ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಜ್ವರ ಜೋರಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಭಾರತ ಜಯ ಸಾಧಿಸಿ ಕಪ್ ಎತ್ತಿ ಹಿಡಿಯಲಿ ಎಂದು ಮಹಿಳಾ ಕ್ರೀಡಾಭಿಮಾನಿಗಳು ಉಡಿ ತುಂಬಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ, ಕೆಲವು ಕಡೆಗಳಲ್ಲಿ ಸ್ಕ್ರೀನ್ ಅಳವಡಿಸಲಾಗಿದೆ. ಮದುವೆ ಮಂಟಪದಲ್ಲೇ ನವ ವಧು,ವರರು ಸೇರಿದಂತೆ ಬಂದ ನೆಂಟರಿಗೂ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು.ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರಿಗೆ ಉಡಿ ತುಂಬಿ, ಆರತಿ ಬೆಳಗಿ ಭಾರತ ತಂಡಕ್ಕೆ ಶುಭ ಹಾರೈಸಲಾಯಿತು. ಕೈಯಲ್ಲಿ ತ್ರಿವರ್ಣ ಧ್ವಜ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹಮ್ಮದ್ ಶಮಿ, ರವೀಂದ್ರ ಜಡೇಜಾ ಅವರ ಭಾವಚಿತ್ರಗಳನ್ನು ಹಿಡಿದು 20ಕ್ಕೂ ಮಹಿಳಾ ಅಭಿಮಾನಿಗಳು ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಕ್ರೀಡಾಭಿಮಾನಿ ಆಯಿಷಾ ಸನದಿ, ನಮ್ಮ ಭಾರತ ಫೈನಲ್ ನಲ್ಲಿ ಗೆಲ್ಲುವಂತೆ ನಾವೆಲ್ಲ ಮಹಿಳೆಯರು ಉಡಿ ತುಂಬಿ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಗೆದ್ದ ಬಳಿಕ ಮಂಡಿಯೂರಿ 11 ಸುತ್ತು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತೇನೆ ಎಂದರು.ಸರಳಾ ಸಾತ್ಪುತೆ ಮಾತನಾಡಿ, ವಿರಾಟ ಕೊಹ್ಲಿ ನಮ್ಮ ನೆಚ್ಚಿನ ಆಟಗಾರ. ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಅಮೋಘ ಪ್ರದರ್ಶನ ಮೂಲಕ ಭಾರತವನ್ನು ಗೆಲ್ಲಿಸುವ ವಿಶ್ವಾಸ ನಮಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಥಣಿ ಪಟ್ಟಣದ ಕೌಲಾಪೂರ ಹಾಗೂ ಮುದ್ದಾಪೂರ ಮದುವೆ ಸಮಾರಂಭದಲ್ಲಿ ನವ ದಂಪತಿಗಳಾದ ನವೀನ್ ಹಾಗೂ ಸ್ನೇಹಾ ಭಾರತ ತಂಡದ ಬ್ಯಾನರ್ ಪ್ರದರ್ಶಿಸಿ ಶುಭ ಕೋರಿದರು, ಅಲ್ಲದೆ ಮದುವೆ ಮಂಟಪದಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.ಫೈನಲ್ ಪಂದ್ಯದ ಸಂಭ್ರಮ ಕಣ್ತುಂಬಿಕೊಳ್ಳಲು ಬೆಳಗಾವಿ ನಗರದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು 7 ಕಡೆಗೆ ದೊಡ್ಡ ದೊಡ್ಡ ಎಲ್ಇಡಿ ಪರದೆ ವ್ಯವಸ್ಥೆ ಮಾಡಿದ್ದರು.ಭಾಗ್ಯನಗರ ಮೊದಲನೇ ಕ್ರಾಸ್‌ನ ದತ್ತಮಂದಿರ ಬಳಿ, ಬ್ಯಾಂಕ್ ಆಫ್ ಇಂಡಿಯಾ ಕಾರ್ನರ್, ಲಕ್ಷ್ಮೀ ನಗರ, ಹಳೆ ಬೆಳಗಾವಿಯ ಶಿಂಧೆ ಮೈದಾನ, ಮಹದ್ವಾ ರಸ್ತೆಯ ಧರ್ಮವೀರ ಸಂಭಾಜಿ ಮೈದಾನ, ಕೋರೆ ಗಲ್ಲಿ ಕ್ರಾಸ್ ನ ಸೂರಜ ಕೋಲ್ಡ್ರಿಂಕ್ಸ ಬಳಿ, ನಾಥ್ ಪೈ ಸರ್ಕಲ್ ಕಾರ್ನರ ಮತ್ತು ಆನಗೋಳದ ಸಾಯಿ ಗಾರ್ಡನ್ ಬಳಿ ಬಹಿರಂರವಾಗಿ ಸಾರ್ವಜನಿಕರು ಒಟ್ಟಿಗೆ ಕುಳಿತು ಪಂದ್ಯ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕೆಂದು ಕ್ರಿಕೆಟ್ ಪ್ರೇಮಿಗಳು ದೇವಸ್ಥಾನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟಿಂಗ್ ಭರಾಟೆಯೂ ಜೋರಾಗಿತ್ತು. ಕ್ಲಬ್, ಹೊಟೇಲ್‌ಗಳಲ್ಲಿ ದೊಡ್ಡ ದೊಡ್ಡ ಸ್ಕ್ರೀನ್ ಹಾಕಲಾಗಿದೆ.ಶಹಾಪುರ ಪ್ರದೇಶದ ಖಡೇಬಜಾರ್ ಹಾಗೂ ನಗರದ ಸರ್ದಾರ್ ಮೈದಾನದಲ್ಲಿ ಸ್ಕ್ರೀನ್ ಅಳವಡಿಸಲಾಗಿತ್ತು. ಸರ್ಕಾರದ ನಿರ್ದೇಶನದಂತೆ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನೇಹರು ಸ್ಟೇಡಿಯಂನಲ್ಲಿ ಸ್ಕ್ರೀನ್ ಅಳವಡಿಸಲಾಗಿತ್ತು. ಆದರೆ ವೀಕ್ಷಕರಿಗೆ ಕುಳಿತುಕೊಳ್ಳಲು ಆಸದ ವ್ಯವಸ್ಥೆ ಮಾಡದಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ತಬ್ಧವಾದ ಮಾರ್ಕೆಟ್ :ವಿಶ್ವಕಪ್ ಅಂತಿಮ ಪಂದ್ಯಾವಳಿ ಹಿನ್ನೆಲೆಯಲ್ಲಿ ನಗರದಲ್ಲಿ ಸದಾಕಾಲ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಪ್ರದೇಶಗಳು ಮಧ್ಯಾಹ್ನದ ಹೊತ್ತಿಗೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ವ್ಯಾಪಾರಸ್ಥರು ಮಧ್ಯಾಹ್ನದ ಹೊತ್ತಿಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯತ್ತ ತೆರಳಿದ್ದರು. ಇದರಿಂದಾಗಿ ಬೆಳಗಾವಿ ಮಾರುಕಟ್ಟೆ ಪ್ರದೇಶಗಳಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.