ನವದೆಹಲಿ: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬ್ಯಾಟಿಂಗ್ ಸ್ನೇಹಿ ಪಿಚ್ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
ಅ.10ರಿಂದ ನವದೆಹಲಿಯಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಬಳಸಲಾಗುವ ಕಪ್ಪು ಮಣ್ಣಿನ ಪಿಚ್‌ನಲ್ಲಿ ಅಲ್ಲಲ್ಲಿ ಹುಲ್ಲು ಬೆಳೆದಿದ್ದು, ಕೆಲವೆಡೆ ಮಣ್ಣು ಗೋಚರಿಸುತ್ತಿದೆ. ಇದು ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು, ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಆದರೆ, ಕ್ರಮೇಣ ಪಿಚ್ ಒಣಗುವುದರಿಂದ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ಸಾಧಿಸುವ ಸಾಧ್ಯತೆಯೂ ಇದೆ.
ಅಹಮದಾಬಾದ್‌ನಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಎರಡೂವರೆ ದಿನಗಳಲ್ಲೇ ಕೊನೆಗೊಂಡಿತ್ತು. ಹುಲ್ಲು ಬೆಳೆದಿದ್ದ ಕೆಂಪು ಮಣ್ಣಿನ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್ ಕಂಡುಬಂದಿದ್ದು, ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಮೊದಲ ದಿನವೇ ಮಾರಕ ದಾಳಿ ನಡೆಸಿದ್ದರು. ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 140 ರನ್‌ಗಳ ಅಂತರದಲ್ಲಿ ಬೃಹತ್ ಗೆಲುವು ಸಾಧಿಸಿತ್ತು. ಸದ್ಯ 2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆಯಲ್ಲಿದೆ.