ಟಿ20 ವಿಶ್ವಕಪ್‌ಗೆ ಅಮೆರಿಕ ಗ್ರ್ಯಾಂಡ್‌ ಎಂಟ್ರಿ!

KannadaprabhaNewsNetwork |  
Published : Jun 03, 2024, 12:31 AM ISTUpdated : Jun 03, 2024, 04:09 AM IST
ಜಾನ್ಸ್‌ | Kannada Prabha

ಸಾರಾಂಶ

ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ 7 ವಿಕೆಟ್‌ ಭರ್ಜರಿ ಗೆಲುವು. ನಿಕೋಲಸ್‌, ಭಾರತೀಯ ಮೂಲಕ ನವ್‌ನೀತ್‌ ಅಬ್ಬರದ ಅರ್ಧಶತಕ ಕೆನಡಾ 5 ವಿಕೆಟ್‌ಗೆ 194. ಬೃಹತ್‌ ಗುರಿಯನ್ನು 17.4 ಓವರಲ್ಲೇ ಬೆನ್ನತ್ತಿ ಗೆದ್ದ ಯುಎಸ್‌ಎ. ಗೌಸ್‌ 65, ಆ್ಯರೊನ್‌ 40 ಎಸೆತಗಳಲ್ಲಿ 94* ರನ್‌

ಡಲ್ಲಾಸ್‌: ಆತಿಥ್ಯ ರಾಷ್ಟ್ರ ಎಂಬ ಕಾರಣಕ್ಕೆ ಚೊಚ್ಚಲ ಬಾರಿ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡ ಅಮೆರಿಕ ಟೂರ್ನಿಯ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಈ ಬಾರಿ ಐಪಿಎಲ್‌ನ ಹೈ ಸ್ಕೋರ್‌ ಪಂದ್ಯಗಳನ್ನು ನೆನಪಿಸುವಂತೆ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾವನ್ನು 7 ವಿಕೆಟ್‌ಗಳಿಂದ ಬಗ್ಗು ಬಡಿಯಿತು.

ಮೊದಲು ಬ್ಯಾಟ್‌ ಮಾಡಿದ ಕೆನಡಾ ತಂಡ 5 ವಿಕೆಟ್‌ ಕಳೆದುಕೊಂಡು 194 ರನ್‌ ಕಲೆಹಾಕಿತು. ಟಿ20 ವಿಶ್ವಕಪ್‌ನಲ್ಲಿ ಈ ಮೊತ್ತ ದೊಡ್ಡದೆನಿಸಿದರೂ ಅಮೆರಿಕ ಸುಲಭದಲ್ಲಿ ಬೆನ್ನತ್ತಿ ಗೆಲುವು ಸಾಧಿಸಿತು. ಆ್ಯರೊನ್‌ ಜಾನ್ಸ್‌ ಸ್ಫೋಟಕ ಆಟ ದೊಡ್ಡ ಮೊತ್ತವನ್ನೂ ಸುಲಭವಾಗಿಸಿತು.

ಖಾತೆ ತೆರೆಯುವ ಮೊದಲೇ ಸ್ಟೀವನ್‌ ಟೇಲರ್ ಓಟಾದರೆ, ನಾಯಕ ಮೋನಕ್‌ ಪಟೇಲ್‌ ಗಳಿಕೆ ಕೇವಲ 16 ರನ್‌. ಹೀಗಾಗಿ ತಂಡಕ್ಕೆ ಉತ್ತಮ ಆರಂಭವೇನೂ ಸಿಗಲಿಲ್ಲ. 8 ಓವರ್‌ಗಳಲ್ಲಿ ತಂಡ ಕೇವಲ 48 ರನ್‌ ಗಳಿಸಿತ್ತು. ಆದರೆ ಬಳಿಕ ಆ್ಯಂಡ್ರೀಸ್‌ ಗೌಸ್‌ ಹಾಗೂ ಆ್ಯರೊನ್‌ ಜಾನ್ಸ್‌ ಮ್ಯಾಜಿಕ್ ಮಾಡಿದರು. 9ನೇ ಓವರ್‌ ಶುರುವಾಗುತ್ತಿದ್ದಂತೆಯೇ ಹೈಸ್ಪೀಡ್‌ ಆಟ ಶುರುವಿಟ್ಟ ಈ ಜೋಡಿ 3ನೇ ವಿಕೆಟ್‌ಗೆ 58 ಎಸೆತಗಳಲ್ಲಿ 131 ರನ್‌ ಚಚ್ಚಿತು. 

ಅದರಲ್ಲೂ ಜೆರೆಮಿ ಜಾರ್ಡನ್‌ ಎಸೆದ 14ನೇ ಓವರಲ್ಲಿ 33 ರನ್‌ ಹರಿದುಬಂತು. ಗೆಲುವಿನ ಸನಿಹದಲ್ಲಿ ಗೌಸ್‌(65) ಔಟಾದರೂ, ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಜಾನ್ಸ್‌ 40 ಎಸೆತಗಳಲ್ಲಿ 4 ಬೌಂಡರಿ, 10 ಸಿಕ್ಸರ್‌ನೊಂದಿಗೆ 94 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ನವ್‌ನೀತ್‌, ನಿಕೋಲಸ್‌ ಅಬ್ಬರ: ಇದಕ್ಕೂ ಮುನ್ನ ಕೆನಡಾ ಕೂಡಾ ಸ್ಫೋಟಕ ಆಟವಾಡಿತು. 

ಆರಂಭಿಕನಾಗಿ ಕಣಕ್ಕಿಳಿದ ಭಾರತೀಯ ಮೂಲದ ನವ್‌ನೀತ್‌ ಧಲಿವಾಲ್‌ 44 ಎಸೆತಗಳಲ್ಲಿ 61 ರನ್‌ ಸಿಡಿಸಿದರೆ, ನಿಕೋಲಸ್‌ ಕಿರ್ಟನ್‌ 31 ಎಸೆತಗಳಲ್ಲಿ 51 ರನ್‌ ಚಚ್ಚಿದರು. ಕೊನೆಯಲ್ಲಿ ಕರ್ನಾಟಕ ಮೂಲದ ಶ್ರೇಯಸ್‌ ಮೋವಾ 32 ರನ್‌ ಸಿಡಿಸಿ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಲುಪಿಸಿದರು.ಸ್ಕೋರ್‌: ಕೆನಡಾ 20 ಓವರಲ್ಲಿ 194/5 (ನವ್‌ನೀತ್‌ 61, ನಿಕೋಲಸ್‌ 51, ಶ್ರೇಯಸ್‌ 32*, ಹರ್ಮೀತ್‌ 1-27), ಅಮೆರಿಕ 17.4 ಓವರಲ್ಲಿ 197/3 (ಜಾನ್ಸ್‌ 94*, ಆ್ಯಂಡ್ರೀಸ್‌ ಗೌಸ್‌ 65, ಡಿಲ್ಲೊನ್‌ ಹೇಲಿಗೆರ್‌ 1-19) ಪಂದ್ಯಶ್ರೇಷ್ಠ: ಆ್ಯರೊನ್‌ ಜಾನ್ಸ್‌.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ವಯೋ ವಂಚನೆ ಪತ್ತೆಗೆ ಖಾಸಗಿ ಸಂಸ್ಥೆ ನೆರವುಪಡೆಯಲಿದೆ ಬಿಸಿಸಿಐ