ಇಂದೋರ್: ‘ಸೋತುಬಿಟ್ಟರೆ ಎನ್ನುವ ಭಯ’ದಿಂದ ಆಡಿದರೆ ಕೊನೆಗೆ ಎದುರಾಗೋದು ಸೋಲೇ. ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಭಾರತ ತಂಡಕ್ಕೆ ಆಗಿದ್ದು ಇದೇ. ದೊಡ್ಡ ಗುರಿಯನ್ನು ಆತ್ಮವಿಶ್ವಾಸದಿಂದ ಬೆನ್ನತ್ತುತ್ತಿದ್ದ ಭಾರತ, ಗೆಲುವಿನ ಹತ್ತಿರಕ್ಕೆ ಬಂದಾಗ ಅನಗತ್ಯವಾಗಿ ಗಾಬರಿಗೊಂಡು 4 ರನ್‌ಗಳ ವೀರೋಚಿತ ಸೋಲು ಅನುಭವಿಸಿತು. ಈ ಫಲಿತಾಂಶದೊಂದಿಗೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದರೆ, ಭಾರತ ಬಾಕಿ ಇರುವ 2 ಪಂದ್ಯಗಳಲ್ಲಿ ‘ಮಾಡು ಇಲ್ಲವೇ ಮಡಿ’ ಸ್ಥಿತಿ ತಂದುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಹೆದರ್ ನೈಟ್‌ರ ಅಮೋಘ ಶತಕ (91 ಎಸೆತದಲ್ಲಿ 109 ರನ್, 15 ಬೌಂಡರಿ, 1 ಸಿಕ್ಸರ್)ದ ನೆರವಿನಿಂದ 50 ಓವರಲ್ಲಿ 8 ವಿಕೆಟ್‌ಗೆ 288 ರನ್ ಕಲೆಹಾಕಿತು.
ಹೋಲ್ಕರ್ ಕ್ರೀಡಾಂಗಣದ ಸ್ಪರ್ಧಾತ್ಮಕ ಪಿಚ್‌ನಲ್ಲಿ ದೊಡ್ಡ ಗುರಿ ಬೆನ್ನತ್ತಲು ಇಳಿದ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಪ್ರತಿಕಾ ರಾವಲ್ 6 ರನ್ ಗಳಿಸಿ ಔಟಾದರು. ಆದರೆ ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ಕೌರ್ 3ನೇ ವಿಕೆಟ್‌ಗೆ 125 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಸಾಗಿಸಿದರು.
70 ಎಸೆತದಲ್ಲಿ 70 ರನ್ ಗಳಿಸಿ ಹರ್ಮನ್ ಔಟಾದ ಬಳಿಕವೂ ಸ್ಮೃತಿ ಕ್ರೀಸ್‌ನಲ್ಲಿ ಮುಂದುವರಿದು ತಂಡದ ಜಯದ ಆಸೆಯನ್ನು ಜೀವಂತವಾಗಿರಿಸಿದ್ದರು. ಉಪನಾಯಕಿಗೆ ದೀಪ್ತಿ ಶರ್ಮಾ ಉತ್ತಮ ಬೆಂಬಲ ನೀಡಿದರು. ಇವರಿಬ್ಬರ ಜೊತೆಯಾಟ ಚಾಲ್ತಿಯಲ್ಲಿ ಇರುವ ವರೆಗೂ ಭಾರತಕ್ಕೆ ಭಯವಿರಲಿಲ್ಲ. 94 ಎಸೆತದಲ್ಲಿ 88 ರನ್ ಗಳಿಸಿ ಸ್ಮೃತಿ ಔಟಾಗುತ್ತಿದ್ದಂತೆ ಭಾರತದ ಪಾಳಯದಲ್ಲಿ ಸೋಲುವ ಭಯ ಶುರುವಾಯಿತು.
ಸ್ಮೃತಿ ಔಟಾದಾಗ ಗೆಲ್ಲಲು 52 ಎಸೆತದಲ್ಲಿ 55 ರನ್ ಬೇಕಿತ್ತು. ಕೈಯಲ್ಲಿ ಇನ್ನೂ 6 ವಿಕೆಟ್ ಇತ್ತು. ರನ್‌ರೇಟ್ ಒತ್ತಡವಿರಲಿಲ್ಲ. ಆದರೆ ರಿಚಾ ಘೋಷ್ 8, ದೀಪ್ತಿ ಶರ್ಮಾ 50 ರನ್ ಗಳಿಸಿ ವಿಕೆಟ್ ಕಳೆದುಕೊಂಡು ಭಾರತದ ಡಗೌಟ್‌ನಲ್ಲಿ ಮೌನ ಆವರಿಸುವಂತೆ ಮಾಡಿದರು. ಅಮನ್‌ಜೋತ್ ಹಾಗೂ ಸ್ನೇಹ ರಾಣಾ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಭಾರತ 284 ರನ್ ಗಳಿಸಿ, 4 ರನ್ ಸೋಲಿಗೆ ಶರಣಾಯಿತು.
ಕೊನೆಯ 2 ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಎದುರಾಗಲಿದ್ದು, ಎರಡೂ ಪಂದ್ಯಗಳನ್ನು ಭಾರತ ಗೆದ್ದರಷ್ಟೇ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತ ಸೆಮೀಸ್ ಪ್ರವೇಶಿಸಿದರೆ ಅಲ್ಲಿ ಆಸ್ಟ್ರೇಲಿಯಾ ಎದುರಾಗುವ ಸಾಧ್ಯತೆಯೇ ಹೆಚ್ಚು.
ಸ್ಕೋರ್: ಇಂಗ್ಲೆಂಡ್ 50 ಓವರಲ್ಲಿ 288/8 (ನೈಟ್ 109, ಏಮಿ 56, ದೀಪ್ತಿ 4-51), ಭಾರತ 50 ಓವರಲ್ಲಿ 284/6 (ಸ್ಮೃತಿ 88, ಹರ್ಮನ್‌ಪ್ರೀತ್ 70, ದೀಪ್ತಿ 50, ನಥಾಲಿ 2-47)