ಟೆಸ್ಟ್‌ನಲ್ಲಿ ಕಿಂಗ್‌ ಕೊಹ್ಲಿ ಯುಗಾಂತ್ಯ!

Follow Us

ಸಾರಾಂಶ

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಲ್ಲಿ ಗುರುತಿಸಿಕೊಳ್ಳುವ, ಭಾರತೀಯ ಟೆಸ್ಟ್‌ ತಂಡದ ಅತ್ಯಂತ ಯಶಸ್ವಿ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಮಾದರಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ನವದೆಹಲಿ: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಲ್ಲಿ ಗುರುತಿಸಿಕೊಳ್ಳುವ, ಭಾರತೀಯ ಟೆಸ್ಟ್‌ ತಂಡದ ಅತ್ಯಂತ ಯಶಸ್ವಿ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಮಾದರಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಕೆಲ ದಿನಗಳ ಹಿಂದೆಯೇ ಬಿಸಿಸಿಐಗೆ ತಮ್ಮ ನಿರ್ಧಾರ ತಿಳಿಸಿದ್ದ 36 ವರ್ಷದ ವಿರಾಟ್‌, ಸೋಮವಾರ ನಿವೃತ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ವಿರಾಟ್‌, ‘ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿ ನೀಲಿ ಬ್ಯಾಗಿ ಧರಿಸಿ 14 ವರ್ಷಗಳು ಕಳೆದಿವೆ. ಟೆಸ್ಟ್‌ ಕ್ರಿಕೆಟ್‌ ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಟೆಸ್ಟ್‌ ಕ್ರಿಕೆಟ್‌ ನನ್ನನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಬದುಕಿನುದ್ದಕ್ಕೂ ನೆನಪಿಸಿಕೊಳ್ಳುವ ಹಲವು ಪಾಠಗಳನ್ನು ಕಲಿಸಿಕೊಟ್ಟಿದೆ’ ಎಂದು ಅವರು ತಿಳಿಸಿದ್ದಾರೆ. ಬಿಳಿ ಜೆರ್ಸಿ ಆಡುವುದು ಹೆಚ್ಚು ಆತ್ಮೀಯವಾದದ್ದು. ಸದ್ದಿಲ್ಲದ ಕಠಿಣ ಪರಿಶ್ರಮ, ದೀರ್ಘ ದಿನಗಳು, ಯಾರಿಗೂ ಕಾಣದ ಆದರೆ ಎಂದಿಗೂ ನೆನಪಿನಲ್ಲಿ ಉಳಿಯುವ ಕ್ಷಣಗಳ ನೆನಪು ನನ್ನಲ್ಲಿವೆ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

2011ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್‌ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. 10 ಸಾವಿರ ರನ್‌ ಮೈಲುಗಲ್ಲು ಸಾಧಿಸುವ ಬಯಕೆ ಹೊಂದಿದ್ದ ಕೊಹ್ಲಿ, ಅದಕ್ಕೂ ಮುನ್ನವೇ ನಿವೃತ್ತಿ ಪ್ರಕಟಿಸಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಅದೇ ಸರಣಿಯಲ್ಲಿ ತಮ್ಮ ಕೊನೆ ಪಂದ್ಯವಾಡಿದ್ದರು. ಕಳೆದ ಕೆಲ ವರ್ಷಗಳಿಂದ ಸಾಧಾರಣ ಪ್ರದರ್ಶನ ನೀಡುತ್ತಿದ್ದ ಅವರು, ಟೆಸ್ಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದವು.

2024ರ ಟಿ20 ವಿಶ್ವಕಪ್‌ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ವಿದಾಯ ಹೇಳಿದ್ದ ವಿರಾಟ್‌, ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯಲಿದ್ದಾರೆ. ಜೊತೆಗೆ ಐಪಿಎಲ್‌ನಲ್ಲೂ ಅವರು ಕಣಕ್ಕಿಳಿಯಲಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಿಂದ ವಿದಾಯ ಹೇಳುವುದು ಸುಲಭವಲ್ಲ, ಆದರೆ ಇದು ಸರಿಯಾದ ಸಮಯ. ನಾನು ಆಶಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್‌ ಕ್ರಿಕೆಟ್‌ ನನಗೆ ನೀಡಿದೆ. ಕೃತಜ್ಞತೆ ತುಂಬಿದ ಹೃದಯದೊಂದಿಗೆ ನಿರ್ಗಮಿಸುತ್ತಿದ್ದೇನೆ. ನಾನು ಯಾವಾಗಲೂ ಟೆಸ್ಟ್‌ ವೃತ್ತಿ ಬದುಕನ್ನು ಖುಷಿಯೊಂದಿಗೆ ಸ್ಮರಿಸಿಕೊಳ್ಳುತ್ತೇನೆ.

- ವಿರಾಟ್‌ ಕೊಹ್ಲಿ ಕ್ರಿಕೆಟಿಗ

ವಿರಾಟ್‌ ಟೆಸ್ಟ್‌ ಬದುಕಿನ ಹೈಲೈಟ್ಸ್‌

- 04: ಭಾರತ ಪರ ಟೆಸ್ಟ್‌ನಲ್ಲಿ 4ನೇ ಗರಿಷ್ಠ ಸ್ಕೋರರ್‌.

- 07: ಭಾರತ ಪರ ಟೆಸ್ಟ್‌ನಲ್ಲಿ ಗರಿಷ್ಠ ದ್ವಿಶತಕ(7 ಬಾರಿ) ಸಿಡಿಸಿದ ಆಟಗಾರ.

- 12: ಭಾರತ ಪರ 100+ ಟೆಸ್ಟ್‌ ಆಡಿದ 12 ಆಟಗಾರರಲ್ಲಿ ಕೊಹ್ಲಿ ಒಬ್ಬರು.

- 06: ಟೆಸ್ಟ್‌ನಲ್ಲಿ 7ಕ್ಕಿಂತ ಹೆಚ್ಚು ಬಾರಿ ದ್ವಿಶತಕ ಸಿಡಿಸಿದ ವಿಶ್ವದ 6ನೇ ಬ್ಯಾಟರ್‌.

- 04: ಭಾರತದ ಪರ 30ಕ್ಕೂ ಹೆಚ್ಚು ಟೆಸ್ಟ್‌ ಶತಕ ಬಾರಿಸಿದ 4ನೇ ಆಟಗಾರ.

ಭಾರತದ ಪರ ಟೆಸ್ಟ್‌ನಲ್ಲಿ ಗರಿಷ್ಠ ರನ್‌

ಆಟಗಾರ ಪಂದ್ಯ ಇನ್ನಿಂಗ್ಸ್‌ ರನ್‌ ಗರಿಷ್ಠ ಶತಕ ಅರ್ಧಶತಕ

ಸಚಿನ್‌ 200 329 15921 248* 51 68

ದ್ರಾವಿಡ್‌ 163 284 13265 270 36 63

ಗವಾಸ್ಕರ್‌ 125 214 10122 236* 34 45

ವಿರಾಟ್‌ 123 210 9230 254* 30 31

ಲಕ್ಷ್ಮಣ 134 225 8781 281 17 56

2016-19ರಲ್ಲಿ 16 ಶತಕ:

ಕಳೆದ 5 ವರ್ಷ ಬರೀ 3!

ಕೊಹ್ಲಿ ನಿವೃತ್ತಿ ಘೋಷಿಸಲು ಪ್ರಮುಖ ಕಾರಣ ಟೆಸ್ಟ್‌ನಲ್ಲಿ ಅವರ ಸಾಧಾರಣ ಪ್ರದರ್ಶನ. 2011ರಿಂದ 2015ರ ಅವಧಿಯಲ್ಲಿ 44.02ರ ಸರಾಸರಿಯಲ್ಲಿ 2994 ರನ್‌ ಗಳಿಸಿದ್ದ ಕೊಹ್ಲಿ, 2016-2019ರ ನಡುವೆ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಈ ಅವಧಿಯಲ್ಲಿ ಅವರು 43 ಪಂದ್ಯಗಳಲ್ಲಿ 66.79ರ ಸರಾಸರಿಯಲ್ಲಿ 4208 ರನ್‌ ಕಲೆಹಾಕಿದ್ದರು. ಬರೋಬ್ಬರಿ 16 ಶತಕಗಳನ್ನೂ ಸಿಡಿಸಿದ್ದರು. ಆದರೆ 2020ರ ಬಳಿಕ ಅವರ ಪ್ರದರ್ಶನ ಮಟ್ಟ ಕುಸಿಯಿತು. ಕಳೆದ 5 ವರ್ಷಗಳಲ್ಲಿ 39 ಪಂದ್ಯಗಳನ್ನಾಡಿರುವ ವಿರಾಟ್‌ 3 ಶತಕಗಳನ್ನೊಳಗೊಂಡ 2028 ರನ್‌ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 30.72.

ವಿರಾಟ್‌ ನಿವೃತ್ತಿಗೆ ಕಾರಣಗಳೇನು?

1. ಕಳೆದ 5 ವರ್ಷಗಳಿಂದ ವಿರಾಟ್‌ ಟೆಸ್ಟ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದು ನಿವೃತ್ತಿಗೆ ಪ್ರಮುಖ ಕಾರಣ.

2. 2027ರಲ್ಲಿ ಏಕದಿನ ವಿಶ್ವಕಪ್‌ ಇದೆ. ಕಾರ್ಯದೊತ್ತಡ ತಗ್ಗಿಸಿ, ವಿಶ್ವಕಪ್‌ನತ್ತ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಟೆಸ್ಟ್‌ಗೆ ವಿದಾಯ ಹೇಳಿರಬಹುದು.

3. ಭಾರತ ತಂಡದಲ್ಲಿ ನಾಯಕತ್ವ ಸೇರಿ ಹಲವು ಬದಲಾವಣೆಗಳಾಗುತ್ತಿದೆ. ಹೀಗಾಗಿ ಯುವಕರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ತಂಡ ತೊರೆದಿರಬಹುದು.

ವಿರಾಟ್‌ ಕೊಹ್ಲಿ ಆಟ ಇನ್ನು

ಏಕದಿನ, ಐಪಿಎಲ್‌ನಲ್ಲಿ ಮಾತ್ರ

ಕಳೆದ ವರ್ಷ ಅಂ.ರಾ. ಟಿ20 ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದ ಕೊಹ್ಲಿ, ಇನ್ನು ಏಕದಿನ ಹಾಗೂ ಐಪಿಎಲ್‌ನಲ್ಲಿ ಮಾತ್ರ ಕಾಣಸಿಗಲಿದ್ದಾರೆ. ಅವರು 2027ರ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದ್ದು, ಆ ಬಳಿಕವೇ ಏಕದಿನದಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಇನ್ನೂ 2-3 ವರ್ಷ ಆಡುವ ನಿರೀಕ್ಷೆಯಿದೆ.

ವಿರಾಟ್‌-ರೋಹಿತ್‌: ಆಡಿದ್ದು

ಒಟ್ಟಿಗೇ, ನಿವೃತ್ತಿಯೂ ಒಟ್ಟಿಗೆ

ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಭಾರತ ತಂಡದ ಪ್ರಮುಖ ಆಟಗಾರರು. ಇವರಿಬ್ಬರು ಸುದೀರ್ಘ ಸಮಯದಿಂದ ಒಟ್ಟಿಗೇ ಆಡುತ್ತಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್‌ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ಇಬ್ಬರೂ ಒಟ್ಟಿಗೇ ನಿವೃತ್ತಿ ಘೋಷಿಸಿದ್ದರು. ಸದ್ಯ ಟೆಸ್ಟ್‌ನಿಂದಲೂ ಒಟ್ಟಾಗಿಯೇ ನಿವೃತ್ತಿ ಪ್ರಕಟಿಸಿದ್ದಾರೆ. ರೋಹಿತ್‌ ಮೇ 7ರಂದು ಟೆಸ್ಟ್‌ಗೆ ವಿದಾಯ ಹೇಳಿದ್ದರು.

ಟಿ20 ನಡುವೆ ಟೆಸ್ಟ್‌ನ

ಖ್ಯಾತಿ ಹೆಚ್ಚಿಸಿದ್ದ ಕಿಂಗ್

ಹೊಸ ತಲೆಮಾರಿನ ಜನತೆಗೆ ಟಿ20 ಕ್ರಿಕೆಟ್‌ ಮೇಲೆ ಹೆಚ್ಚಿನ ಪ್ರೀತಿ. ವಿಶ್ವದೆಲ್ಲೆಡೆ ಐಪಿಎಲ್‌ ಸೇರಿದಂತೆ ಟಿ20 ಲೀಗ್‌ಗಳ ಅಬ್ಬರವೂ ಜಾಸ್ತಿಯಾಗುತ್ತಿದೆ. ಇದರ ನಡುವೆಯೂ ಜನರಲ್ಲಿ ಟೆಸ್ಟ್‌ ಕ್ರಿಕೆಟ್‌ ಮೇಲೆ ಒಲವು ಹೆಚ್ಚಿಸಿದ ಖ್ಯಾತಿ ವಿರಾಟ್‌ ಕೊಹ್ಲಿಗೆ ಸಲ್ಲುತ್ತದೆ. ತಮ್ಮ ಹೋರಾಟದ ಮನೋಭಾವ, ಸ್ಟೈಲಿಶ್‌ ಆಟ, ಆಕ್ರಮಣಕಾರಿ ಸಂಭ್ರಮಾಚರಣೆ, ಕೆಣಕುತ್ತಿದ್ದ ಎದುರಾಳಿ ಆಟಗಾರರಿಗೆ ನೀಡುತ್ತಿದ್ದ ಪ್ರತ್ಯುತ್ತರದ ಮೂಲಕವೇ ಕೊಹ್ಲಿ ಎಲ್ಲರ ನೆಚ್ಚಿನ ಕ್ರಿಕೆಟಿಗ ಎನಿಸಿಕೊಂಡಿದ್ದರು.

ಭಾರತದ ಟೆಸ್ಟ್‌ ಕ್ರಿಕೆಟ್‌ನ ದಿಕ್ಕು

ಬದಲಿಸಿದ್ದ ಮಾಂತ್ರಿಕ ನಾಯಕ

ರನ್‌ ಮೆಷಿನ್‌ ಖ್ಯಾತಿಯ ಕೊಹ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ತಮ್ಮ ರನ್‌ ಸಾಧನೆ ಮೂಲಕ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡರೂ, ಟೆಸ್ಟ್‌ನಲ್ಲಿ ಅವರು ವಿಶೇಷ ಕಾರಣಕ್ಕೆ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. 2014-15ರಲ್ಲಿ ಟೆಸ್ಟ್‌ ನಾಯಕನಾಗಿ ನೇಮಕಗೊಂಡ ಕೊಹ್ಲಿ, ಕೆಲ ವರ್ಷಗಳಲ್ಲೇ ಭಾರತೀಯ ಟೆಸ್ಟ್‌ ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿಬಿಟ್ಟರು. 2014ರಿಂದ 2022ರ ವರೆಗಿನ ಅವರ ನಾಯಕತ್ವದ ಅವಧಿಯನ್ನು ಭಾರತೀಯ ಟೆಸ್ಟ್‌ನ ಸ್ವರ್ಣಯುಗ ಎಂದೇ ಕರೆಯಲಾಗುತ್ತದೆ. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ(2018-19) ಗೆದ್ದ ಏಷ್ಯಾದ ಮೊದಲ ನಾಯಕ ಎನಿಸಿಕೊಂಡಿರುವ ಕೊಹ್ಲಿ, 2020-21ರಲ್ಲಿ ಮತ್ತೊಮ್ಮೆ ಭಾರತಕ್ಕೆ ಸರಣಿ ಗೆಲ್ಲಿಸಿಕೊಟ್ಟಿದ್ದರು. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾದಲ್ಲೂ ಭಾರತ ಟೆಸ್ಟ್‌ ಪಂದ್ಯಗಳಲ್ಲಿ ಗೆದ್ದಿತ್ತು.

ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್‌ ಆಡಿದ್ದು, 40ರಲ್ಲಿ ಗೆದ್ದಿದ್ದರೆ, ಕೇವಲ 17 ಪಂದ್ಯಗಳಲ್ಲಿ ಸೋತಿತ್ತು. ಈ ಮೂಲಕ ಭಾರತದ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 60 ಟೆಸ್ಟ್‌ಗಳಲ್ಲಿ 27ರಲ್ಲಿ ಗೆದ್ದಿದ್ದರೆ, ಗಂಗೂಲಿ ಅವಧಿಯಲ್ಲಿ 49 ಟೆಸ್ಟ್‌ನಲ್ಲಿ 21ರಲ್ಲಿ ಜಯಗಳಿಸಿತ್ತು. ಒಟ್ಟಾರೆ ವಿಶ್ವದಲ್ಲೇ 4ನೇ ಗರಿಷ್ಠ ಟೆಸ್ಟ್‌ ಪಂದ್ಯ ಗೆದ್ದ ಖ್ಯಾತಿ ಕೊಹ್ಲಿಗಿದೆ. ದ.ಆಫ್ರಿಕಾ ತಂಡ ಗ್ರೇಮ್‌ ಸ್ಮಿತ್‌ ನಾಯಕತ್ವದಲ್ಲಿ 109 ಟೆಸ್ಟ್‌ನಲ್ಲಿ 53, ಆಸ್ಟ್ರೇಲಿಯಾ ರಿಕಿ ಪಾಂಟಿಂಗ್‌ 77 ಪಂದ್ಯಗಳಲ್ಲಿ 48, ಸ್ಟೀವ್‌ ವಾ 57 ಪಂದ್ಯಗಳಲ್ಲಿ 41ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

ಭಾರತ ಟೆಸ್ಟ್‌ ನಾಯಕರ ಸಾಧನೆ

ಆಟಗಾರ ಪಂದ್ಯ ಗೆಲುವು ಸೋಲು ಡ್ರಾ ಗೆಲುವಿನ ಪ್ರತಿಶತ

ವಿರಾಟ್‌ 69 40 17 11 58.82

ಧೋನಿ 60 27 18 15 45.00

ಗಂಗೂಲಿ 49 21 13 15 42.85

ಅಜರುದ್ದೀನ್‌ 47 14 14 19 29.78

ಗವಾಸ್ಕರ್‌ 47 09 08 30 19.14

ಜಾಗತಿಕ ಟೆಸ್ಟ್‌ ನಾಯಕರ ಸಾಧನೆ

ಆಟಗಾರ ಪಂದ್ಯ ಗೆಲುವು ಸೋಲು ಡ್ರಾ ಗೆಲುವಿನ ಪ್ರತಿಶತ

ಗ್ರೇಮ್‌ ಸ್ಮಿತ್‌ 109 53 29 27 48.62

ರಿಕಿ ಪಾಂಟಿಂಗ್‌ 77 48 16 13 62.33

ಸ್ಟೀವ್‌ ವಾ 57 41 09 07 71.92

ವಿರಾಟ್‌ ಕೊಹ್ಲಿ 68 40 17 11 58.82

ಕ್ಲೈವ್‌ ಲಾಯ್ಡ್‌ 74 36 12 26 48.64

ನಾಯಕರಾಗಿ ವಿರಾಟ್‌ ಕೊಹ್ಲಿ ಪ್ರಮುಖ ಸಾಧನೆ

1. ಭಾರತೀಯ ಟೆಸ್ಟ್‌ ತಂಡದ ಅತ್ಯಂತ ಯಶಸ್ವಿ ನಾಯಕ(40 ಜಯ)

2. ವಿಶ್ವದಲ್ಲೇ ಗರಿಷ್ಠ ಪಂದ್ಯ ಗೆದ್ದ ನಾಯಕರಲ್ಲಿ ಕೊಹ್ಲಿಗೆ 4ನೇ ಸ್ಥಾನ.

3. ತವರಿನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆಡಿದ ಒಂದೂ ಸರಣಿಯಲ್ಲಿ ಭಾರತ ಸೋತಿಲ್ಲ.

4. ಐಸಿಸಿ ದಶಕದ ಟೆಸ್ಟ್‌ ತಂಡಕ್ಕೆ ನಾಯಕನಾಗಿ ಆಯ್ಕೆ(2021)

5. ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾ ಮೊದಲ ನಾಯಕ ವಿರಾಟ್‌.

3 ದಿಗ್ಗಜರ ವೃತ್ತಿಬದುಕಿಗೆ

ಮುಳ್ಳಾದ ಆ 2 ಸರಣಿ!

ಕಳೆದ 6 ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂವರು ದಿಗ್ಗಜ ಕ್ರಿಕೆಟಿಗರು ನಿವೃತ್ತಿ ಪ್ರಕಟಿಸಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಟೆಸ್ಟ್‌ನಿಂದ ನಿವೃತ್ತಿಯಾಗಿದ್ದರೆ, ಆರ್‌.ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂವರ ವೃತ್ತಿ ಬದುಕಿಗೂ ತಿರುವು ನೀಡಿದ್ದು ಕಳೆದ ವರ್ಷಾಂತ್ಯದಲ್ಲಿ ನಡೆದ 2 ಟೆಸ್ಟ್‌ ಸರಣಿ. ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ ತವರಿನಲ್ಲಿ ಕ್ಲೀನ್‌ಸ್ವೀಪ್‌ ಮುಖಭಂಗಕ್ಕೊಳಗಾದ ಕೊಹ್ಲಿ, ರೋಹಿತ್‌ ತಮ್ಮ ಕಳಪೆ ಆಟದಿಂದ ಟೀಕೆಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಇವರಿಬ್ಬರು ಮಿಂಚಲಿಲ್ಲ. ಕೊಹ್ಲಿ ಒಂದು ಶತಕ ಬಾರಿಸಿದ್ದರೂ ಇತರ ಪಂದ್ಯಗಳಲ್ಲಿ ವಿಫಲರಾಗಿದ್ದರು. ಇನ್ನು, ಅಶ್ವಿನ್‌ ಆಸ್ಟ್ರೇಲಿಯಾ ಸರಣಿ ನಡುವೆಯೇ ವಿದಾಯ ಪ್ರಕಟಿಸಿ ತವರಿಗೆ ಮರಳಿದ್ದರು.