ಮಹಿಳಾ ವಿಶ್ವಕಪ್‌: ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿರುವ ಭಾರತಕ್ಕೆ ದಕ್ಷಿಣ ಆಫ್ರಿಕಾ ಚಾಲೆಂಜ್‌

KannadaprabhaNewsNetwork |  
Published : Oct 09, 2025, 02:00 AM IST
ಭಾರತ-ಆಫ್ರಿಕಾ | Kannada Prabha

ಸಾರಾಂಶ

ಲಾರಾ ವೊಲ್ವಾರ್ಟ್‌ ನಾಯಕತ್ವದಲ್ಲಿ ಆಡುತ್ತಿರುವ ಆಫ್ರಿಕಾ ತಂಡ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳಿಂದ ಪರಾಭವಗೊಂಡಿತ್ತು.

ವಿಶಾಖಪಟ್ಟಣಂ: ಈ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ತಂಡ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದು, ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.ಭಾರತ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ, 2ನೇ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿದೆ. ಆದರೆ ತಂಡದ ತಾರಾ ಬ್ಯಾಟರ್‌ಗಳಾದ ಸ್ಮೃತಿ ಮಂಧನಾ, ನಾಯಕಿ ಹರ್ಮನ್‌ಪ್ರೀತ್‌, ಜೆಮಿಮಾ ರೋಡ್ರಿಗ್ಸ್‌ ವಿಫಲವಾಗಿದ್ದರು. ಆರಂಭಿಕ ಕುಸಿತ ಕಂಡಿದ್ದ ತಂಡವನ್ನು ಹರ್ಲಿನ್‌ ಡಿಯೋಲ್, ಅಮನ್‌ಜೋತ್‌, ರಿಚಾ ಘೋಚ್‌, ದೀಪ್ತಿ ಶರ್ಮಾ ಮೇಲೆತ್ತಿದ್ದರು. ತಂಡದ ಬ್ಯಾಟಿಂಗ್ ವಿಭಾಗದ ಸಮಸ್ಯೆ ದ.ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಎದುರಾಗದಂತೆ ನೋಡಬೇಕಿದೆ. ಬೌಲಿಂಗ್‌ನಲ್ಲಿ ದೀಪ್ತಿ, ಸ್ನೇಹಾ ಹಾಗೂ ವೇಗಿ ಕ್ರಾಂತಿ ಗೌಡ್‌ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.ಮತ್ತೊಂದೆಡೆ ಲಾರಾ ವೊಲ್ವಾರ್ಟ್‌ ನಾಯಕತ್ವದಲ್ಲಿ ಆಡುತ್ತಿರುವ ಆಫ್ರಿಕಾ ತಂಡ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಆದರೆ ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದು, ಭಾರತವನ್ನು ಅದರದೇ ತವರಿನಲ್ಲಿ ಸೋಲಿಸಲು ಎದುರು ನೋಡುತ್ತಿದೆ.ಬೆಥ್ ಮೂನಿ ಹೋರಾಟ: ಪಾಕ್ ಮಣಿಸಿದ ಆಸೀಸ್

ಕೊಲಂಬೊ: ಬೆಥ್‌ ಮೂನಿ ಹೋರಾಟದ ಶತಕ, ಅಲಾನ ಕಿಂಗ್‌ ಭರ್ಜರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಬುಧವಾರ ಪಾಕಿಸ್ತಾನ ವಿರುದ್ಧ 107 ರನ್‌ ಭರ್ಜರಿ ಗೆಲುವು ಸಾಧಿಸಿದೆ. ತಂಡಕ್ಕಿದು 2ನೇ ಜಯ. ಪಾಕ್‌ ಹ್ಯಾಟ್ರಿಕ್‌ ಸೋಲುಂಡಿತು.ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 9 ವಿಕೆಟ್‌ಗೆ 221 ರನ್‌ ಗಳಿಸಿತು. 76 ರನ್‌ಗೆ 7, 115 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಮೂನಿ 114 ಎಸೆತಕ್ಕೆ 109, ಅಲಾನ 49 ಎಸೆತಕ್ಕೆ ಔಟಾಗದೆ 51 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಈ ಜೋಡಿ 9ನೇ ವಿಕೆಟ್‌ಗೆ 106 ರನ್‌ ಸೇರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್‌ 36.3 ಓವರ್‌ಗಳಲ್ಲಿ 114 ರನ್‌ಗೆ ಆಲೌಟಾಯಿತು.

PREV

Recommended Stories

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಭಾರತದ ಎರಡನೇ ಟೆಸ್ಟ್‌?
ಬಾಂಗ್ಲಾದೇಶ ವಿರುದ್ಧ ಒದ್ದಾಡಿ ಗೆಲುವು ಸಾಧಿಸಿದ ಇಂಗ್ಲೆಂಡ್‌!