ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ವೈಭವ ಮರಳಿಸುವುದು ಮತ್ತು ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದು ನಮ್ಮ ಪ್ರಮುಖ ಗುರಿ ಎಂದು ಭಾರತದ ಮಾಜಿ ಕ್ರಿಕೆಟಿಗ, ಕೆಎಸ್‌ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಅವರ ತಂಡ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಹಾಲಿ ಸಮಿತಿ ಅವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ.
ಮುಂದಿನ ಚುನಾವಣೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ವೆಂಕಟೇಶ್ ಪ್ರಸಾದ್, ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಸೇರಿ 16 ಮಂದಿಯ ತಂಡ ಕಣಕ್ಕಿಳಿಯಲಿದೆ. ಇದರ ಪೂರ್ವಭಾವಿಯಾಗಿ ಬುಧವಾರ ನಗರದ ಟೆನಿಸ್ ಕ್ರೀಡಾಂಗಣದಲ್ಲಿ ವೆಂಟಕೇಶ್ ಹಾಗೂ ವಿನಯ್ ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಅಲ್ಲದೆ, ಚುನಾವಣೆಯಲ್ಲಿ ತಮ್ಮ ಸ್ಪರ್ಧೆಗೆ ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಬೆಂಬಲ ಇದೆ ಎಂದು ವೆಂಕಟೇಶ್ ತಿಳಿಸಿದರು.
ಭಾರತದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಕೂಡಾ ಪ್ರಣಾಳಿಕೆ ಬಿಡುಗಡೆಯಲ್ಲಿ ಪಾಲ್ಗೊಂಡು ತಂಡವನ್ನು ಬೆಂಬಲಿಸಿದರು. ಆದರೆ ತಂಡದಲ್ಲಿರುವ ಇತರರು ಯಾರು, ಯಾವ ಹುದ್ದೆಗೆ ಸ್ಪರ್ಧೆ ಎಂಬುದನ್ನು ಬಹಿರಂಗಪಡಿಸಿಲ್ಲ.‘50 ವರ್ಷ ಇತಿಹಾಸವಿರುವ ಕ್ರೀಡಾಂಗಣದಲ್ಲಿ ಕಾಲ್ತುಳಿತದಂತಹ ಘಟನೆ ನಡೆಯಬಾರದಿತ್ತು. ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿಲ್ಲ. ಮಹಾರಾಜ ಟ್ರೋಫಿ ಸ್ಥಳಾಂತರಗೊಂಡಿದೆ. ಮಹಿಳಾ ವಿಶ್ವಕಪ್ ನಡೆಸಲು ಅನುಮತಿ ಸಿಕ್ಕಿಲ್ಲ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಕ್ರೀಡಾಂಗಣದ ವೈಭವ ಮರುಳಿಸುತ್ತೇವೆ’ ಎಂದು ಹೇಳಿದರು. 2010-13ರಲ್ಲಿ ವೆಂಕಟೇಶ್ ಉಪಾಧ್ಯಕ್ಷರಾಗಿದ್ದಾಗ ಅನಿಲ್ ಕುಂಬ್ಳೆ ಅಧ್ಯಕ್ಷ, ಜಾವಗಲ್ ಶ್ರೀನಾಥ್ ಕಾರ್ಯದರ್ಶಿ ಆಗಿದ್ದರು. ಅವರು ಮತ್ತೆ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ್,
‘ದ್ರಾವಿಡ್, ಕುಂಬ್ಳೆ, ಶ್ರೀನಾಥ್ ಸ್ಪರ್ಧಿಸುವುದು ನಿರ್ಧಾರವಾಗಿಲ್ಲ. ಆದರೆ ಖಂಡಿತಾ ಅವರ ಬೆಂಬಲ ನಮ್ಮ ತಂಡಕ್ಕಿದೆ’ ಎಂದರು.ಕ್ರೀಡಾಂಗಣದ ಆಸನ ಸಾಮರ್ಥ್ಯ ಹೆಚ್ಚಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಕ್ರೀಡಾಂಗಣದ ಸಾಮರ್ಥ್ಯವನ್ನು 80 ಸಾವಿರಕ್ಕೆ ಹೆಚ್ಚಿಸಲು ಆಗಲ್ಲ. ಆದರೆ ಖಂಡಿತಾ 15 ಸಾವಿರದಷ್ಟು ಹೆಚ್ಚಿಸಿ, ಒಟ್ಟು 50 ಸಾವಿರ ಆಸನಗಳನ್ನು ಮಾಡಬಹುದು. ಅದಕ್ಕಾಗಿ ಪ್ರಯತ್ನಿಸಲಿದೆ’ ಎಂದರು.
ಪಂದ್ಯಗಳ ಟಿಕೆಟ್ ಮಾರಾಟವನ್ನು ಡಿಜಿಟಲೀಕರಣ ಮಾಡಿ ಕಾಳಸಂತೆಯ ಮಾರಾಟ ತಪ್ಪಿಸುವುದು, ಕ್ರೀಡಾಂಗಣದ ಪೆವಿಲಿಯನ್ ಎಂಡ್‌ಗೆ ಅನಿಲ್ ಕುಂಬ್ಳೆ, ನಾರ್ದರ್ನ್ ಎಂಡ್‌ಗೆ ದ್ರಾವಿಡ್ ಹೆಸರು ಮರುನಾಮಕರಣ ಮಾಡುವುದು, ದಿಗ್ಗಜ ಆಟಗಾರ್ತಿ ಶಾಂತಾ ರಂಗಸ್ವಾಮಿ ಹೆಸರನ್ನು ಕ್ರೀಡಾಂಗಣದ ಸ್ಟ್ಯಾಂಡ್‌ಗೆ ಇಡುವುದು, ತಜ್ಞರ ಶಿಫಾರಸುಗಳ ಆಧಾರದ ಮೇಲೆ ಕ್ರೀಡಾಂಗಣದ ಸುರಕ್ಷತೆಗೆ ಸಮಗ್ರ ಲೆಕ್ಕಪರಿಶೋಧನೆ, ಮೈಸೂರಿನಲ್ಲಿ ವಿಶ್ವದರ್ಜೆಯ ಕ್ರೀಡಾಂಗಣ ನಿರ್ಮಾಣ, ಹಾಸನ ದಾವಣೆಗೆರೆ, ರಾಯಚೂರು, ಗದಗದಲ್ಲಿ ಪೆವಿಲಿಯನ್‌ನೊಂದಿಗೆ ಹೊಸ ಟರ್ಫ್ ಮೈದಾನ, ಆಲೂರು, ಬೆಳಗಾವಿ, ಹುಬ್ಬಳ್ಳಿ ಕ್ರೀಡಾಂಗಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ಸೇರಿ ಹಲವು ಘೋಷಣೆಗಳು ಪ್ರಣಾಳಿಕೆಯಲ್ಲಿವೆ.
‘ಸ್ಮಾರ್ಟ್ ಕ್ರೀಡಾಂಗಣ’ ವೆಂಕಟೇಶ್ ಟೀಂ ಗುರಿ
ಚಿನ್ನಸ್ವಾಮಿಯನ್ನು ಸ್ಮಾರ್ಟ್ ಕ್ರೀಡಾಂಗಣ ಮಾಡುವುದು ವೆಂಕಟೇಶ್ ಪ್ರಸಾದ್ ತಂಡದ ಗುರಿ. ಡಿಜಿಟಲ್ ಟಿಕೆಟಿಂಗ್, ಜನಸಂದಣಿ ನಿರ್ವಹಣೆ ಮತ್ತು ಅಭಿಮಾನಿಗಳಿಗೆ ಅಭೂತಪೂರ್ವ ಅನುಭವ ನೀಡುವ ಸ್ಮಾರ್ಟ್ ಕ್ರೀಡಾಂಗಣ ಅಭಿವೃದ್ಧಿಪಡಿಸುವುದು, ಲಾರ್ಡ್ಸ್ ರೀತಿ ಮ್ಯೂಸಿಯಂ, ಡಿಜಿಟಲ್ ಆರ್ಕೈವ್ ಮತ್ತು ಐತಿಹಾಸಿಕ ಕ್ಷಣಗಳನ್ನು ಪ್ರಸ್ತುತಪಡಿಸುವ ಹಾಗೂ ಕರ್ನಾಟಕದ ಶ್ರೀಮಂತ ಕ್ರಿಕೆಟ್ ಪರಂಪರೆಯನ್ನು ಪ್ರದರ್ಶಿಸುವ ವಿಶ್ವ ದರ್ಜೆಯ ಕ್ರಿಕೆಟ್ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಗುರಿ ಇದೆ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಚುನಾವಣೆ ಹೇಗೆ ನಡೆಯುತ್ತೆ?
ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಕ್ಲಬ್ ಸದಸ್ಯರು, ಇತರ ಸದಸ್ಯರು ಸೇರಿ ಒಟ್ಟು 16 ಸ್ಥಾನಗಳಿಗೆ ಅಕ್ಟೋಬರ್-ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಕೆಎಸ್‌ಸಿಎನಲ್ಲಿ ಚುನಾವಣಾ ಸದಸ್ಯರು, ಚುನಾವಣೇತರ ಸದಸ್ಯರಿದ್ದಾರೆ. ಈ ಪೈಕಿ 1900ರಷ್ಟು ಇರುವ ಚುನಾವಣಾ ಸದಸ್ಯರು ಮತ ಚಲಾಯಿಸಿ, 16 ಮಂದಿಯನ್ನು ಆಯ್ಕೆ ಮಾಡಲಿದ್ದಾರೆ. ಸಮಿತಿಯ ಅಧಿಕಾರಾವಧಿ 3 ವರ್ಷ ಇರಲಿದೆ.
ಮರು ಸ್ಪರ್ಧೆ ನಿರ್ಧರಿಸಿಲ್ಲ: ಹಾಲಿ ಅಧ್ಯಕ್ಷ ರಘುರಾಮ್
ಕೆಎಸ್‌ಸಿಎಗೆ ಈಗ ರಘುರಾಮ್ ಭಟ್ ಅಧ್ಯಕ್ಷರಾಗಿದ್ದು, ಮುಂದಿನ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಕನ್ನಡಪ್ರಭ ಪತ್ರಿಕೆ ಜೊತೆ ಮಾತನಾಡಿರುವ ಅವರು, ‘ಚುನಾವಣೆಗೆ ಇನ್ನೂ ಸಮಯವಿದೆ. ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅದರ ಬಗ್ಗೆ ನಮ್ಮ ತಂಡದ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದಿದ್ದಾರೆ.
ಪ್ರಣಾಳಿಕೆಯಲ್ಲಿ 10 ಗ್ಯಾರಂಟಿ
1. ಚಿನ್ನಸ್ವಾಮಿಯಲ್ಲಿ ಹಿಂದಿನಂತೆ ಅಂ.ರಾ. ಪಂದ್ಯಗಳ ಆಯೋಜನೆ
2. ಡಿಜಿಟಲ್ ಟಿಕೆಟಿಂಗ್, ಜನಸಂದಣಿ ನಿರ್ವಹಣೆ, ಸ್ಮಾರ್ಟ್ ಕ್ರೀಡಾಂಗಣ ಅಭಿವೃದ್ಧಿ.
3. ಆಸನ ಸಾಮರ್ಥ್ಯ 35000ದಿಂದ 50 ಸಾವಿರಕ್ಕೆ ಹೆಚ್ಚಳ.
4. ಇಂಗ್ಲೆಂಡ್‌ನ ಲಾರ್ಡ್ಸ್ ಮಾದರಿಯಲ್ಲಿ ಮ್ಯೂಸಿಯಂ ನಿರ್ಮಾಣ.
5. ಹಿಂದುಳಿದ ಕ್ರಿಕೆಟಿಗರಿಗೆ ವಿದ್ಯಾರ್ಥಿ ವೇತನ, ಯುವ ಕ್ರಿಕೆಟಿಗರಿಗೆ ಕೌನ್ಸೆಲಿಂಗ್ ಸೆಲ್
6. ಮೈಸೂರಿನಲ್ಲಿ ವಿಶ್ವದರ್ಜೆಯ ಕ್ರೀಡಾಂಗಣ, ರಾಜ್ಯಾದ್ಯಂತ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿ.
7. ಕ್ರೀಡಾಂಗಣದ ಸ್ಟ್ಯಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರು ನಾಮಕರಣ.
8. ಪುರುಷರಂತೆ ಮಹಿಳಾ ಕ್ರಿಕೆಟಿಗರಿಗೂ ಸಮಾನ ಪಿಂಚಣಿ.
9. ಕಾಲ್ತುಳಿತಕ್ಕೆ ಸಂಬಂಧಿಸಿದ ತನಿಖಾ ವರದಿ ಪರಿಶೀಲಿಸಿ, ಅಗತ್ಯ ಪರಿಹಾರ ಕ್ರಮ.
10. ರಾಜ್ಯದೆಲ್ಲಡೆ ಇರುವ ಕೆಎಸ್‌ಸಿಎ ಭೂಮಿಯ ಸಮಗ್ರ ಬಳಕೆ.