ಜೈಪುರ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ನ ನಿಯಂತ್ರಿಸುತ್ತಿರುವ ಸ್ವತಂತ್ರ ಸಮಿತಿಯು ಆಯೋಜಿಸಿದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತಾರಾ ಅಥ್ಲೀಟ್ ವಿನೇಶ್ ಫೋಗಟ್ ಚಿನ್ನ ಗೆದ್ದಿದ್ದಾರೆ.
55 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ರೈಲ್ವೇಸ್‌ನ 29ರ ವಿನೇಶ್, ಫೈನಲ್‌ನಲ್ಲಿ ಮಧ್ಯಪ್ರದೇಶದ ಜ್ಯೋತಿ ವಿರುದ್ಧ 4-0 ಅಂತರದಲ್ಲಿ ಜಯಗಳಿಸಿದರು.
ವಿನೇಶ್ ಸಾಮಾನ್ಯವಾಗಿ 53 ಕೆ.ಜಿ. ವಿಭಾಗದಲ್ಲಿ ಆಡುತ್ತಿದ್ದರು. ಆದರೆ ಕಳೆದ 15 ತಿಂಗಳಿಂದ ಕುಸ್ತಿಯಿಂದ ದೂರವಿದ್ದ ಅವರು, ಕಡಿಮೆ ಅವಧಿಯಲ್ಲಿ 2 ಕೆ.ಜಿ. ತೂಕ ಇಳಿಸಿಕೊಳ್ಳಬೇಕಿದ್ದ ಕಾರಣ 55 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಿಲಿದ್ದೇನೆ ಎಂದಿರುವ ವಿನೇಶ್, ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗಾಗಿ ಯುವ ಕುಸ್ತಿಪಟು ಅಂತಿಮ್ ಪಂಘಲ್ ಜೊತೆ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ.
ಪ್ಯಾರಾ ಶೂಟಿಂಗ್ ವಿಶ್ವಕಪ್ ಭಾರತದಿಂದ ಸ್ಥಳಾಂತರ?
ನವದೆಹಲಿ: ಚುನಾವಣೆ ವಿಳಂಬ ಹಿನ್ನೆಲೆಯಲ್ಲಿ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದು, ಇದರಿಂದಾಗಿ ಮುಂದಿನ ತಿಂಗಳು ಆಯೋಜನೆಗೊಳ್ಳಬೇಕಿದ್ದ ಪ್ಯಾರಾ ಶೂಟಿಂಗ್ ವಿಶ್ವಕಪ್ ಭಾರತದಿಂದ ಸ್ಥಳಾಂತರಗೊಳ್ಳುವ ಭೀತಿ ಎದುರಾಗಿದೆ.
ವಿಶ್ವಕಪ್ ನವದೆಹಲಿಯಲ್ಲಿ ಮಾ.6ರಿಂದ 15ರ ವರೆಗೆ ನಿಗದಿಯಾಗಿದೆ. 52 ದೇಶಗಳ 500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಆದರೆ ಪ್ಯಾರಾಲಿಂಪಿಕ್ ಸಮಿತಿಯನ್ನೇ ಸಚಿವಾಲಯ ಅಮಾನತುಗೊಳಿಸಿದ್ದರಿಂದ ಕೂಟ ಬೇರೆಡೆ ಸ್ಥಳಾಂತರಗೊಳ್ಳಬಹುದು ಎನ್ನಲಾಗುತ್ತಿದೆ.