ನಾಗ್ಪುರ: ಇನ್ನಿಂಗ್ಸ್ ಹಿನ್ನಡೆ ಹೊರತಾಗಿಯೂ ಬಳಿಕ ಪುಟಿದೆದ್ದು ಅಭೂತಪೂರ್ವ ಪ್ರದರ್ಶನ ತೋರಿದ 2 ಬಾರಿ ಚಾಂಪಿಯನ್ ವಿದರ್ಭ, ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ 62 ರನ್ ಗೆಲುವು ಸಾಧಿಸಿದೆ.
ಈ ಮೂಲಕ 2019ರ ಬಳಿಕ ಮತ್ತೊಮ್ಮೆ ಫೈನಲ್‌ಗೆ ಲಗ್ಗೆ ಇಟ್ಟಿದೆ.ಭಾರಿ ರೋಚಕತೆಯಿಂದ ಕೂಡಿದ್ದ ಸೆಮೀಸ್ ಪಂದ್ಯದಲ್ಲಿ ಮಧ್ಯ ಪ್ರದೇಶ ಗೆಲುವಿಗೆ 321 ರನ್ ಗುರಿ ಲಭಿಸಿತ್ತು.
ಆದರೆ ವಿದರ್ಭದ ಮೊನಚು ಬೌಲಿಂಗ್ ದಾಳಿ ಮುಂದೆ ನಿರುತ್ತರವಾದ ಮಧ್ಯಪ್ರದೇಶ 258 ರನ್‌ಗೆ ಸರ್ವಪತನ ಕಂಡಿತು. 4ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದ್ದ 2021-22ರ ಚಾಂಪಿಯನ್ ಮಧ್ಯ ಪ್ರದೇಶಕ್ಕೆ ಕೊನೆ ದಿನವಾದ ಬುಧವಾರ 93 ರನ್ ಗಳಿಸಬೇಕಿತ್ತು.
2017-18, 2018-19ರಲ್ಲಿ ಸತತವಾಗಿ ಚಾಂಪಿಯನ್ ಆಗಿದ್ದ ವಿದರ್ಭಕ್ಕೆ ಪಂದ್ಯ ಗೆಲ್ಲಲು ಬೇಕಿದ್ದದ್ದು 4 ವಿಕೆಟ್. ಆದರೆ ಬಾಲಂಗೋಚಿಗಳನ್ನು ಪೆವಿಲಿಯನ್‌ಗೆ ಅಟ್ಟಲು ವಿದರ್ಭದ ಯಶ್ ಠಾಕೂರ್, ಆದಿತ್ಯ ಠಾಕ್ರೆಗೆ ಹೆಚ್ಚು ಸಮಯ ಬೇಕಾಗಲಿಲ್ಲ.
ಇಬ್ಬರೂ ತಲಾ 2 ವಿಕೆಟ್ ಹಂಚಿಕೊಂಡು ಪಂದ್ಯವನ್ನು ಗೆಲ್ಲಿಸಿದರು.ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ವಿದರ್ಭವವನ್ನು 170ಕ್ಕೆ ನಿಯಂತ್ರಿಸಿದ್ದ ಮಧ್ಯ ಪ್ರದೇಶ, ಬಳಿಕ 252 ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಆದರೆ ಹೋರಾಟ ಬಿಡದ ವಿದರ್ಭ 2ನೇ ಇನ್ನಿಂಗ್ಸ್‌ನಲ್ಲಿ 402 ರನ್ ಕಲೆಹಾಕಿತ್ತು.ಸ್ಕೋರ್: ವಿದರ್ಭ 170 ಹಾಗೂ 402, ಮ.ಪ್ರದೇಶ 252 ಹಾಗೂ 258/6 (ಶರನ್ಸ್ 25, ಅಕ್ಷಯ್ ವಾಖರೆ 3-42, ಯಶ್ 3-60)
ವಿದರ್ಭ vs ಮುಂಬೈ ಮಾ.10ರಿಂದ ಫೈನಲ್
ಟೂರ್ನಿಯ ಫೈನಲ್ ಪಂದ್ಯ ಮಾ.1ರಿಂದ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ವಿದರ್ಭ ಹಾಗೂ 41 ಬಾರಿಯ ಚಾಂಪಿಯನ್ ಮುಂಬೈ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ವಿದರ್ಭ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
02ನೇ ಬಾರಿ: ಒಂದೇ ರಾಜ್ಯದ 2 ತಂಡಗಳು ರಣಜಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು 2ನೇ ಬಾರಿ. ಈ ಮೊದಲು 1970-71ರ ಫೈನಲ್‌ನಲ್ಲಿ ಬಾಂಬೆ-ಮಹಾರಾಷ್ಟ್ರ ತಂಡಗಳು ಸೆಣಸಿದ್ದವು. ಬಾಂಬೆ ಚಾಂಪಿಯನ್ ಆಗಿತ್ತು.