ್ಲಿ ನಡೆದ ತಲಾ 4 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಲ್ಲಿ ಜಯಭೇರಿ ಬಾರಿಸಿತ್ತು. ಒಟ್ಟಾರೆ ಭಾರತ ತಂಡ ಆಸೀಸ್‌ ವಿರುದ್ಧ ಸತತ 5ನೇ ಟೆಸ್ಟ್‌ ಸರಣಿ ಗೆಲುವಿನ ಕಾತರದಲ್ಲಿದೆ. 2014/15ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಭಾರತ ಕೊನೆ ಬಾರಿ ಸೋತಿತ್ತು. 

14ನೇ ಸರಣಿ: ಭಾರತ ತಂಡ 14ನೇ ಬಾರಿ ಟೆಸ್ಟ್‌ ಸರಣಿ ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಈ ವರೆಗೆ 13ರಲ್ಲಿ 8 ಬಾರಿ ಆಸೀಸ್‌, 2 ಬಾರಿ ಭಾರತ ಗೆದ್ದಿದೆ. 3 ಸರಣಿ ಡ್ರಾಗೊಂಡಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!