3ನೇ ಏಕದಿನ ಪಂದ್ಯ: 27 ವರ್ಷಗಳ ಬಳಿಕ ಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ! 110 ರನ್‌ ಹೀನಾಯ ಸೋಲು

KannadaprabhaNewsNetwork | Updated : Aug 08 2024, 04:20 AM IST

ಸಾರಾಂಶ

3ನೇ ಏಕದಿನ ಪಂದ್ಯ: ಟೀಂ ಇಂಡಿಯಾಕ್ಕೆ 110 ರನ್‌ ಹೀನಾಯ ಸೋಲು. ಶ್ರೀಲಂಕಾಕ್ಕೆ 2-0ರಲ್ಲಿ ಸರಣಿ. ಲಂಕಾ 248/7. ಭಾರತ 138ಕ್ಕೆ ಆಲೌಟ್‌. ಗಂಭೀರ್‌ ಕೋಚ್‌ ಹುದ್ದೆಯ ಮೊದಲ ಸರಣಿಯಲ್ಲೇ ಸೋಲು

ಕೊಲಂಬೊ: ಗೌತಮ್‌ ಗಂಭೀರ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ ಮೊದಲ ಸರಣಿಯಲ್ಲೇ ಭಾರತ ತಂಡ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಬುಧವಾರ ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭಾರತ 110 ರನ್‌ಗಳಿಂದ ಪರಾಭವಗೊಂಡಿತು.

 ಇದರೊಂದಿಗೆ ಲಂಕಾ 2-0 ಅಂತರದಲ್ಲಿ ಸರಣಿ ಕೈ ವಶಪಡಿಸಿಕೊಂಡಿತು. ಭಾರತ 1997ರ ಬಳಿಕ ಲಂಕಾ ವಿರುದ್ಧ ಮೊದಲ ಬಾರಿ ಏಕದಿನ ಸರಣಿಯಲ್ಲಿ ಸೋಲನುಭವಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ 7 ವಿಕೆಟ್‌ಗೆ 248 ರನ್ ಕಲೆಹಾಕಿತು. ಅಗ್ರ-3 ಬ್ಯಾಟರ್‌ಗಳು ತಂಡಕ್ಕೆ ಆಸರೆಯಾದರು. ಪಥುಂ ನಿಸ್ಸಾಂಕ 45 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಆವಿಷ್ಕಾ ಫೆರ್ನಾಂಡೊ (96) ಶತಕದ ಅಂಚಿನಲ್ಲಿ ಎಡವಿದರು. ಕುಸಾಲ್‌ ಮೆಂಡಿಸ್‌ 59 ರನ್ ಗಳಿಸಿದರು. ಭಾರತದ ಪರ ರಿಯಾನ್‌ ಪರ 3 ವಿಕೆಟ್‌ ಪಡೆದರು.

ಸಾಧಾರಣ ಗುರಿ ಪಡೆದರೂ ಮತ್ತೆ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ ಭಾರತ, 26.1 ಓವರ್‌ಗಳಲ್ಲಿ 138ಕ್ಕೆ ಆಲೌಟಾಯಿತು. ನಾಯಕ ರೋಹಿತ್‌ ಶರ್ಮಾ(20 ಎಸೆತಗಳಲ್ಲಿ 35) ಮತ್ತೆ ಸ್ಫೋಟಕ ಆರಂಭ ಒದಗಿಸಿದರೂ, ಇತರರು ಸ್ಪಿನ್ನರ್‌ಗಳ ಎದುರು ತಲೆಬಾಗಿ ಪೆವಿಲಿಯನ್‌ ಪರೇಡ್‌ ನಡೆಸಿದರು. 

ಕೊಹ್ಲಿ(20), ವಾಷಿಂಗ್ಟನ್‌ ಸುಂದರ್‌(30), ರಿಯಾನ್‌ ಪರಾಗ್‌(15) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ದುನಿತ್‌ ವೆಲ್ಲಲಗೆ 5 ವಿಕೆಟ್‌ ಕಬಳಿಸಿದರು.ಸ್ಕೋರ್‌: ಶ್ರೀಲಂಕಾ 50 ಓವರಲ್ಲಿ 248/7 (ಆವಿಷ್ಕಾ 96, ಕುಸಾಲ್‌ 59, ರಿಯಾನ್‌ 3-54), ಭಾರತ 26.1 ಓವರ್‌ಗಳಲ್ಲಿ 138/10 (ರೋಹಿತ್ 35, ದುನಿತ್‌ 5-27, ವ್ಯಾಂಡರ್ಸೆ 2-34)ಪಂದ್ಯಶ್ರೇಷ್ಠ: ಆವಿಷ್ಕಾ ಫೆರ್ನಾಂಡೊ

ಸರಣಿ ಶ್ರೇಷ್ಠ: ದುನಿತ್‌ ವೆಲ್ಲಲಗೆ

27 ವಿಕೆಟ್‌

ಭಾರತ ಈ ಸರಣಿಯಲ್ಲಿ ಲಂಕಾ ಸ್ಪಿನ್ನರ್‌ಗಳ ವಿರುದ್ಧ 27 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಯಾವುದೇ ತಂಡದ ಪೈಕಿ ಗರಿಷ್ಠ.

13 ಸರಣಿಯಲ್ಲಿ ಸೋಲು ಕಂಡಿರಲಿಲ್ಲ ಭಾರತ!

ಭಾರತ ವಿರುದ್ಧ ಲಂಕಾ 27 ವರ್ಷ ಬಳಿಕ ಏಕದಿನ ಸರಣಿ ಗೆದ್ದಿದೆ. 1997ರ ಬಳಿಕ ಉಭಯ ತಂಡಗಳ ನಡುವೆ ಒಟ್ಟು 13 ಏಕದಿನ ಸರಣಿಗಳು ನಡೆದಿದ್ದು. ಅದರಲ್ಲಿ 11ರಲ್ಲಿ ಭಾರತ ಗೆದ್ದರೆ, 2 ಸರಣಿಗಳು ಡ್ರಾಗೊಂಡಿದ್ದವು. ಇದು ಗೌತಮ್‌ ಗಂಭೀರ್‌ಗೆ ಕೋಚ್‌ ಆದ ಮೇಲೆ ಎದುರಾದ ಮೊದಲ ಏಕದಿನ ಸರಣಿ ಆಗಿತ್ತು.

Share this article